ಕ್ಷೇತ್ರವೋ ಜೀವವೋ
ಇಳೆಯ ಪಾವಿತ್ರ್ಯತೆಯ ಪ್ರಶ್ನೆ
ಮ್ಲಾನವದನ ತಾಯಿಯ
ಕಣ್ಣಹನಿ ತೆರೆದ ಕನ್ನಡಿಯಂತಿತ್ತು
ಏಕೆ ತಾಯೇ ಖಿನ್ನಳಾದೆ ?
ಮತ್ತೊಮ್ಮೆ ಪ್ರಶ್ನೆ ಮಾಡಿದೆ !
ಏನ ಹೇಳಲಿ ಮಗೂ,,,,,
ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನ
ಎನ್ನೊಡಲ ಬಗೆದಿರುವೆಯಾ ಕಂದ ?
ಮರು ಪ್ರಶ್ನೆಗೆ ಅವಾಕ್ಕಾದೆ
ಹೇಗೆ ? ಪೊರೆವ ಒಡಲನು
ಬಗೆವುದೇ ? ಪಾಪಿಷ್ಟನಾಗಲೊಲ್ಲೆ !
ಅಯ್ಯೋ ಮರುಳೇ
ನೀ ಯಾವ ಲೋಕದವನು ?
ಭವಿತವ್ಯದ ಕವಳ ಬರಿದಾಗಿದೆ
ಯಾರದೋ ಪಾಲಾಗಿದೆ
ಹಸಿರು ಕೆಂಪಾಗಿ ಕೆಸರು ಕಪ್ಪಾಗಿ
ಬಸಿರೆಲ್ಲವೂ ಕಸದ ಕುಪ್ಪೆಗಳಾಗಿವೆ
ಕಾಣದಾದೆಯಾ ?
ಬಾನ ಚುಂಬಿಸುವ ಇಮಾರತು
ಪಾತಾಳ ಕೂಪದ ಭಂಡಾರ ಕಾಣು
ಬಂಡೆಗಳ ಧೂಳು ಹಸಿರೆಲೆಗಳ ಭಸ್ಮ
ಮೇರು ಮಲೆಯ ಬಯಲಿನಲಿ
ನರ್ತಿಸುವುದು ಜಲಜೆಯರಲ್ಲವೋ
ದಾಯಾದಿ ಹಣದ ದಿಬ್ಬಣಗಳು
ಕಾಣದಾದೆಯಾ ಮರುಳೇ ?
ಹೊಸಿಲು ದಾಟಿ ಬಾ ಕಂದ
ಉದರದಲಿ ಏನೆಲ್ಲಾ ಅಡಗಿದೆ
ಛಿದ್ರ ದೇಹ ಸೀಳಿದ ಗರ್ಭ
ಹೊಸಕಿದ, ಹೆಣ್ಣು ಭ್ರೂಣಗಳು
ಅಕಾಲ ಮರ್ತ್ಯದ ರುದ್ರ ಲೋಕ
ಎಲ್ಲ ನಿನ್ನ ಬಾಂಧವರೇ
ತಾಯಿ ಮಗಳು ಸೋದರಿ
ಕಾಣಬಲ್ಲೆಯಾ ಮಗೂ ?
ನಾ ಜೀರ್ಣಿಸಿದ ಜೀವಗಳಲ್ಲ
ಪೊರೆದವಳು ಕರೆವೆನೇ ?
ಆ ಗೋಪುರ ಮಿನಾರುಗಳ
ಅಂಗಳದಲಿ ಮರ್ತ್ಯದ ಸರದಾರರ
ಜೀವದ ದಲ್ಲಾಳಿಗಳ
ಕೇಕೆಯ ಸದ್ದು ಕೇಳಿಸಿತೇ ?
ನಾನೂ ಇಣುಕಲಾರೆ !
ಮನದ ದರ್ಪಣವ ನೋಡು
ಎದೆಯ ಕದವನು ತೆರೆ
ಸ್ಥಾವರ ಜಂಗಮ ಸಂಗಮದಲಿ
ವಿಶ್ವಪಥ ಕವಲೊಡೆದಿದೆ
ಮನುಜಮತದ ತೊರೆಗಳಲಿ
ವಿಷದಲೆಗಳ ಛಾಯೆಯಿದೆ !
ಕ್ಷೇತ್ರವೋ ಜೀವವೋ
ಮಣ್ಣ ಕಣಕಣಗಳಲಿ ಹರಿವ
ಪ್ರಕೃತಿಯನೇ ಕೇಳು
ಚಿರನಿದ್ರೆಗೆ ಜಾರುವೆ
ನೆಮ್ಮದಿಯ ನಾಳೆಗಾಗಿ !
ಕವನ ರಚನೆ : ನಾ ದಿವಾಕರ