ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಎಪ್ರಿಲ್ 16 ಮತ್ತು 17ರಂದು ನಡೆದ ಎರಡು ದಿವಸಗಳ 13ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದು ಕಲಾಸಕ್ತರ ಮನ ಸೂರೆಗೊಂಡಿತು. ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತು ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕ ಹಾಗೂ ಶ್ರೀ ವಾಗ್ದೇವಿ ಗಮಕ ಸಂಸ್ಥೆಗಳ ಮೂಲಕ ನಡೆದ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಗಮಕ ವಿದ್ವಾನ್ ಗಮಕ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ವಹಿಸಿದ್ದರು.
ದಿನಾಂಕ 16ರಂದು ರವಿವಾರ ಬೆಳಿಗ್ಗೆ 9.30ಕ್ಕೆ ಅಲಂಕೃತ ರಥದಲ್ಲಿ ಸರ್ವಾಧ್ಯಕ್ಷರನ್ನು ಕಾವ್ಯಗ್ರಂಥ ಮತ್ತು ಸರಸ್ವತಿ ವಿಗ್ರಹದೊಂದಿಗೆ ಬ್ಯಾಂಡ್ ವಾದನದಲ್ಲಿ ಮೆರವಣಿಗೆಯ ಮೂಲಕ ಸಂತಮೀರಾ ಆಂಗ್ಲ ಮಾಧ್ಯಮ ಶಾಲೆಯ ಆವರಣದವರೆಗೆ ಕರೆತರಲಾಯಿತು. ಸಭಾ ಕಾರ್ಯಕ್ರಮಕ್ಕೆ ಶ್ರೀಮತಿ ಪ್ರಸನ್ನ ಮತ್ತು ಶ್ರೀಮತಿ ಶಾಂತ ಇವರ ಪ್ರಾರ್ಥನೆ, ವಾಗ್ದೇವಿ ವಿದ್ಯಾರ್ಥಿನಿಯರಿಂದ ನಾಡಗೀತೆ ಮತ್ತು ಎಲ್.ಎಸ್. ಶಾಸ್ತ್ರಿ ಅವರು ಬರೆದ ಸ್ವಾಗತಗೀತೆಯೊಂದಿಗೆ ಚಾಲನೆ ನೀಡಲಾಯಿತು. ಸಮ್ಮೇಳನದ ಸಂಚಾಲಕರಾದ ಶ್ರೀಮತಿ ಭಾರತಿ ಭಟ್ಟ ಅವರಿಂದ ಸ್ವಾಗತ, ಕ.ಗ. ಕಲಾ ಪರಿಷತ್ ಕಾರ್ಯದರ್ಶಿ ದಕ್ಷಿಣಾಮೂರ್ತಿಯವರಿಂದ ಪ್ರಾಸ್ತಾವಿಕ ಮಾತುಗಳಾದವು. ಅತಿಥಿ ಗಣ್ಯರ ಪರಿಚಯ, ಗ್ರಂಥ ಪುಷ್ಪ ಗೌರವದ ನಂತರ ಶಿಕ್ಷಣ ತಜ್ಞರಾದ ಶ್ರೀ ಪರಮೇಶ್ವರ ಹೆಗಡೆ ಅವರು ದೀಪ ಬೆಳಗಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ಬೆಳಗಾವಿಯಲ್ಲಿ ಸಮ್ಮೇಳನ ನಡೆಸುತ್ತಿರುವುದರಿಂದ ಈ ಭಾಗದಲ್ಲಿ ಗಮಕ ಕಲಾಭಿರುಚಿ ಬೆಳೆಯುತ್ತದೆಂಬ ಆಶಯ ವ್ಯಕ್ತಪಡಿಸಿದರು. ಎಲ್.ಎಸ್. ಶಾಸ್ತ್ರಿ ಸಂಪಾದಕತ್ವದ ಸಮ್ಮೇಳನದ ಸ್ಮರಣ ಸಂಚಿಕೆ ‘ಗಮಕಸುಧೆ’ಯನ್ನು ಪರಿಷತ್ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು ಬಿಡುಗಡೆ ಮಾಡಿದರು.
ಸರ್ವಾಧ್ಯಕ್ಷ ಭಾಷಣ ಮಾಡಿದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಅವರು “ಗಮಕ ಕಲೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಮಹತ್ವದ ಸ್ಥಾನ ಕಲ್ಪಿಸಬೇಕು ಮತ್ತು ರಾಜ್ಯ ಸರಕಾರ ಗಮಕ ಕಲಾ ಅಕಾಡೆಮಿಯೊಂದನ್ನು ಸ್ಥಾಪಿಸಿ ಪ್ರೋತ್ಸಾಹ ನೀಡಬೇಕು” ಎಂದು ಕರೆಯಿತ್ತರಲ್ಲದೆ, ಗಮಕ ಕಲೆಯ ವೈಶಿಷ್ಟ್ಯಗಳ ಕುರಿತು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ, ಗೌರವ ಉಪಸ್ಥಿತರಾಗಿ ಶ್ರೀ ಪಿ.ಬಿ. ಸ್ವಾಮಿ, ಶ್ರೀಮತಿ ಸುಜಾತಾ ದಫ್ತರದಾರ ಭಾಗವಹಿಸಿದ್ದರು. ಶ್ರೀಮತಿ ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ನಿರೂಪಣೆ ಮತ್ತು ಕಾರ್ಯದರ್ಶಿ ಟಿ.ಆರ್. ಗಣಪತಿ ವಂದನಾರ್ಪಣೆಗೈದರು.
ಮಧ್ಯಾಹ್ನ 2.30ರಿಂದ ಗಂಗಮ್ಮ ಕೇಶವಮೂರ್ತಿ ಮತ್ತು ಶಾಂತಾ ಗೋಪಾಲ ಅವರಿಂದ ಡಿವಿಜಿಯವರ ‘ಶ್ರೀರಾಮ ಪರೀಕ್ಷಣಂ’ ಕಾವ್ಯದ ಅಹಲ್ಯೆಯ ಪ್ರಶ್ನೆ ಭಾಗದ ವಾಚನ ವ್ಯಾಖ್ಯಾನ ಅತ್ಯಂತ ರಸವತ್ತಾಗಿ ನಡೆದು ಎಲ್ಲರನ್ನೂ ಖುಷಿಪಡಿಸಿತು. ಯುವ ಕಲಾವಿದರಿಂದ ದೇಶಭಕ್ತಿ ಗೀತೆ, ಭಾವಗೀತೆ, ‘ಗಿರಿಜಾ ಕಲ್ಯಾಣ’ ಗಮಕ ದೃಶ್ಯ ರೂಪಕ, ಮಂಜುಳಾ ಭಟ್ ಮಂಚಿ ಮತ್ತು ಅನಂತಕೃಷ್ಣ ಅವರಿಂದ ಜೈಮಿನಿ ಭಾರತದ ‘ಸ್ವಾಹಾ-ಅಗ್ನಿ ವಿವಾಹ ಪ್ರಕರಣ’ದ ವಾಚನ ವ್ಯಾಖ್ಯಾನ, ವಾಗ್ದೇವಿ ಮಕ್ಕಳಿಂದ ‘ಯಮನ ಸೋಲು’ ರೂಪಕ, ಹಿರಿಯ ಕಲಾವಿದರುಗಳಿಂದ ಕನಕದಾಸರ ‘ರಾಮಧಾನ್ಯ ಚರಿತ್ರೆ’ ಗಮಕ ರೂಪಕ, ದಕ್ಷಿಣಾಮೂರ್ತಿಯವರಿಂದ ಪರಿಚಯ ಉಪನ್ಯಾಸ, ಆನ್ ಲೈನ್ ವಿದ್ಯಾರ್ಥಿನಿಯರಿಂದ ದೇಶಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳು ಆಕರ್ಷಣೀಯವಾಗಿ ನಡೆದವು.
ಎರಡನೆಯ ದಿನ ಬೆಳಿಗ್ಗೆ 10ರಿಂದ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿಯರಿಂದ ಮತ್ತು ಸದಸ್ಯೆಯರಿಂದ ವೀಣಾವಾದನ, ಭಾವಗೀತೆ, ಭಕ್ತಿಗೀತೆ, ಕೋಲಾಟ, ಧೃಶ್ಯರೂಪಕಗಳು, ಅಲ್ಲದೆ ಸುಜಾತಾ ಗೋಪಿನಾಥ್ ಮತ್ತು ಮುಕ್ತಾ ಶಂಕರ ಅವರಿಂದ ಕುಮಾರವ್ಯಾಸ ಭಾರತದ ಆಯ್ದ ಭಾಗದ ವಾಚನ ವ್ಯಾಖ್ಯಾನ, ಪಲ್ಲವಿ ಭಟ್ ಮತ್ತು ಸಂತೋಷ ಭಾರದ್ವಾಜರಿಂದ ‘ಗೋಕರ್ಣ ಮಹಾತ್ಮೆ’ , ಸುಬ್ರಹ್ಮಣ್ಯ ಭಟ್ ಮತ್ತು ಇತರ ಕಲಾವಿದರಿಂದ ‘ವಿಶ್ವವಂದ್ಯೆ ಗೋಮಾತೆ’ ಕಾವ್ಯ ಗಾಯನ ಮೊದಲಾದವು ನಡೆದವು.
ಸಮಾರೋಪ ಸಮಾರಂಭ ವಿದುಷಿ ಶಾಂತಾ ಗೋಪಾಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸರ್ವಾಧ್ಯಕ್ಷರಾದ ತೆಕ್ಕೆಕೆರೆಯವರು ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ನಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಮ್ಮೇಳನದ ಸಂಯೋಜಕರಾದ ಎಲ್.ಎಸ್. ಶಾಸ್ತ್ರಿಯವರು ಎರಡು ದಿವಸಗಳ ಕಾಲ ನಡೆದ ಸಮ್ಮೇಳನ ಈ ಭಾಗದ ಜನರಲ್ಲಿ ಗಮಕ ಕಲೆಯ ಪರಿಚಯ ಮತ್ತು ಅಭಿರುಚಿ ಹುಟ್ಟಿಸಲು ಕಾರಣವಾಗಿದ್ದು, ಬೆಳಗಾವಿಯ ಜನರಿಗೆ ಇಂತಹ ಅವಕಾಶ ನೀಡಿದ ಗಮಕ ಕಲಾ ಪರಿಷತ್ತಿಗೆ ಧನ್ಯವಾದಗಳನ್ನು ಹೇಳಿದರು. ದಕ್ಷಿಣಾಮೂರ್ತಿಯವರು ಮತ್ತು ಗಂಗಮ್ಮ ಕೇಶವಮೂರ್ತಿಯವರು ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ವಾಗ್ದೇವಿ ಬಳಗದವರಿಗೆ ಮತ್ತು ಬೆಳಗಾವಿ ಸ್ವಾಗತ ಸಮಿತಿಯವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ಡಾ. ಸಿ.ಕೆ. ಜೋರಾಪುರ, ಆನಂದ ಪುರಾಣಿಕ, ಡಾ. ಹೇಮಾ ಸೊನೊಳಿ, ಎಂ.ಎ. ಪಾಟೀಲ, ಸುಧಾ ಪಾಟೀಲ್, ಜಯಶ್ರೀ ನಿರಾಕಾರಿ, ಸುಜಾತಾ ದಫ್ತರದಾರ ಉಪಸ್ಥಿತರಿದ್ದರು. ರಾಜೇಶ್ವರಿ ಹಿರೇಮಠ ನಿರೂಪಣೆಗೈದರು. ಭಾರತಿ ಭಟ್ಟ ಅವರು ಕೃತಜ್ಞತಾರ್ಪಣೆ ಮಾಡಿದರು. ಎರಡೂ ದಿವಸ ಸಭಾಗೃಹ ಕಲಾಸಕ್ತರಿಂದ ತುಂಬಿತ್ತಲ್ಲದೆ ಎಲ್ಲರೂ ಗಮಕ ಕಲೆಯ ಸ್ವಾದವನ್ನು ಸವಿದು ಸಂತಸಪಟ್ಟರು.