ಮಂಗಳೂರು : ವಿಶ್ವಹಿಂದೂ ಪರಿಷತ್ ಆಶ್ರಯದ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆಯು ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಗೋರಕ್ಷ ಜ್ಞಾನ ಮಂದಿರದಲ್ಲಿ ದಿನಾಂಕ 09 ಸೆಪ್ಟೆಂಬರ್ 2025ರ ಮಂಗಳವಾರದಂದು ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ, ಭರತನಾಟ್ಯ ಸಹಿತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವ ತೊಂದರೆಗಳನ್ನು ನಿವಾರಿಸಿ ಈ ಹಿಂದಿನಂತೆಯೇ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು. ಮುಂದೆ ಬರುವ ನಾಡಹಬ್ಬ ದಸರಾ ಸಂದರ್ಭದಲ್ಲಿ ನಿಯಮಾವಳಿ ಪ್ರಕಾರ 12 ದಿನಗಳ ಕಾಲ ರಿಯಾಯಿತಿ ಕೊಟ್ಟು ಸರಕಾರ ಆದೇಶಿಸಬೇಕು ಎಂದು ಸಮಿತಿ ವತಿಯಿಂದ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಶಾಸಕರ ಮುಖೇನ ಮನವಿ ಸಲ್ಲಿಸಲಾಯಿತು.
ಯಕ್ಷಗಾನದ ಹಿಮ್ಮೇಳ, ಮುಮ್ಮೇಳದವರು, ವಿವಿಧ ನಾಟಕ ತಂಡದ ಕಲಾವಿದರು, ತಂತ್ರಜ್ಞರು, ದೈವ ನರ್ತಕರು, ಕಾರ್ಮಿಕರು, ಸೌಂಡ್ಸ್ ಆ್ಯಂಡ್ ಲೈಟ್ಸ್‌ನವರು, ಶಾಮಿಯಾನ, ಫ್ಲವರ್ ಡೆಕೊರೇಟರ್ ಗಳು, ಕ್ಯಾಟರಿಂಗ್, ಸಂತೆ ವ್ಯಾಪಾರಿಗಳು ಸಹಿತ ವಿವಿಧ ವರ್ಗದ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದರು. ತುಳುನಾಡಿನ ಪರಂಪರೆಯಿಂದ ನಡೆದುಕೊಂಡು ಬಂದ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಿಗೆ ಯಾವುದೇ ಕಾರಣಕ್ಕೂ ನಿರ್ಬಂಧ ಮಾಡಕೂಡದು ಹಾಗೂ ಇದರ ವಿರುದ್ದ ಎಲ್ಲರೂ ಜತೆಯಾಗಿ ರಾಜಕೀಯ ರಹಿತವಾಗಿ ಹೋರಾಟ ಸಂಘಟಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ರಂಗಭೂಮಿಯ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್, ಕಿಶೋರ್ ಡಿ. ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಭಾಸ್ಕರಚಂದ್ರ ಶೆಟ್ಟಿ, ಡಾ. ಆಶಾಜ್ಯೋತಿ ರೈ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಮಧು ಬಂಗೇರ ಕಲ್ಲಡ್ಕ, ಕೃಷ್ಣಕುಮಾರ್ ಮಂಜೇಶ್ವರ, ಚಂದ್ರಶೇಖರ ಶೆಟ್ಟಿ, ಬಾಬು ಕೆ.ವಿಟ್ಲ, ಲಕ್ಷ್ಮಣ ಕುಮಾರ್ ಮಲ್ಲೂರು, ಅಶೋಕ್ ಶೆಟ್ಟಿ ಸರಪಾಡಿ, ಕಿರಣ್ ಕುಮಾರ್ ಜೋಗಿ, ಅಣ್ಣು ಪೂಜಾರಿ, ತುಷಾರ್ ಸುರೇಶ್, ಗೋಕುಲ್ ಕದ್ರಿ, ಜಗನ್ನಾಥ ಶೆಟ್ಟಿ ತಾಳಿಪ್ಪಾಡಿ ಉಪಸ್ಥಿತರಿದ್ದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿ, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಸ್ತಾವಿಕವಾಗಿ ಮಾತನಾಡಿ, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಮನವಿ ವಾಚಿಸಿ, ವಂದಿಸಿದರು. ಮಧುರಾಜ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ