ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಎ.ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಕರ್ನಾಟಕ ಸರ್ವೋದಯ ಮಹಾಮಂಡಲದ ಅಧ್ಯಕ್ಷರಾದ ಡಾ. ಎಚ್.ಎಸ್. ಸುರೇಶ್ ಇವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಹಿರಿಯ ಗಾಂಧಿವಾದಿ ಎ.ಆರ್. ನಾರಾಯಣ ಘಟ್ಟ ಇವರು ಗಾಂಧೀಜಿಯವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ನಿಸ್ವಾರ್ಥ ಸಾಧಕರಿಗೆ ನೀಡಲು ಈ ಪುರಸ್ಕಾರವನ್ನು ಸ್ಥಾಪಿಸಿದ್ದಾರೆ.
2025ನೆಯ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಎಚ್.ಎಸ್. ಸುರೇಶ್ ರಾಜ್ಯ ಸರ್ವೊದಯ ಮಹಾಮಂಡಲದ ಅಧ್ಯಕ್ಷರು ಹಾಗೂ ಬರಹಗಾರರು. ರಾಜ್ಯ ಜ್ಯೂನಿಯರ್ ರೆಡ್ ಕ್ರಾಸ್ ಸಲಹೆಗಾರರಾಗಿ, ರಾಷ್ಟ್ರೀಯ ಸೇವೇ ಯೋಜನೆಯ ಪ್ರಾದೇಶಿಕ ಕೇಂದ್ರದ ಸಲಹೆಗಾರರಾಗಿ ಕೂಡ ಕಾರ್ಯ ನಿರ್ವಹಿಸಿರುವ ಇವರು ಗಾಂಧಿವಾದದ ಕುರಿತು ಮಹತ್ವದ ನಾಟಕಗಳನ್ನು ಬರೆದು ರಂಗಭೂಮಿಯ ಮೂಲಕ ಜಾಗೃತಿಯನ್ನು ಉಂಟು ಮಾಡಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಎ.ಆರ್. ನಾರಾಯಣ ಘಟ್ಟ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು ಎ.ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕರ್ನಾಟಕ ಡಾ. ಎಚ್.ಎಸ್. ಸುರೇಶ್ ಇವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಇವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.