ಮಂಚಿ : ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರಿಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸಬೇಕಾದರೆ ನೃತ್ಯ ಸರಣಿಗಳ ಆಯೋಜನೆ ಬಹು ಮುಖ್ಯ ಎನಿಸುತ್ತದೆ. ಕಲಾವಿದನೊಬ್ಬ ಕಲೆಯ ಆಳ, ಅಗಲ, ಎತ್ತರಗಳನ್ನು ತಿಳಿದುಕೊಂಡು, ತನ್ನುಸಿರಿನಂತೆ ಆರಾಧಿಸಿಕೊಂಡು ನೃತ್ಯ ಕ್ಷೇತ್ರದಲ್ಲಿ ಸಾಧನೆಗೈಯಲು ಸರಣಿ ಕಾರ್ಯಕ್ರಮಗಳು ಒಂದು ಬುನಾದಿಯನ್ನು ಹಾಕಿಕೊಡುತ್ತವೆ. ಆ ನೆಲೆಗಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆಯೇ ‘ಕಲಾಧಾರಾ’. ಇದರ ಮೊದಲ ಉದ್ಘಾಟನಾ ನೃತ್ಯವು ಕಲಾದೀಪ ನಾಮಧೇಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಪುತ್ತೂರು ಇವರಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ) ಮಂಚಿ ಇವರ ಸಹಯೋಗದಲ್ಲಿ ಸಂಪನ್ನಗೊಂಡಿತು.
ದಿನಾಂಕ 05 ಸೆಪ್ಟೆಂಬರ್ 2025ರ ಶುಕ್ರವಾರ ಮಂಚಿ ಲಯನ್ಸ್ ಕ್ಲಬ್ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದೀಪ ಪ್ರಜ್ವಲನೆಗೈದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶ್ರೀ ಎಂ.ಎಸ್. ಮೂಡಿತ್ತಾಯ ಇವರು ಮಾತನಾಡಿ “ಕಲೆಯಿಂದ ದೊರೆಯುವ ಆನಂದ ಶ್ರೇಷ್ಠವಾಗಿದ್ದು, ಅದನ್ನು ಪ್ರೇಕ್ಷಕರಿಗೂ ಅನುಭವ ಮಾಡಿಸುವಲ್ಲಿ ಕಲಾದೀಪ ದಂಪತಿಗಳ ಪಾತ್ರ ಹಿರಿದು, ಇಂತಹ ಉತ್ತಮ ಮಟ್ಟದ ನೃತ್ಯ ಪ್ರದರ್ಶನಗಳು ಇನ್ನಷ್ಟು ನಡೆಯುವಂತಾಗಲಿ” ಎಂದು ಹಾರೈಸಿದರು. ಇವರ ಪತ್ನಿಯಾದ, ಕ್ಷೇಮ ವೈದ್ಯಕೀಯ ವಿದ್ಯಾಲಯದ ಅಧ್ಯಾಪಕರಾಗಿರುವ ಶ್ರೀಮತಿ ಶೈಲಜಾ ಎಸ್. ಮೂಡಿತ್ತಾಯ ಇವರೂ ನೃತ್ಯವನ್ನು ಶ್ಲಾಘಿಸಿದರು. ಜೊತೆಗೆ ಲಯನ್ಸ್ ಕ್ಲಬಿನ ಜಿಲ್ಲಾ ಸಾಂಸ್ಕೃತಿಕ ಸಂಯೋಜಕರಾದ ಶ್ರೀ ರಾಜೇಶ್ ಶೆಟ್ಟಿ ಶಬರಿ ಅವರೂ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಇನ್ನಷ್ಟು ಇಂತಹ ಗುಣಮಟ್ಟದ ಕಾರ್ಯಕ್ರಮ ಆಗುವಲ್ಲಿ ತಮ್ಮ ಸಹಕಾರ ಇರುತ್ತದೆ ಎನ್ನುವ ಭರವಸೆ ನೀಡಿದರು. ಲಯನ್ಸ್ ಭವನವನ್ನು ನೃತ್ಯ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಿದ ಮಾಲಕರಾದ ಲ. ಡಾ. ಗೋಪಾಲ ಆಚಾರ್ ಹಾಗೂ ಶ್ರೀಮತಿ ರಮಾ ಜಿ. ಆಚಾರ್ ಅವರು ಉಪಸ್ಥಿತರಿದ್ದು ತಮ್ಮ ಅನಿಸಿಕೆ ಗುರುಗಳೊಂದಿಗೆ ಹಂಚಿಕೊಂಡರು.
ವಿಜಯ ವಸಂತ ರಾಗದ ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶುದ್ಧ ನೃತ್ತದ ಮೂಲಕ ಮನ ರಂಜಿಸಿದ ಕಲಾದೀಪ ಜೋಡಿಯು ನಂತರದಲ್ಲಿ ಶಂಭುನಟನಂ ನೃತ್ಯದ ಮೂಲಕ ಸಾಕ್ಷಾತ್ ನಟರಾಜನ ದರ್ಶನ ಮಾಡಿಸಿ ರಂಗ ಮಂಟಪಕ್ಕೆ ದೈವೀ ಕಳೆಯನ್ನು ನೀಡಿದರು. ಮುಂದುವರಿದ ಭಾಗದಲ್ಲಿ ಭರತನಾಟ್ಯದ ಅತ್ಯುನ್ನತ ನೃತ್ಯ ಪದವರ್ಣವನ್ನು ಪ್ರದರ್ಶಿಸಿದರು. ಗಂಭೀರ ನಾಟ ರಾಗದ ‘ಅಮ್ಮಾ ಆನಂದದಾಯಿನಿ’ ಅನ್ನುವ ತೆಲುಗು ಭಾಷೆಯ ಈ ವರ್ಣವು ನೆರೆದ ಕಲಾರಸಿಕರ ಕಣ್ಣುಗಳಲ್ಲಿ ಆನಂದ ಭಾಷ್ಪ ತರಿಸಿದ್ದು ಸುಳ್ಳಲ್ಲ. ಮನವನ್ನು ಶುದ್ಧಗೊಳಿಸಿ ಕಲಾರಾಧನೆಯ ಮೂಲಕ ದೇವರನ್ನು ಒಲಿಸಿಕೊಳ್ಳುವ ಈ ಪರಿ ಅದ್ಭುತವೇ ಸರಿ. ಕೊನೆಯಲ್ಲಿ ‘ಅದಿಗೊ ಬರುತಿಹನೇ ಶ್ರೀರಾಮ’ ಎನ್ನುವ ನೃತ್ಯದಲ್ಲಿ ಸೀತಾ ರಾಮರ ಕಲ್ಯಾಣವನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ ಕಲಾಸ್ವಾದಕರ ಪಾಲಿಗೆ ಒದಗಿತು.
ಕಾರ್ಯಕ್ರಮದ ನೆನಪು ಸದಾ ಹಸಿರಾಗಿರಲಿ ಎನ್ನುವ ಭಾವನೆಯೊಂದಿಗೆ ಕಲಾಕೇಂದ್ರದ ಮಕ್ಕಳ ಪೋಷಕರು ಬೆಳೆಸಿದಂತಹ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಆಗಮಿಸಿದ ಕಲಾಭಿಮಾನಿಗಳು ಕಲಾವಿದರ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಅತ್ಯಂತ ಭಾವನಾತ್ಮಕವಾಗಿ ಕಲಾವಿದ ಮತ್ತು ಕಲಾರಸಿಕರನ್ನು ಬೆಸೆದ ಈ ‘ಕಲಾಧಾರಾ’ ಎಂಬ ನೃತ್ಯ ಸರಣಿಯ ಮೊದಲ ಕಾರ್ಯಕ್ರಮವು ಮಂಚಿಯ ಪರಿಸರದಲ್ಲಿ ನೃತ್ಯ ಕ್ಷೇತ್ರದಲ್ಲಿ ಒಂದು ಸಂಚಲನೆ ಮೂಡಿಸುವುದರಲ್ಲಿ ಯಶಸ್ವಿಯಾಯಿತು. ಕಲಾಧಾರಾ ಎಂಬ ಈ ನೃತ್ಯ ಧಾರೆಯು ನಿರಂತರವಾಗಿ ಹರಿದು, ಮನೆಗೊಬ್ಬ ಕಲಾವಿದ ಹುಟ್ಟಿ ಬರಲಿ, ತನ್ಮೂಲಕ ಭರತನಾಟ್ಯ ತನ್ನ ಶಾಸ್ತ್ರೀಯ ಚೌಕಟ್ಟನ್ನು ಮೀರದೆ ಕಲಾವಿದರು ರೂಪುಗೊಳ್ಳಲಿ ಎಂದು ನೃತ್ಯ ಪ್ರದರ್ಶನವಿತ್ತ ವಿದ್ವಾನ್ ದೀಪಕ್ ಕುಮಾರ್ ಅವರು ಆಶೀರ್ವದಿಸಿದರು. ಓಂಕಾರ, ಶಂಖನಾದದೊಂದಿಗೆ ಆರಂಭಗೊಂಡು, ನಿತ್ಯ ಪಂಚಾಂಗ ವಾಚನ, ಸುಭಾಷಿತ ವಾಚನ ಮೂಲಕ ಮುಂದುವರೆಯಿತು. ಪ್ರಣಾದಯೋಗ ಸಂಗೀತ ತರಗತಿಯ ಶಿಕ್ಷಕರು, ಗಮಕ ಶಿಕ್ಷಕಿಯೂ ಆದ ಶ್ರೀಮತಿ ಮಂಜುಳಾ ಸುಬ್ರಮಣ್ಯ ಭಟ್ ಪ್ರಾರ್ಥಿಸಿ, ಶ್ರೀಮತಿ ಅಶ್ವಿನಿ ಲೋಕೇಶ್ ಸ್ವಾಗತಿಸಿ, ಶ್ರೀಮತಿ ಶಕುಂತಲಾ ಅಭ್ಯಾಗತರನ್ನು ಪರಿಚಯಿಸಿದರು. ಶ್ರೀಮತಿ ಶೈಲಜಾ ದಿನ ವಿಶೇಷವನ್ನು ತಿಳಿಸಿದರು, ಶ್ರೀಮತಿ ತುಳಸಿ ಕೈರಂಗಳ ಕಲಾದೀಪ ದಂಪತಿಗಳನ್ನು ಪರಿಚಯಿಸಿದರು, ಕಲಾಕೇಂದ್ರದ ಶಿಕ್ಷಕರಾದ ವಿ. ವಸುಧಾ ಜಿ ಎನ್ ಕಾರ್ಯಕ್ರಮ ನಿರೂಪಿಸಿದರು.