ಉಡುಪಿ : ತಿಂಗಳೆ ಪ್ರತಿಷ್ಠಾನ ಮತ್ತು ಸಂಜೀವ ಶಿಷ್ಯ ವೃಂದದಿಂದ ಅವರ ಸಪ್ತತಿ ವರ್ಷಾಚರಣೆ ಪ್ರಯುಕ್ತ ‘ಸಂಜೀವ ಯಕ್ಷ ಜೀವ-ಭಾವ’ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2025ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು.
ಹಿರಿಯರಾದ ಶಂಭು ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಖ್ಯಾತ ಪ್ರಸೂತಿ ತಜ್ಞೆ, ಸಂಜೀವರ ಯಕ್ಷ ಶಿಷ್ಯೆ ಡಾ. ಗಿರಿಜಾ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು, ಅಮಿತಾಂಜಲಿ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಆದ್ಯತಾ ಭಟ್ ಧನ್ಯವಾದ ಸಮರ್ಪಿಸಿದರು. ನಂತರ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಪಾರಂಪರಿಕ ಯಕ್ಷಗಾನ ನೃತ್ಯ ಪ್ರದರ್ಶನ ಜರಗಿತು. ಸಂಜೆ 4-00 ಗಂಟೆಗೆ ನಮ್ಮ ಸಂಜೀವ ಶೀರ್ಷಿಕೆಯಲ್ಲಿ ಸುವರ್ಣರ ಬಹುಮುಖಿ ವ್ಯಕ್ತಿತ್ವ ಅನಾವರಣಗೊಳಿಸುವ ಕಾರ್ಯಕ್ರಮ ಔಚಿತ್ಯಪೂರ್ಣವಾಗಿ ಮೂಡಿಬಂದಿತು. ಗುರು ಸಂಜೀವ, ಸಮಾಜಮುಖಿ ಸಂಜೀವ, ಯಕ್ಷ ಸಂಜೀವ ಎಂಬ ವಿಷಯಗಳ ಕುರಿತು ಅನುಕ್ರಮವಾಗಿ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಮುರಲಿ ಕಡೆಕಾರ್, ಪ್ರೊ. ಎಂ. ಎಲ್. ಸಾಮಗ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಇದರ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ವಹಿಸಿದ್ದರು.
ತದನಂತರ ಜರಗಿದ ಗುರು ಸಂಜೀವ ಸುವರ್ಣರ ಸಪ್ತತಿಯ ವರ್ಷಾಚರಣೆಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಕೆ.ಎಸ್. ಹೆಗಡೆ ಮೆಡಿಕಲ್ ಕಾಲೇಜಿನ ಹೃದ್ರೋಗ ತಜ್ಞ ವೈದ್ಯ ಡಾ. ಎಚ್. ನರೇಶ್ಚಂರದ್ರ ಹೆಗ್ಡೆ, ಶಾಸಕ ಯಶ್ಪಾಜಲ್ ಎ. ಸುವರ್ಣ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಬೆಂಗಳೂರಿನ ಬಿ.ಬಿ.ಎಂ.ಪಿ. ಅಪರ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಸಂಜೀವ ಸುವರ್ಣ ದಂಪತಿಗಳಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಂಜೀವರು ತನ್ನ ಗುರುವೃಂದವನ್ನು ಆಪತ್ತಿನಲ್ಲಿ ತನಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಂಡರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಸ್ವಾಗತಿಸಿ, ದಾಮೋದರ ಶರ್ಮ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ಬೈಲೂರು ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ಗುರು ಸಂಜೀವರ ಶಿಷ್ಯರು ‘ಕಥೆಯಾದಳು ಕಾಶಿ ಕುವರಿ’ ಯಕ್ಷಗಾನವನ್ನು ಪ್ರಸ್ತುತ ಪಡಿಸಿದರು.