‘ಜೀವ ಮತ್ತು ಸದಾಶಿವರಲ್ಲಿ ಬೇಧವಿಲ್ಲ, ಭಾವವಿದೆ’ – ಪರಮಪೂಜ್ಯ ಎಡನೀರು ಶ್ರೀ
ಪುತ್ತೂರು : ಪುತ್ತೂರು ಪರ್ಲಡ್ಕದ ‘ಅಗಸ್ತ್ಯ’ ನಿವಾಸದಲ್ಲಿ ಜರುಗಿದ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ಎಡನೀರು ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಗಳವರು “ದೇಹವೇ ದೇವಾಲಯ. ಜೀವ ಮತ್ತು ಸದಾಶಿವರಲ್ಲಿ ಬೇಧವಿಲ್ಲ, ಭಾವವಿದೆ ಎಂಬ ಕಲ್ಪನೆಯನ್ನು ಹೊಂದಿ ನಮ್ಮ ಧರ್ಮವಿದೆ. ಇಂತಹ ಧಾರ್ಮಿಕ ಸಂದರ್ಭದಲ್ಲಿ ಸಾಧಕರನ್ನು ಗೌರವಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ಇವೆಲ್ಲಾ ಸನಾತನ ಧರ್ಮದ ಮುಖಗಳು. ಅವುಗಳ ಆಚರಣೆಯಲ್ಲಿದೆ ಬದುಕಿನ ಸುಭಗತೆ” ಎಂದರು.
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದು ಆ ಕ್ಷೇತ್ರಕ್ಕೆ ಗೌರವ ತಂದ ಕರಾಯ ಲಕ್ಷ್ಮಣ ಶೆಟ್ಟಿಯವರಿಗೆ ದಿ. ವಿಷ್ಣುಮೂರ್ತಿ ನೂರಿತ್ತಾಯ ನೆನಪಿನ ಗೌರವವನ್ನು ಪ್ರದಾನ ಮಾಡಲಾಯಿತು. ಕಲಾಪೋಷಕ, ಆಯುರ್ವೇದ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, “ಹಿರಿಯರ ಸ್ಮರಣೆಗಳಿಂದ ಬಾಂಧವ್ಯ ವೃದ್ಧಿಸುತ್ತದೆ. ಬದುಕಿಗದು ಸ್ಪೂರ್ತಿಯಾಗುತ್ತದೆ. ಅವರ ಸಾಧನೆಗಳು ಕುಟುಂಬಿಕರಿಗೆ ಆದರ್ಶವಾಗುತ್ತದೆ. ಹೃದಯಕ್ಕೆ ಹತ್ತಿರವಾದ ಇಂತಹ ಮನೆ ಕಾರ್ಯಕ್ರಮಗಳು ಹೃದ್ಯ” ಎಂದರು.
ನಿವೃತ್ತ ಪ್ರಾಂಶುಪಾಲ ದಿವಾಕರ ಗೇರುಕಟ್ಟೆಯರವರು ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯರನ್ನು ಸಂಸ್ಮರಿಸಿ, ಸಂಮಾನಿತ ಕರಾಯ ಲಕ್ಷ್ಮಣ ಶೆಟ್ಟಿಯವರನ್ನು ನುಡಿಹಾರದ ಮೂಲಕ ಅಭಿನಂದಿಸಿದರು. ಶ್ರೀ ರಂಗನಾಥ ರಾವ್ ಬೊಳ್ವಾರು ಸನ್ಮಾನ ಫಲಕವನ್ನು ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಮತಿ ಕೃಷ್ಣವೇಣಿ ಪ್ರತ್ಯೂಷ್ ಬಾರ್ಯ ಪ್ರಾರ್ಥಿಸಿ, ಶ್ರೀಮತಿ ಸ್ವರ್ಣಲತಾ ಬಾರ್ಯ ವಂದಿಸಿದರು. ಆದಿತ್ಯ ತಂತ್ರಿ, ಪ್ರಜ್ಞಾ ತಂತ್ರಿ, ಪ್ರತ್ಯೂಷ್ ಬಾರ್ಯ ಅತಿಥಿಗಳನ್ನು ಗೌರವಿಸಿ, ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು.
ಕೊನೆಯಲ್ಲಿ ‘ಸುಭದ್ರಾ ರಾಯಭಾರ ಮತ್ತು ವಿದುರಾತಿಥ್ಯ’ ತಾಳಮದ್ದಳೆ ಜರಗಿತು. ಶ್ರೀಗಳಾದ ಕುಸುಮಾಧರ, ಆನಂದ ಸವಣೂರು (ಭಾಗವತರು), ಮುರಳಿ ಕಲ್ಲೂರಾಯ, ತಾರಾನಾಥ ಸವಣೂರು, ಅಚ್ಯುತ ಪಾಂಗಣ್ಣಾಯ (ಚೆಂಡೆ, ಮದ್ದಳೆ), ಗುಂಡ್ಯಡ್ಕ ಈಶ್ವರ ಭಟ್, ನಾ. ಕಾರಂತ ಪೆರಾಜೆ, ದಿವಾಕರ ಗೇರುಕಟ್ಟೆ ಮತ್ತು ಭಾಸ್ಕರ ಶೆಟ್ಟಿ (ಅರ್ಥದಾರಿಗಳು) ಭಾಗವಹಿಸಿದ್ದರು.
- ಭಾಸ್ಕರ ಬಾರ್ಯ