ಧಾರವಾಡ : ಬೆಂಗಳೂರಿನ ಪ್ರತಿಷ್ಠಿತ ‘ರಂಗ ಶಂಕರ’ ಸಂಸ್ಥೆಯು ಉದಯೋನ್ಮುಖ ರಂಗ ನಿರ್ದೇಶಕರಿಗಾಗಿ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಾಟಕ ನಿರ್ಮಿಸಿ ನಿರ್ದೇಶನದ ಅವಕಾಶ ಕಲ್ಪಿಸುವ ಪ್ರೋತ್ಸಾಹಕ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಅಂಗವಾಗಿ ಯುವ ನಿರ್ದೇಶಕ ಶ್ರೀ ವಿನಯ್ ಶಾಸ್ತ್ರಿ ಇವರ ಸಾರಥ್ಯದಲ್ಲಿ ಧಾರವಾಡದ ಹಿರಿಯ ರಂಗ ಸಂಸ್ಥೆ, ಅಭಿನಯ ಭಾರತಿಯು ಶ್ರೀರಂಗರ ‘ರಂಗ ಭಾರತ’ ಎಂಬ ಸುಪ್ರಸಿದ್ಧ ನಾಟಕವನ್ನು ನವೆಂಬರ್ ಮೊದಲ ವಾರದಲ್ಲಿ ಪ್ರಥಮ ಪ್ರದರ್ಶನ ಏರ್ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಈ ನಾಟಕದ ರಿಹರ್ಸಲ್, ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, ಈ ನಾಟಕದಲ್ಲಿ ಭಾಗವಹಿಸುವ ಆಸಕ್ತಿಯುಳ್ಳ ಕಲಾವಿದರಿಂದ ಅರ್ಜಿ ಆಹ್ವಾನಿಸುತ್ತಿದೆ. ಈ ನಾಟಕವು ಪುರುಷ ಪ್ರಧಾನ ನಾಟಕವಾಗಿದ್ದು ಸುಮಾರು ಹತ್ತರಿಂದ ಹದಿನೈದು ಕಲಾವಿದರು ಬೇಕಾಗಬಹುದು. ಒಂದೆರಡು ಸ್ತ್ರೀ ಪಾತ್ರಗಳೂ ಇರಬಹುದು. ಕಾರಣ ಈ ನಾಟಕಕ್ಕೆ 15ರಿಂದ 60 ವಯಸ್ಸಿನೊಳಗೆ ಇರುವ ರಂಗ ಭೂಮಿಯಲ್ಲಿ ಆಸಕ್ತಿ ಹಾಗೂ ಬದ್ಧತೆಯುಳ್ಳ ಕಲಾವಿದರು ಬೇಕಾಗಿದ್ದಾರೆ. ಈ ಯೋಜನೆಯಲ್ಲಿ ಆಯ್ಕೆಯಾದ ಕಲಾವಿದರಿಗೆ ಯಾವ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ. ಕಲಾವಿದರು ಮಾತ್ರ ಸಂಪೂರ್ಣ ಬದ್ಧತೆಯಿಂದ ನಾಟಕದ ಪೂರ್ವಸಿದ್ಧತೆ ಹಾಗೂ ರಿಹರ್ಸಲ್ ಗಳಿಗೆ ಕಡ್ಡಾಯವಾಗಿ ಹಾಜರಾಗಿರಬೇಕು. ಮಧ್ಯಂತರದಲ್ಲಿ ಅನಧಿಕೃತ ಗೈರುಹಾಜರಿಗೆ ಅವಕಾಶವಿರುವುದಿಲ್ಲ. ಶನಿವಾರ, ರವಿವಾರ ಹಾಗೂ ಸರಕಾರಿ ರಜಾ ದಿನಗಳಂದು ಹೆಚ್ಚಿನ ಅವಧಿಯ ರಂಗ ತಾಲೀಮು ಹಾಗೂ ರಿಹರ್ಸಲ್ ಗೆ ಸಿದ್ದರಾಗಿರಬೇಕು. ಆಯ್ಕೆಯಾದವರಲ್ಲಿ ಕೆಲವು ಕಲಾವಿದರನ್ನು ನಾಟಕದ ಇತರ ಚಟುವಟಿಕೆಗಳಿಗೆ (ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ದೃಶ್ಯ ಸಂಯೋಜನೆ, ಸಂಗೀತ, ನೆಳಲು ಬೆಳಕು) ಬಳಸಿಕೊಳ್ಳಬಹುದು.
ಆಸಕ್ತ ಕಲಾವಿದರು ದಿನಾಂಕ 30 ಸೆಪ್ಟೆಂಬರ್ 2025ರೊಳಗಾಗಿ ನೋಂದಾಯಿಸಿ, ತಮ್ಮ ಫೋಟೋ, ಸ್ವ-ವಿವರ, ರಂಗ ಚಟುವಟಿಕೆ ದಾಖಲೆಗಳು, ಸಂಪರ್ಕ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇವುಗಳೊಂದಿಗೆ ದಿನಾಂಕ 04 ಅಕ್ಟೋಬರ್ 2025ರಂದು ರಂಗಾಯಣ ಆವರಣದಲ್ಲಿರುವ ರಿಹರ್ಸಲ್ ಹಾಲ್ ದಲ್ಲಿ ಬೆಳಿಗ್ಗೆ 11-00 ಗಂಟೆಗೆ ನಡೆಯುವ ‘ಆಡಿಷನ್’ಗೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಅಭಿನಯ ಭಾರತಿ ಅಧ್ಯಕ್ಷ ಶ್ರೀ ಅರವಿಂದ್ ಕುಲಕರ್ಣಿ (8073479394), ಕಾರ್ಯದರ್ಶಿ ಶ್ರೀ ಸಮೀರ್ ಜೋಶಿ (9845447002) ಹಾಗೂ ಶ್ರೀಮತಿ ಜ್ಯೋತಿ ಪುರಾಣಿಕ-ದೀಕ್ಷಿತ್ (9945023994) ಇವರನ್ನು ಸಂಪರ್ಕಿಸಬಹುದು.