ಹಾಸನ : ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ದಿನಾಂಕ 08 ಸೆಪ್ಟೆಂಬರ್ 2025 ರಂದು ಆಚಾರ್ಯ ವಾಣಿಜ್ಯ ಪಿ. ಯು. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ಕಾವ್ಯ ಸಮಾಜದ ಎಲ್ಲಾ ಸ್ಥರದ ಅದರಲ್ಲೂ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕೆಂದರೆ ಕವಿಗೂ ಆ ಸಾಮಾಜಿಕ ಬದ್ಧತೆ, ಹೃದಯ ವೈಶಾಲ್ಯತೆ ಅತ್ಯಗತ್ಯ. ಇತಿಹಾಸವನ್ನು ಅರಿಯದವ ಇತಿಹಾಸವನ್ನು ಹೇಗೆ ಸೃಷ್ಠಿಸಲಾರನೋ.. ಹಾಗೆಯೇ ಕಾವ್ಯೇತಿಹಾಸದ ಪರಿವಿಲ್ಲದವ ಸೃಜನಾತ್ಮಕ ಕಾವ್ಯ ಸೃಷ್ಠಿಸಲಾರ. ಪ್ರತಿಯೊಬ್ಬ ಕವಿಗೂ ನಮ್ಮ ಪರಂಪರೆಯ ಅರಿವಿರಬೇಕು. ಕಾವ್ಯವೆಂಬುದು ಪರಂಪರೆಗಳನ್ನು ಬೆಸೆಯುವ ಕೊಂಡಿ. ಕವಿಗಳು ಪರಂಪರೆಯ ಇತಿಹಾಸಕಾರರು. ಕಾವ್ಯವೆಂಬುದು ಕೇವಲ ಕಲ್ಪನಾತೀತವಾಗದೆ ವಾಸ್ತವ ಬದುಕಿನ ಮೇಲೆ ಬೆಳಕು ಚೆಲ್ಲಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಠಿಕೋನಗಳನ್ನು ಒಳಗೊಂಡಿದ್ದರೆ ಮಾತ್ರ ಅಂತಹ ಕಾವ್ಯ ಕಾಲಗರ್ಭದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಬರೆದದ್ದೆಲ್ಲಾ ಕಾವ್ಯವಾಗುವುದಿಲ್ಲ. ಗದ್ಯಕ್ಕೂ-ಪದ್ಯಕ್ಕೂ ವ್ಯಾತ್ಯಾಸವಿದೆ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ ತನ್ನದೇಯಾದ ಗುಣಲಕ್ಷಣಗಳಿವೆ. ಕವಿಗೆ ಅಧ್ಯಯನ ಮತ್ತು ಅಧ್ಯಾಪನ ಅತ್ಯಗತ್ಯ. ಕಾವ್ಯ ವಿಶ್ವಮೌಲ್ಯವನ್ನು ಪಡೆಯಬೇಕಾದರೆ ಕವಿಯ ಮನೋವಾಂಛಲ್ಯ ಜಾತಿ-ಧರ್ಮದೆಲ್ಲೆಗಳ ಗಡಿ ಮೀರಬೇಕು. ಮೊಬೈಲ್ಲನೇ ಪ್ರಪಂಚವಾಗಿಸಿಕೊಂಡಿರುವ ಇಂದಿನ ಯುವಪೀಳಿಗೆಗೆ ಸಾಹಿತ್ಯದ ಹುಚ್ಚನ್ನು ಹಿಡಿಸಬೇಕಿದೆ. ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಮೌಲ್ಯಗಳನ್ನು ಅವರಲ್ಲಿ ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಗೆಳೆಯ ಬಾನಂ ಲೋಕೇಶ್ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದ್ದಾರೆ. ಕಾಲೇಜು ಹಂತದ ಮಕ್ಕಳಿಗೆ ಸಾಹಿತ್ಯದ ಜಾಗೃತಿ ಮೂಡಿಸುವುದರ ಮೂಲಕ ಸಂಸ್ಕಾರಯುತ ವ್ಯಕ್ತಿತ್ವದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ” ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಪನಹಳ್ಳಿ ಹೆಚ್.ಪಿ.ಎಸ್ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಆಚಾರ್ಯ ವಾಣಿಜ್ಯ ಕಾಲೇಜಿನ ಸಂಸ್ಥಾಪಕಿ ಶ್ವೇತಾ ಹರೀಶ್ ಮಾತನಾಡಿ “ಶಾಲಾ-ಕಾಲೇಜುಗಳಲ್ಲಿ ಚುಟುಕು ಸಾಹಿತ್ಯ ಕಾರ್ಯಕ್ರಮವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಏಕೆಂದರೆ ಯುವ ಸಾಹಿತಿಗಳು ನಿರ್ಮಾಣವಾಗುವುದು ಶಾಲಾ-ಕಾಲೇಜುಗಳಲ್ಲಿ. ಹೊಸ ಹೊಸ ಪ್ರತಿಭೆಗಳನ್ನು ಹೊರತೆಗೆಯುವಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮುನ್ನುಡಿ ಹಾಡಿರುವುದು ಮುಂದಿನ ದಿನಗಳಲ್ಲಿ ಸಾಹಿತ್ಯದ ಅಭ್ಯುದಯವಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆಯಬೇಕಾಗಿದೆ” ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಾ. ನಂ. ಲೋಕೇಶ್ ಮಾತನಾಡಿ “ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕುವುದು ಸಾಹಿತ್ಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಷತ್ತುಗಳ ಕರ್ತವ್ಯವಾಗಿದೆ. ಹಾಗಾಗಿ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ‘ಹಳೆ ಬೇರು ಹೊಸ ಚಿಗುರು’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಯಲ್ಲಿ ಪರಿಣಿತ ಕವಿಗಳು ಹಾಗೂ ಉದಯೋನ್ಮುಖ ಕವಿಗಳು ಚುಟುಕು ವಾಚನವನ್ನು ಮಾಡಿದ್ದಾರೆ. ಇಲ್ಲಿ ಉದಯೋನ್ಮುಖ ಕವಿಗಳು ಪರಿಣಿತ ಕವಿಗಳಿಂದ ಕಲಿಯಬೇಕಾದಂತಹ ಅಂಶಗಳನ್ನು ಕಲಿಯಲು ಒಂದು ವೇದಿಕೆ ನಿರ್ಮಾಣವಾದಂತಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ರಚನಾ ಕಮ್ಮಟಗಳನ್ನು ಆಯೋಜಿಸುವುದರೊಂದಿಗೆ ಉತ್ತಮ ಸಾಹಿತ್ಯ ನಿರ್ಮಾಣ ಮಾಡುವ ಸಾಹಿತಿಗಳನ್ನು ಹುಟ್ಟು ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಕ್ರಮವಹಿಸಿ ಒಂದೊಂದು ತಾಲೂಕಿನಲ್ಲಿಯೂ ಹತ್ತತ್ತು ಕವಿಗಳನ್ನು ಸೃಷ್ಟಿಸುವಲ್ಲಿ ಯಶ ಕಂಡರೆ ಸುಮಾರು ಒಂದು ನೂರು ನವ ಕವಿಗಳು ಸೃಷ್ಟಿಯಾಗುತ್ತಾರೆ. ಈ ಉದಯೋನ್ಮುಖ ಕವಿಗಳಿಗೆ ಜಿಲ್ಲಾಮಟ್ಟದಲ್ಲಿ ಒಂದು ವೇದಿಕೆಯನ್ನು ನಿರ್ಮಿಸಿಕೊಡುವ ಕಾರ್ಯವನ್ನು ಚುಟುಕು ಸಾಹಿತ್ಯ ಪರಿಷತ್ ಮಾಡುತ್ತದೆ” ಎಂದರು.
ಹಾಸನ ತಾಲ್ಲೂಕು ಚು.ಸಾ.ಪ. ಅಧ್ಯಕ್ಷರಾದ ಸೋಮನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ “ಚುಟುಕು ಬಾಳಿನ ಲಾಲಿತ್ಯ, ಚುಟುಕು ಸಾಹಿತ್ಯದ ಮೂಲಕ ಸಾಹಿತ್ಯ ಕ್ಷೆತ್ರದ ಅರಮನೆಗೆ ಯುವ ಕವಿಗಳು ಪ್ರವೇಶಕ್ಕೆ ಅವಕಾಶವಿದೆ. ಚುಟುಕು ಸಾಹಿತ್ಯ ಸಿಂಚನದ ಮೂಲಕ ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಹಾಗೂ ಆಕರ್ಷಣೆ ಉಂಟು ಮಾಡುವ ಬಾ. ನಂ. ಜೀ. ಯವರ ಕನಸು ಮತ್ತು ಆಶಯಕ್ಕೆ ನಾವೆಲ್ಲ ಕಟಿಬದ್ದರಾಗಿದ್ದೆವೆ” ಎಂದರು.
ಹಾಸನ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ಸುಂದರೇಶ್ ಡಿ. ಉಡುವರೇ ಮಾತನಾಡಿ “ಮನುಷ್ಯನ ಜೀವನದ ಹುಟ್ಟಿನಿಂದ ಹಿಡಿದು ಸಾಯುವ ತನಕ ಸಮಾಜದೊಳಗಿನ ಮಹಾಭಾರತ ಎಂಬ ಯುದ್ಧಗಳು ಸದಾ ನಡೆಯುತ್ತಲೇ ಇರುತ್ತವೆ” ಎಂದರು. ಮಹಾಭಾರತವನ್ನು ಚುಟುಕಾಗಿ ವಿಶ್ಲೇಷಣೆ ಮಾಡಿ ಪಂಚಪಾಂಡವರನ್ನ ಪಂಚೇಂದ್ರಿಯಗಳಿಗೆ ಹೋಲಿಸಿ ಪಂಚೇಂದ್ರಿಯಗಳನ್ನು ನಿಗ್ರಹಿಸುವ ಮನಸ್ಸಿಗೆ ದ್ರೌಪದಿಯನ್ನು ಹೋಲಿಸಿ ಮನಸನ್ನು ನಿಗ್ರಹಿಸುವ ಜ್ಞಾನವನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಹೋಲಿಸಿ ಮಹಾಭಾರತದ ಕಥೆಯನ್ನು ಚುಟುಕಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
ವೇದಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಮಳಲಿ ಹರೀಶ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ. ಆದರ್ಶ್ ಎಚ್. ಆರ್., ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಮಲ್ಲೇಶ್ ಜಿ. ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ಜಿ. ಆರ್. ಅರಸ್, ಚು. ಸಾ. ಪ. ಮೈಸೂರು ಜಿಲ್ಲಾಧ್ಯಕ್ಷೆ ರತ್ನ ಹಾಲಪ್ಪಗೌಡ, ತುಮಕೂರು ಸಪ್ತಗಿರಿ ಕಾಲೇಜಿನ ಸಹಪ್ರಾದ್ಯಾಪಕಿ ಸೌಮ್ಯಶ್ರೀ, ಎ. ವಿ. ಕೆ. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಬೆಸ್ಟ್ ಕಾಲೇಜಿನ ಸಂಸ್ಥಾಪಕ ಈಶ್ವರ್ ಎಚ್. ವೈ, ಅಧ್ಯಯನ ಪಿ. ಯು. ಕಾಲೇಜಿನ ಕಾರ್ಯದರ್ಶಿ ಡಾ. ಚೇತನ್ ಕುಮಾರ್ ಎಚ್. ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಚಂದ್ರಶೇಖರ ಅರಕಲಗೂಡು, ಕು. ಶಾಲಿನಿ, ಕವಿತಾ ಗೋಪಾಲ್, ಪ್ರಜ್ವಲ್ ಗೌಡ, ಮಮತ ಮಲ್ಲೇಶ್, ನವೀನ್ ಎಂ., ಸುಧಾ ವಿಶ್ವನಾಥ್, ಲಲಿತ ಎಸ್., ಹೇಮಶ್ರೀ, ಪ್ರಜ್ವಲ್ ಸಕಲೇಶಪುರ, ಭೂಮಿಕಾ, ಸಾವಿತ್ರಮ್ಮ ಓಂಕಾರ್, ಬೋರೇಗೌಡ ಅರಸೀಕೆರೆ, ಕಾರ್ತಿಕ್, ವೀಣಾ ಚನ್ನರಾಯಪಟ್ಟಣ, ಗಿರೀಶ್ ಎಚ್.ಆರ್., ನಿಸರ್ಗ, ನರಸಿಂಹ, ಯಶೋಧ, ಚಂದ್ರಕಿರಣ್ ಗುಜ್ಜರ್, ಎಲ್. ಹೇಮಲತಾ, ಪ್ರಿಯಾಂಕ, ಸಾನಿಕಾ, ಪೂರ್ಣಿಮಾ, ಕಾವ್ಯಶ್ರೀ, ಗಿರಿಜಾ ನಿರ್ವಾಣಿ, ನಂಜುಂಡಯ್ಯ, ಪುಷ್ಪಾಂಜಲಿ ಸೇರಿದಂತೆ ಹಲವರು ವಾಚಿಸಿದರು.
Subscribe to Updates
Get the latest creative news from FooBar about art, design and business.
Next Article ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ