ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 17 ಮತ್ತು 18 ಸೆಪ್ಟೆಂಬರ್ 2025ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಶಿಬಿರಾರ್ಥಿಗಳು ಸುಗುಣ ಎಂ.ಎಂ. ಇವರ ನಿರ್ದೇಶನದಲ್ಲಿ ‘ಜನಗಣಮನ’ ಸಂವಿಧಾನ ಮತ್ತು ಶಿಕ್ಷಣ ಆಧಾರಿತ ನಾಟಕವನ್ನು ಅಭಿನಯಿಸಲಿದ್ದಾರೆ.
ಇಂದು ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಮತ್ತು ಕಾರ್ಪೋರೇಟಿಕರಣದ ಬಲೆಗೆ ಸಿಲುಕಿರುವುದು ದುರಂತವಾದರೂ ನಾವೆಲ್ಲರೂ ಒಪ್ಪಿರುವ ವಾಸ್ತವ. ಮೂಲಭೂತ ಶಿಕ್ಷಣವೇ ಇನ್ನೂ ಲಕ್ಷಾಂತರ ಮಕ್ಕಳಿಗೆ ಅಸಾಧ್ಯ ಕನಸಾಗಿ ಉಳಿದಿರುವ ಸಂದರ್ಭದಲ್ಲಿ, ಶಿಕ್ಷಣವನ್ನು ಹಕ್ಕು ಎಂದು ನೋಡುವ ಬದಲು ಸರಕು-ಸೇವೆಯಂತೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಾಗಿ ಪರಿವರ್ತಿಸಲಾಗುತ್ತಿದೆ. ಶಿಕ್ಷಣದ ಹೃದಯದಲ್ಲಿ ಇರಬೇಕಾದ ಮಾನವೀಯತೆ, ಸಮಾನತೆ ಮತ್ತು ಪ್ರಜ್ಞಾವಂತರ ಸಮಾಜ ನಿರ್ಮಾಣದ ತತ್ತ್ವಗಳನ್ನು ಕಡೆಗಣಿಸಿ, ಇಂದು ಅದು ಕಾರ್ಪೊರೇಟ್ ಲಾಭದ ಆಳವಲಯಕ್ಕೆ ತಳ್ಳಲ್ಪಟ್ಟಿದೆ. ಈ ಬದಲಾವಣೆಯ ತೀವ್ರತೆ ಕೇವಲ ಆರ್ಥಿಕ ಅಸಮಾನತೆಯನ್ನು ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂತರಗಳನ್ನೂ ವಿಸ್ತರಿಸುತ್ತಿರುವುದು ಕಳವಳಕಾರಿ.
ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳುಗಳ ಕಾಲ ಆಯೋಜಿಸಲಾದ ಸಹಜರಂಗ ರಂಗತರಬೇತಿ ಶಿಬಿರದಲ್ಲಿ ನಡೆದ ಚರ್ಚೆಗಳು ಒಂದು ಮಹತ್ವದ ಮಾರ್ಗವನ್ನು ತೆರೆದವು. ವಿದ್ಯಾರ್ಥಿಗಳು ತಮ್ಮದೇ ಅನುಭವ, ಕಣ್ಣಾರೆ ಕಂಡ ವಾಸ್ತವಗಳು ಹಾಗೂ ಭವಿಷ್ಯದ ಕನಸುಗಳನ್ನು ಹಂಚಿಕೊಂಡಾಗ, ಶಿಕ್ಷಣ ವ್ಯವಸ್ಥೆಯ ದುರಂತ ಮುಖವಾಡವು ಇನ್ನಷ್ಟು ಸ್ಪಷ್ಟವಾಯಿತು. ಜಾತಿ ತಾರತಮ್ಯದ ನೆಲೆಯ ಮೇಲೆ ಮಕ್ಕಳನ್ನು ವರ್ಗೀಕರಿಸುವ ಪರಿಸ್ಥಿತಿ, ಪಠ್ಯಪುಸ್ತಕಗಳ ಒಳಗಿನ ನಿಗೂಢ ಉದ್ದೇಶಗಳು, ಶಿಕ್ಷಣದಿಂದ ಹೊರಗುಳಿದವರ ಬಾಧೆ ಹಾಗೂ ಇದರಿಂದ ಸಮಾಜದ ಮನೋವೈಜ್ಞಾನಿಕ ಸ್ಥಿತಿಯ ಮೇಲೆ ಉಂಟಾಗುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಪ್ರಾಮಾಣಿಕ ಚರ್ಚೆಗಳು ಜರುಗಿದವು. ಈ ಸಂವಾದಗಳು ಕೇವಲ ಅಸಮಾಧಾನವನ್ನು ಹೊರಹಾಕದೆ, ಬದಲಾವಣೆಯ ಕನಸನ್ನು ಹಂಚಿಕೊಂಡವು. ಈ ಕನಸುಗಳನ್ನು ಕಲಾತ್ಮಕವಾಗಿ ರೂಪುಗೊಳಿಸಿ ಜನರ ಮುಂದೆ ತರುವ ಉದ್ದೇಶದಿಂದಲೇ ‘ಜನಗಣಮನ’ ನಾಟಕ ಹುಟ್ಟಿಕೊಂಡಿದೆ.
‘ಜನಗಣಮನ’ ನಾಟಕದ ಮೂಲ ವಸ್ತು ಸಂವಿಧಾನದ ಆಧಾರದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಭರವಸೆ ನೀಡಲಾದ ಮೂಲಭೂತ ಹಕ್ಕುಗಳು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವಿಕತೆ ಆ ಭರವಸೆಯ ವಿರುದ್ಧವಾಗಿ ನಿಂತಿದೆ. ಸಂವಿಧಾನವು ನೀಡಿದ ಹಕ್ಕುಗಳು ಕೇವಲ ಕಾನೂನು ಪುಸ್ತಕದ ಅಕ್ಷರಗಳಾಗಿಯೇ ಉಳಿದಿರುವುದು, ಅವುಗಳು ನೆಲದಮಟ್ಟದಲ್ಲಿ ಬದುಕನ್ನು ಬದಲಾಯಿಸಲು ಸಾಧ್ಯವಾಗದಿರುವುದು ಈ ನಾಟಕದ ಪ್ರಧಾನ ಕಥಾವಸ್ತು. ರಂಗಭೂಮಿ ಇಲ್ಲಿ ಕೇವಲ ಕಲೆಯ ಮಾಧ್ಯಮವಲ್ಲ; ಅದು ಸಮಾಜದ ದೈನಂದಿನ ಹೋರಾಟಗಳನ್ನೂ, ಕುಂದು-ಕೊರತೆಗಳನ್ನೂ ಜನರ ಎದುರು ಬಿಚ್ಚಿಡುವ ಒಂದು ಜೀವಂತ ವೇದಿಕೆ.
‘ಜನಗಣಮನ’ ನಾಟಕದ ಗುರಿ ಕೇವಲ ಸಮಸ್ಯೆಗಳನ್ನು ತೋರಿಸುವುದಲ್ಲ, ಪ್ರೇಕ್ಷಕರಲ್ಲಿ ಚಿಂತನೆ ಮತ್ತು ಸಂವಾದವನ್ನು ಹುಟ್ಟುಹಾಕುವುದು. ಯುವ ಪೀಳಿಗೆಯ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಎಬ್ಬಿಸಿ, ಅವರು ಭವಿಷ್ಯದಲ್ಲಿ ನ್ಯಾಯಸಮ್ಮತ ಸಮಾಜ ಕಟ್ಟುವ ಪ್ರೇರಣೆಯನ್ನು ನೀಡುವುದು ನಮ್ಮ ಮುಖ್ಯ ಆಶಯ. ಸಂವಾದವೇ ಬದಲಾವಣೆಯ ಮೊದಲ ಹೆಜ್ಜೆ ಎಂಬ ನಂಬಿಕೆಯಿಂದ ಈ ನಾಟಕವನ್ನು ಜನಸಮುದಾಯದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಅಂತಿಮವಾಗಿ ‘ಜನಗಣಮನ’ ಕೇವಲ ಒಂದು ರಂಗಪ್ರಯೋಗವಲ್ಲ; ಅದು ಸಮಾಜದ ಅಸಮಾನತೆ, ಅಸಹನೆ ಮತ್ತು ಕನಸುಗಳ ಕನ್ನಡಿ. ಶಿಕ್ಷಣವನ್ನು ಹಕ್ಕಾಗಿ ನೈತಿಕ ನೆಲೆಗಟ್ಟಿನಲ್ಲಿ ನೋಡುವ ದೃಷ್ಟಿಕೋನವನ್ನು ಮರುಸ್ಥಾಪಿಸಲು, ಸಂವಿಧಾನದ ಭರವಸೆಯನ್ನು ನೆನಪಿಸಲು ಹಾಗೂ ಸಮಾನತೆಯ ಮೇಲೆ ನಿಂತ ನಾಳೆಯನ್ನು ಕಟ್ಟಲು ಸಮಾಜಕ್ಕೆ ಯುವ ಸಮುದಾಯದ ಮನವಿ. ರಂಗಭೂಮಿ ಒಂದು ಸಂವಾದದ ಕಣಜ, ಆ ಸಂವಾದದಲ್ಲಿ ತೊಡಗುವ ಹೊಣೆಗಾರಿಕೆ ನಮ್ಮೆಲ್ಲರದು.