ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ’ ಪ್ರಶಸ್ತಿಗೆ ಹಿರಿಯ ಬರಹಗಾರ್ತಿ ಎಲ್. ಗಿರಿಜಾ ರಾಜ್ ಇವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪುರಸ್ಕರಿಸಲು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ (ರಿ.) ಈ ಪುರಸ್ಕಾರವನ್ನು ಸ್ಥಾಪಿಸಿದ್ದು 2009ರಿಂದಲೂ ಇದು ನಿರಂತರವಾಗಿ ನಡೆದುಕೊಂಡು ಶಕ್ತ ಪರಂಪರೆ ರೂಪುಗೊಂಡಿದೆ.
2025ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಪಾತ್ರವಾಗಿರುವ ಎಲ್. ಗಿರಿಜಾ ರಾಜ್ ಚಿತ್ರದುರ್ಗದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಗೊಂಡವರು. ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವ ಇವರ ಒಟ್ಟು ಹದಿನಾರು ಕೃತಿಗಳು ಅಚ್ಚಾಗಿದ್ದು ಕಥೆ-ಲೇಖನ ಸೇರಿದಂತೆ ಹಲವು ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಲೇಖಕಿಯರ ಸಂಘವೂ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ವರದಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು. ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ’ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್. ಗಿರಿಜಾ ರಾಜ್ ಇವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಅವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.