ಮಂಗಳೂರು : ಸರಯೂನ ಪುಸ್ತಕ ಬಿಡುಗಡೆ ಹಾಗೂ ಪಿ. ವಿ. ಪರಮೇಶ್ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16 ಸೆಪ್ಟೆಂಬರ್ 2025ರಂದು ಕದ್ರಿ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ (ರಿ) ಯ ನಂದಗೋಕಲ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷಗಾನ ಕಲಾವಿದರು ಬೆಳಗುತ್ತಾರೆ, ಕಾಲಾನಂತರ ಚರಿತ್ರೆಯಲ್ಲಿ ಮರೆಯಾಗಿ ಹೋಗುತ್ತಾರೆ. ಕಲಾಜಗತ್ತಿನಲ್ಲಿ ಪ್ರಜ್ವಲಿಸಿದ ಸತ್ತೂ ಜೀವಂತವಾಗಿರುವವರ ನೆನಪು ಸದಾ ಅಗತ್ಯ. ಸ್ವಯಂ ಸಾಧಕರಾದ ಪರಮೇಶ್ ರವರ ಅಕಾಲಿಕ ಮರಣ ಯಕ್ಷಗಾನ ರಂಗಭೂಮಿಗೆ ಒಂದು ಕೊರತೆಯಾಗಿ ಕಾಡುತ್ತದೆ. ಸರ್ವವಿಧದಲ್ಲೂ ಸಹಕಾರಿಯಾದ ಅವರ ನೆನಪನ್ನು ಹಸಿರಾಗಿಸುವ ಸರಯೂವಿನ ಪ್ರಯತ್ನ ಶ್ಲಾಘನೀಯವಾದುದು” ಎಂದರು.
ಯಕ್ಷಕಲಾವಿದ, ಕಲಾಪೋಷಕ ಪಣಂಬೂರು ವಾಸುದೇವ ಐತಾಳರು ಮಾತನಾಡಿ “ಪರಮೇಶ್ ರಂತಹಾ ಕಲಾವಿದರ ಅಗತ್ಯ ಯಕ್ಷಗಾನಕ್ಕೆ ಇದೆ. ಯಕ್ಷಗಾನದ ಹಿತದೃಷ್ಠಿಯಿಂದ ಹೊಸ ಹೊಸ ಪರಿಕಲ್ಪನೆಯ ಮೂಲಕ ಅದನ್ನು ಸಾಕಾರಗೊಳಿಸಿದ ಸ್ವಯಂ ರಂಗಕರ್ಮಿ . ಒಳ್ಳೊಳ್ಳೆಯ ಸಂಗತಿಗಳನ್ನು ಸರಳೀಕೃತಗೊಳಿಸಿ ರಂಗಕ್ಕೆ ಕೊಟ್ಟ ಸ್ವಯಂಭೂ ಸಾಧಕ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಇವರು (ಪದ್ದಣ್ಣ ಪ್ರಶಸ್ತಿ) ಅಮೇರಿಕಾ, ಜರ್ಮನಿ ಬಹರೈನ್, ಲಂಡನ್ ಗಳಿಗೆ ಯಕ್ಷಗಾನದ ಉದ್ದೇಶಕ್ಕಾಗಿಯೇ ಸಂಚರಿಸಿದ ಅಂತಾರಾಷ್ಟ್ರೀಯ ಕಲಾವಿದ. ಇಂತಹ ಅಪ್ಪಟ ಕಲಾವಿದನನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ರಾಜ, ಬಣ್ಣದ ವೇಷಧಾರಿ ಪಿ. ನಾಗೇಶ್ ಕಾರಂತರಿಗೆ ಪ್ರಶಸ್ತಿ ಪ್ರದಾನವಾಗುತ್ತಿರುವುದು ಸೂಕ್ತ” ಎಂದರು.
ಇದೇ ಸಂದರ್ಭದಲ್ಲಿ ಪಿ. ನಾಗೇಶ್ ಕಾರಂತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ನೇಹಾ ಚಂದ್ರಶೇಖರ್ ಸನ್ಮಾನ ಪತ್ರ ವಾಚಿಸಿದರು. ಪ್ರದೀಪ ಕಲ್ಕೂರರು ಮಾತನಾಡಿ ತಮ್ಮ ಹಾಗೂ ಪರಮೇಶರ ಒಡನಾಟವನ್ನು ಸ್ಮರಿಸಿಕೊಂಡರು.
ಶ್ರೀ ಕೃಷ್ಣ ಜನ್ಮಮಹೋತ್ಸವ ಸಮಿತಿ (ರಿ.)ಯ ಅಧ್ಯಕ್ಷ ಗೋಕುಲ್ ಕದ್ರಿ, ಉಪಾಧ್ಯಕ್ಷ ಕಿರಣ್ ಜೋಗಿ, ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಪ್ರಭಾಕರ ಅಡಿಗ, ಸುಧಾಕರ ರಾವ್ ಪೇಜಾವರ, ಶ್ರೀಮತಿ ಸುಭದ್ರಾ ದೇವಿ, ಜಿ. ಕೆ. ಭಟ್ ಸೆರಾಜೆ, ಡಾ. ವಸಂತಕುಮಾರ್ ಶೆಟ್ಟಿ, ಪುನೀತ್ ಬೆಂಗಳೂರು ಅತಿಥಿಗಳಾಗಿದ್ದರು.
ಜನಾರ್ಧನ ಹಂದೆ ಪ್ರಾರ್ಥನೆಗೈದು, ವರ್ಕಾಡಿ ರವಿ ಅಲೆವೂರಾಯರು “ಯಕ್ಷರಜತ” ಪುಸ್ತಕದ ಪರಿಚಯ ಮಾಡಿ, ಸ್ವಾಗತಿಸಿ, ನಾಗೇಶ್ ದೇವಾಡಿಗ ಸಹಕರಿಸಿ, ಧನ್ಯವಾದವಿತ್ತರು.
ಸಭಾಕಾರ್ಯಕ್ರಮದ ಬಳಿಕ ಸರಯೂ ತಂಡದಿಂದ ಲಕ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯರ ಹಿಮ್ಮೇಳದೊಂದಿಗೆ “ಶ್ರೀಕೃಷ್ಣ ಪಾರಮ್ಯ” ಎಂಬ ಪ್ರಸಂಗದ ಬಯಲಾಟ ನೆರವೇರಿತು. ಅತಿಥಿಯಾಗಿ ಪ್ರೇಮ್ ರಾಜ್, ಕೊಯ್ಲ ಭಾಗವಹಿಸಿದ್ದರು.