ಕಾಸರಗೋಡು : “ಕಥೆಗಳು ಯಾವತ್ತೂ ಮನಸ್ಸಿನಲ್ಲಿ ಅನುರಣಿಸುವಂತಿರಬೇಕು. ಕಥೆಗಾರ ವೈ ಸತ್ಯನಾರಾಯಣ ಅವರು ಹೇಳಬೇಕಾದದ್ದನ್ನು ಅತ್ಯಂತ ಸರಳವಾಗಿ ಸುಂದರವಾಗಿ ನೇರವಾಗಿ ಹೇಳುವ ತಂತ್ರಗಾರಿಕೆಯುಳ್ಳವರು. ಅವರ 85ನೆಯ ವಯಸ್ಸಿನಲ್ಲೂ ಬರೆಯುವ ಛಾತಿ ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಅವರ ಶಿಷ್ಯನಾಗಿ ಗುರುಗಳ ಪುಸ್ತಕವನ್ನು ಬಿಡುಗಡೆಗೊಳಿಸಲು ಅವಕಾಶ ಮಾಡಿ ಕೊಟ್ಟಿರುವುದಕ್ಕಾಗಿ ಆಭಾರಿಯಾಗಿದ್ದೇನೆ. ಅದು ತನ್ನ ಪಾಲಿಗೆ ಪಂಚಾಮೃತ” ಎಂದರು.
ಅವರು ಕಾಸರಗೋಡಿನ ಖ್ಯಾತ ಕಥೆಗಾರ ಸಾಹಿತಿ ವೈ. ಸತ್ಯನಾರಾಯಣ ಅವರ ‘ಆಕಾಶದಿಂದ ಪಾತಾಳಕ್ಕೆ’ ಕಥಾ ಸಂಕಲನವನ್ನು ದಿನಾಂಕ 13 ಸಪ್ಟೆಂಬರ್ 2025ರಂದು ಪದ್ಮಗಿರಿ ಕಲಾ ಕುಟೀರದಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಇದೀಗ ಲೇಖಕರು ಪಾತಾಳದಿಂದ ಆಕಾಶದೆತ್ತರಕ್ಕೆ ಏರಿದ್ದಾರೆ ಎಂದರು.
ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿಯ ಸಹಯೋಗದೊಂದಿಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಮಾಡಿ ಮಾತನಾಡಿದ ಡಾ. ಪ್ರಮೀಳ ಮಾಧವ್ ವೈ. ಸತ್ಯನಾರಾಯಣ ಅವರ ಕಥೆಗಳು ಇವತ್ತಿನ ಸಮಾಜದಲ್ಲಿ ನಮ್ಮ ಸುತ್ತಮುತ್ತ ಕಂಡುಬರುವ ಪ್ರಚಲಿತ ವಿದ್ಯಮಾನಗಳ ಕಡೆಗೆ ಬೆಳಕು ಚೆಲ್ಲುತ್ತವೆ. ಈ ಕೃತಿಯಲ್ಲಿ ನಿರೂಪಿತವಾದ ಹೆಚ್ಚಿನ ಕಥೆಗಳಲ್ಲಿ ಮಾನವೀಯತೆ, ಕೃತಜ್ಞತೆ, ಆತ್ಮಾಭಿಮಾನಗಳ ಚಿತ್ರಣಗಳು ಮನಸ್ಸಿಗೆ ನಾಟುತ್ತವೆ” ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಬರಹಗಾರ ಟಿ. ಎ. ಎನ್. ಖಂಡಿಗೆ “ಇವತ್ತು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಕಾರ್ಪೊರೇಟ್ ಜಗತ್ತಿಗೆ ಸಿದ್ಧ ಸರಕುಗಳಾಗುತ್ತಿವೆ. ಈ ವಾಸ್ತವಿಕ ಸತ್ಯವನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬೇಕು. ತಲೆಮಾರುಗಳ ನಡುವೆ ನಡೆವ ಮೌಲ್ಯ ಸಂಘರ್ಷ ಮತ್ತು ನೈತಿಕ ಸಂಘರ್ಷಗಳು ವೈ. ಸತ್ಯನಾರಾಯಣ ಅವರ ಕಥೆಗಳಲ್ಲಿ ಕಂಡು ಬರುತ್ತವೆ. ಆಧುನೀಕತೆಯನ್ನು ಸ್ವೀಕರಿಸುವಲ್ಲಿ ಗ್ರಾಮಗಳು ಪಡುವ ತಲ್ಲಣ ಮತ್ತು ಆತಂಕಗಳನ್ನು ಅವರ ಹಾಸ್ಯ ಬರಹಗಳು ನವಿರಾಗಿ ಚಿತ್ರಿಸಿವೆ” ಎಂದರು. ಇನ್ನೊಬ್ಬ ಅತಿಥಿ ಖ್ಯಾತ ಕಾರ್ಟೂನಿಷ್ಟ್, ನಿವೃತ್ತ ಪ್ರಾಧ್ಯಾಪಕ ಪಿ. ಎನ್. ಮುಡಿತ್ತಾಯ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಥಾ ಸಂಕಲನಕ್ಕೆ ಮುಖಪುಟ ರಚಿಸಿದ ಖ್ಯಾತ ಕಾರ್ಟೂನಿಸ್ಟ್, ಲೇಖಕ ಬಾಲ ಮಧುರ ಕಾನನ ಮತ್ತು ಅವರ ಧರ್ಮಪತ್ನಿಯವರನ್ನು ಲೇಖಕ ವೈ. ಸತ್ಯನಾರಾಯಣ ಹಾಗೂ ಮಾಲತಿ ಎಸ್. ಜಿ. ಅವರು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಬಾಲ ಮಧುರ ಕಾನನ ಅವರ ಪರಿಚಯವನ್ನು ಖ್ಯಾತ ಸಾಹಿತಿ, ನಾಟಕಕಾರ ರಾಂ ಎಲ್ಲಂಗಳ ಮಾಡಿದರು. ರಂಗ ಚಿನ್ನಾರಿ ಸಂಸ್ಥೆಯ ವತಿಯಿಂದ ಲೇಖಕ ವೈ. ಸತ್ಯನಾರಾಯಣ ಅವರಿಗೆ ಶಾಲು ಹೊಂದಿಸಿ ಸ್ಮರಣಿಕ್ಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು ತನ್ನ ಮನಸ್ಸಿಗೆ ತಟ್ಟಿದ ಘಟನೆಗಳು ಕಥೆಗಳಾಗುವ ಬಗ್ಗೆ ಸ್ಥಳೀಯರು ಕೊಡುತ್ತಿರುವ ಪ್ರೋತ್ಸಾಹ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿಸಿದರು.
ಸ್ವರ ಚಿನ್ನಾರಿಯ ಬಬಿತ ಆಚಾರ್ಯ ಪ್ರಾರ್ಥಿಸಿ, ಕೆ. ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ನಾರಿ ಚಿನ್ನಾರಿಯ ಸರ್ವಮಂಗಳ ಟೀಚರ್ ಕಾರ್ಯಕ್ರಮ ನಿರೂಪಿಸಿ, ರಂಗ ಚಿನ್ನಾರಿಯ ಜನಾರ್ದನ ಅಣಗೂರು ವಂದಿಸಿದರು.