ಉಡುಪಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಗುಲ್ವಾಡಿ ಟಾಕೀಸ್, ಡಾ. ಜಿ. ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಉಡುಪಿ, ಉಸಿರು ಅಧ್ಯಯನ ತರಬೇತಿ ಕೇಂದ್ರ ಕೋಟ ಇದರ ಸಂಯುಕ್ತ ಆಶ್ರಯದಲ್ಲಿ ಗುಲ್ವಾಡಿ ವೆಂಕಟರಾವ್‌ರವರ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿ ಕೃತಿಯಲ್ಲಿನ ಮಹಿಳಾ ಸಾಮಾಜಿಕ ಸ್ಥಿತ್ಯಂತರಗಳು ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 13 ಸೆಪ್ಟೆಂಬರ್ 2025ರಂದು ಉಡುಪಿಯ ಪುರಭವನದಲ್ಲಿ ಬೆಳಿಗ್ಗೆ ಘಂಟೆ 9.30ರಿಂದ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು, ಕವಿ, ಲೇಖಕಿ, ಅಂಕಣಕಾರರಾದ ಮತಿ ಧರಣಿದೇವಿ ಮಾಲಗತ್ತಿ ಇವರಿಗೆ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಹಾಗೂ ಲೇಖಕರಾದ ಮೊಹಮ್ಮದ್ ರಫೀ ಪಾಷ ಇವರಿಗೆ ಸಂತೋಷ್ ಕುಮಾರ್ ಗುಲ್ವಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.