Subscribe to Updates

    Get the latest creative news from FooBar about art, design and business.

    What's Hot

    ಸಮೂಹ ಕಲಾಲಾಂಛನದ ‘ಶಬರಿ’ ನೃತ್ಯನಾಟಕ ಪ್ರದರ್ಶನ

    September 20, 2025

    ಮೈಸೂರು ದಸರಾದ ಅರಮನೆ ವೇದಿಕೆಯಲ್ಲಿ ಡಾ. ಮೊಹಸಿನ್‌ ಖಾನರ ಸಿತಾರ್‌ ಝೇಂಕಾರ

    September 20, 2025

    ಬೆಂಗಳೂರಿನ ಬಿ.ಪಿ. ವಾಡಿಯಾ ಹಾಲ್ ನಲ್ಲಿ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ | ಸೆಪ್ಟೆಂಬರ್ 21

    September 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ಮಕ್ಕಳ ರಂಗಭೂಮಿ ಬಗ್ಗೆ – ಮಹಾನ್ ರಂಗಕರ್ಮಿ ಬಿ.ವಿ. ಕಾರಂತ
    Special Article

    ವಿಶೇಷ ಲೇಖನ | ಮಕ್ಕಳ ರಂಗಭೂಮಿ ಬಗ್ಗೆ – ಮಹಾನ್ ರಂಗಕರ್ಮಿ ಬಿ.ವಿ. ಕಾರಂತ

    September 19, 2025No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಇವತ್ತು ಸೆಪ್ಟೆಂಬರ್ 19, ಬಿ.ವಿ. ಕಾರಂತರ ಜನುಮದಿನ. ಈ ನೆನಪಿನಲ್ಲಿ ಬಿ.ವಿ. ಕಾರಂತರು (ಬಾಬುಕೋಡಿ ವೆಂಕಟರಮಣ ಕಾರಂತ) ಹೇಳಿರುವ ‘ಮಕ್ಕಳ ರಂಗಭೂಮಿ’ ಕುರಿತ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. 1998ರ ಅಕ್ಟೋಬರ್ 10ರಿಂದ 17ರ ತನಕ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೇತೃತ್ವದಲ್ಲಿ ಬಿ.ವಿ. ಕಾರಂತರು ನಿರ್ದೇಶಕರಾಗಿ ಭಾಗವಹಿಸಿದ ತುಳುರಂಗ ಶಿಬಿರದಲ್ಲಿ ಕಾರಂತರು ಹೇಳಿದ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಬಿ.ಎ. ವಿವೇಕ ರೈಗಳ ಆಸಕ್ತಿಯಿಂದ ಕಾರಂತರನ್ನು ಮಂಗಳೂರಿಗೆ ಬರಮಾಡಿಸಿಕೊಂಡು 1998ರ ಅಕ್ಟೋಬರ್ ತಿಂಗಳಲ್ಲಿ ಮೊದಲ ಬಾರಿಗೆ ಎನ್ನುವ ಹಾಗೆ ಎಂಟು ದಿನಗಳ ಅವಧಿಯ ರಂಗ ಶಿಕ್ಷಣ ಕಮ್ಮಟವನ್ನು ಏರ್ಪಡಿಸಲಾಯಿತು. ರಂಗ ಕಮ್ಮಟದ ನಿರ್ದೇಶಕರಾಗಿ ಬಿ.ವಿ. ಕಾರಂತರ ನೇತೃತ್ವ ಇದ್ದರೆ ನಾನು [ಐ.ಕೆ. ಬೊಳುವಾರು] ಮತ್ತು ಸುರೇಶ ಹಂದಾಡಿಯವರು ಸಹಾಯಕರಾಗಿ ಸೇರಿಕೊಂಡಿದ್ದೆವು. 42 ಮಕ್ಕಳು ಭಾಗವಹಿಸಿದ ಈ ಕಮ್ಮಟದ ಅವಧಿಯಲ್ಲಿ ತುಳು ಭಾಷಾ ಕಲಿಕೆಯ ನಾನಾ ಚಟುವಟಿಕೆಗಳೊಂದಿಗೆ ಹಿಂದಿಯ ಖ್ಯಾತ ಲೇಖಕ ಮುನ್ಶಿ ಪ್ರೇಮಚಂದ್ರರ ಈದ್ಗಾ ಕಥೆಯನ್ನಾದರಿಸಿ ‘ಜಾತ್ರೆ’ ಹೆಸರಿನ ತುಳು ಮಕ್ಕಳ ನಾಟಕವನ್ನು ವಿಶಿಷ್ಟ ಬಗೆಯಲ್ಲಿ ಪ್ರದರ್ಶಿಸಲಾಯಿತು. ಆ ಸಂದರ್ಭದಲ್ಲಿ ಬಿ.ವಿ. ಕಾರಂತರು ಮಾತನಾಡಿದ ಮಾತಿನ ತುಣುಕುಗಳು ಮಕ್ಕಳ ರಂಗಭೂಮಿಯ ಕೆಲಸಗಾರರಿಗೆ ಶಿಕ್ಷಣ- ಭಾಷೆ ಮತ್ತು ತರಬೇತಿಗೆ ಸಂಬಂಧಿಸಿದ ಅತ್ಯಮೂಲ್ಯ ರಂಗಪಾಠ ಎಂಬಂತೆ ಇರುವುದರಿಂದ ಇಲ್ಲಿ ಗಮನಿಸಬಹುದು.

    ಮಕ್ಕಳ ನಾಟಕಗಳಿಗೆ ಪ್ರತ್ಯೇಕ ಅಸ್ತಿತ್ವ ಬೇಕು. ಮಕ್ಕಳು ಬಾಳಲು ಕಲಿತು ಉತ್ತಮ ನಾಗರಿಕರಾಗುವುದೇ ತಾನು ನಡೆಸುವ ಮಕ್ಕಳ ನಾಟಕ ತರಬೇತಿಗಳ ಮುಖ್ಯ ಅಂಶವಾಗಿದೆ. ಮಕ್ಕಳ ನಾಟಕಗಳಿಗೆ ಪ್ರತ್ಯೇಕ ಅಸ್ತಿತ್ವವಿದೆ. ಮಕ್ಕಳು ಖುಷಿಪಟ್ಟು ಆಟವಾಡುತ್ತಾರೆ. ದೊಡ್ಡವರು ಎನಿಸಿಕೊಂಡವರಿಗೆ ತಮ್ಮಿಂದ ಸಾಧ್ಯವಾಗದನ್ನು ಮಾಡಲು ಹೀರೋಗಳು ಬೇಕಾಗುತ್ತಾರೆ. ಅವರ ನಾಟಕದಲ್ಲೂ ಹೀರೋ ಇರುತ್ತಾನೆ. ಹೀರೋಯಿನ್ ಇರುತ್ತಾಳೆ. ಆದರೆ ಮಕ್ಕಳ ನಾಟಕಗಳಲ್ಲಿ ಹೀರೋ ಕಲ್ಪನೆ ಇರುವುದಿಲ್ಲ. ಅಲ್ಲಿ ಎಲ್ಲರೂ ಸಮಾನರಾಗಿರುತ್ತಾರೆ. ಅಲ್ಲಿ ತಂಡ ಗುಂಪುಗಳಿಗೆ ಮಹತ್ವವಿರುತ್ತದೆ. ಅವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನಾಟಕವನ್ನು ಕಟ್ಟುತ್ತಾರೆ. ಹಾಗೂ ತನ್ನತನವನ್ನು ಬೆಳೆಸುವುದಕ್ಕೆ ಮಹತ್ವ ನೀಡುತ್ತಾರೆ.

    ಲಿಪಿ ಇಲ್ಲದ ಆಡು ಭಾಷೆ (ಡೈಯಲೆಕ್ಟ್) ತನಗೆ ಇಷ್ಟವಾದ ವಿಚಾರವಾಗಿದೆ. ಆ ಬಗೆಯ ತುಳು ನಾಟಕ ನಡೆಸುವುದು ತನ್ನ ಇಷ್ಟದ ಕೆಲಸವಾಗಿದೆ. (ಆ ದಿನಗಳಲ್ಲಿ ಇನ್ನೂ ತುಳು ಲಿಪಿಯ ಕುರಿತಾಗಿ ವಿಶೇಷ ಅಧ್ಯಯನ ಸಂಶೋ ಧನೆಗಳು ನಡೆದಿರಲಿಲ್ಲ.) ಮಕ್ಕಳು ಚಿಕ್ಕವರಿರಬಹುದು ಆದರೆ ಅವರು ಎಂದಿಗೂ ವಸ್ತುಗಳಲ್ಲ. ಅವರಿಗೂ ಒಂದು ವ್ಯಕ್ತಿತ್ವವಿದೆ. ಹಾಗಾಗಿ ಅವರಿಗಾಗಿ ಮಾಡುವ ನಾಟಕ ದೊಡ್ಡವರ ನಾಟಕದ ಅನುಕರಣೆ ಅಲ್ಲ. ಬದಲಿಗೆ ಅದೊಂದು ಸಂಪೂರ್ಣ ಸ್ವತಂತ್ರ ರೂಪದ ಕಲಾಮಾಧ್ಯಮವಾಗಿದೆ. ಮಕ್ಕಳಿಗೆ ಸಮುದಾಯ ಅಥವಾ ಒಡನಾಟದ ಕೂಟಗಳ ಮೂಲಕ ಸ್ವತಂತ್ರ ವ್ಯಕ್ತಿತ್ವ ಹಾಗೂ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಾಗ ಮುಂದಿನ ದಿನಗಳಲ್ಲಿ ಅವರನ್ನು ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಿದೆ.

    ಮಕ್ಕಳಿಗೆ ನಾವು ನೀಡುವುದು ದೊಡ್ಡವರಿಗೆ ಕೊಡಮಾಡುವ ಯಾವುದೇ ಸಂಗತಿಗಳ ‘ಅರ್ಧ’ವಲ್ಲ. ಮಕ್ಕಳಿಗೆ ಬೇಕಿರುವುದು ಪೂರ್ಣತೆ. ಮಕ್ಕಳ ನಾಟಕಕ್ಕೆ ಒಂದು ಸ್ಕ್ರಿಪ್ಟ್ ಇರುವುದಿಲ್ಲ. ಅದಕ್ಕೆ ಕೇವಲ ಒಂದು ಡ್ರಾಫ್ಟ್ ಇರುತ್ತದೆ. ಅದನ್ನು ಮಕ್ಕಳು ಅವರಿಗೆ ಬೇಕಿದ್ದಂತೆ ಬದಲಾಯಿಸುತ್ತಾರೆ. ಮಕ್ಕಳ ನಾಟಕದಲ್ಲಿ ಎಂದಿಗೂ ಪ್ರೇಕ್ಷಕರು ಮುಖ್ಯವಾಗುವುದಿಲ್ಲ. ಬದಲಿಗೆ ಮಕ್ಕಳು ನಾಟಕವನ್ನು ಅಭಿನಯಿಸುವುದರ ಮೂಲಕ ಪಡೆಯುವ ಸಂತೋಷ ಮುಖ್ಯವಾಗುತ್ತದೆ. ಮಕ್ಕಳ ನಾಟಕದಲ್ಲಿ ಹೀರೋ ಮುಖ್ಯವಾಗುವುದಿಲ್ಲ. ಇಲ್ಲಿ ಇಡೀ ತಂಡವೇ ಹೀರೋ ಆಗಿ ಪ್ರಾಮುಖ್ಯತೆ ಪಡೆಯುತ್ತದೆ.

    ಯಾವತ್ತೂ ಕಲೆಗೆ ಕಾಲ ಮತ್ತು ಸ್ಥಳದ ಬಂಧನಗಳಿಲ್ಲ.ಅದು ಅವೆರಡಕ್ಕೂ ಅತೀತವಾದದ್ದು. ಹಾಗೆಯೇ ಕಲೆಯಲ್ಲಿ ಹಿರಿ-ಕಿರಿತನಗಳಿಲ್ಲ. ನಾಟಕವಂತೂ ಯಾವಾಗಲೂ ಒಂದು ಪ್ರದರ್ಶನವಾಗಿ ಉಳಿದಿರುವುದಿಲ್ಲ. ಅದು ಯಾವಾಗಲೂ ಒಂದು ಪ್ರಯೋಗವಾಗಿರುತ್ತದೆ .ಪ್ರತೀ ಬಾರಿ ರಂಗದಮೇಲೆ ನಾಟಕವೊಂದು ಅನಾವರಣಗೊಳ್ಳುವಾಗಲೂ ಹೊಸ ರೂಪಗಳನ್ನು ಪಡೆಯುತ್ತಾ ಹೋಗುತ್ತದೆ. ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಅವರಲ್ಲಿರುವ ಸುಪ್ತಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ನಾಟಕಗಳು ಮನುಷ್ಯನನ್ನು ನಾಗರಿಕನಾಗಿ ಹೇಗೆ ಬಾಳಬೇಕು ಎಂಬುದನ್ನು ಕಲಿಸಿಕೊಡುತ್ತದೆ.

    ಸಿನಿಮಾಗಳಲ್ಲಿ ಕಂಡುಬರುವ ಹೀರೋಯಿಸಂಗೆ ಪ್ರಾಮುಖ್ಯತೆ ಇದೆ ಎಂಬ ಭ್ರಮೆ ಬಹಳ ಜನರಲ್ಲಿ ಇದೆ. ಇದು ನಿಜ ಕಲಾವಿದರಿಗೂ ತೊಂದರೆ ಉಂಟು ಮಾಡಿದೆ. ನೈಜ ಕಲಾವಿದನು ತನ್ನ ಕಲೆಯನ್ನು ಪ್ರದರ್ಶಿಸುವ ಬದಲು ಬೇರೆ ಯಾರನ್ನು ಅನುಕರಿಸಬೇಕು ಎಂದು ಜನರು ಬಯಸುತ್ತಿರುವುದು ಸಿನಿಮಾಗಳಿಂದಾಗಿರುವ ದೊಡ್ಡಹಾನಿ ಎಂದು ತಿಳಿಯಬೇಕಾಗಿದೆ. ಸಿನಿಮಾಗಳಲ್ಲಿ ಇರುವಂತೆ ನಾಟಕಗಳಲ್ಲಿ ನಾಯಕ ಇರುವುದಿಲ್ಲ. ಇದೊಂದು ಉತ್ತಮ ಅಂಶ. ಮಕ್ಕಳ ನಾಟಕಗಳನ್ನು ನಿರ್ಮಿಸುವಾಗಲು ಇಂಥ ಎಚ್ಚರಿಕೆ ಅಗತ್ಯ. ಮಕ್ಕಳ ನಾಟಕಗಳಲ್ಲೂ ನಾಯಕ ಇರುವುದಿಲ್ಲ. ಇಲ್ಲಿ ಇಡೀ ತಂಡವೇ ಮುಖ್ಯವಾಗುತ್ತದೆ.

    ಮಕ್ಕಳು ಮುಕ್ತವಾತಾವರಣದಲ್ಲಿ ಬೆಳೆಯಬೇಕು. ಅವರು ಇಂತವರನ್ನೇ ಅನುಕರಣೆ ಮಾಡಬೇಕು ಎಂದು ದೊಡ್ಡವರು ಒತ್ತಡ ಹೇರುವುದು ಸರಿಯಲ್ಲ. ಅವರು ಸ್ವತಂತ್ರವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವಕಾಶ ಇರಬೇಕು. ಮಕ್ಕಳು ‘ಅರ್ಧ ’ ಅಲ್ಲ. ಅವರಿಗೆ‘ ಪೂರ್ಣ ವ್ಯಕ್ತಿತ್ವ ಇದೆ ಎಂಬ ಭಾವನೆಯನ್ನು ಅವರಲ್ಲಿ ‘ಮೂಡಿಸಬೇಕು. ಬದುಕು ಸುಂದರವಾಗ ಬೇಕಾದರೆ ಬಾಳಲು ತಿಳಿದಿರಬೇಕು . ಹೇಗಾದರೂ ಬದುಕುವುದು ಸುಲಭ. ಆದರೆ ವ್ಯವಸ್ಥಿತವಾಗಿ ಬಾಳುವುದು ಸುಲಭವಲ್ಲ. ವ್ಯಕ್ತಿಯ ಬದುಕು ಹಸನಾಗಬೇಕಾದರೆ ಕಲೆಯನ್ನು ಅರಿತಿರಬೇಕು.ಈ ದಿಸೆಯಲ್ಲಿ ಮಕ್ಕಳಿಗೆಬಾಳ್ವೆಯ ಶಿಕ್ಷಣ ಅಗತ್ಯವಾಗಿದ್ದು ಅದನ್ನು ಎಳೆಯ ಪ್ರಾಯದಲ್ಲಿಯೇ ನೀಡಬೇಕು. ಆಗ ಬಾಳುವ ಕಲೆ ಅರಿತವರಿಗೆ ಬದುಕು ಹಸನಾಗುತ್ತದೆ ಎಂದೂ ಅರಿವಾಗುತ್ತದೆ.

    ಈಗಿನ ಹಲವು ನಾಟಕಗಳಲ್ಲಿ ಮಕ್ಕಳ ವಿಕಾಸಕ್ಕೆ ಬೇಕಾಗಿರುವ ಪೂರಕ ಅಂಶಗಳು ಇಲ್ಲ. ಮಕ್ಕಳಿಗೆ ಏನು ಬೇಕಾಗಿದೆಯೋ ಅದನ್ನು ಒದಗಿಸಬಲ್ಲ ಅಂಶಗಳನ್ನು ನಾಟಕಗಳು ಹೊಂದಿರ ಬೇಕಾಗಿರುವುದರಿಂದ ವ್ಯಾಪಾರದ ಉದ್ದೇಶವನ್ನು ಬದಿಗಿಟ್ಟು ಸೃಜನಶೀಲತೆಯೊಂದಿಗೆ ಅದು ಬೆಳೆದು ಬರುವ೦ತಾಗಬೇಕು. ಕಲೆಗೆ ಯಾವುದೇ ವಯಸ್ಸಿನ ಪರಿಮಿತಿ ಇಲ್ಲ. ಅಲ್ಲಿ ಹಿರಿಯ –ಕಿರಿಯನೆಂಬ ಭೇದಗಳಿಲ್ಲದೆ ಕಲಿಯಲಾಗುತ್ತದೆ. ಕಲೆ ಎನ್ನುವುದು ಸಮಯ ಮತ್ತು ಸ್ಥಳಗಳ ಒತ್ತಡಗಳಿಲ್ಲದೆ ನಡೆಯುವ ಒಂದು ರಂಗವಾಗಿದ್ದು ಅಲ್ಲಿ ಮಕ್ಕಳಿಗೆ ಅವಕಾಶ ನೀಡಬೇಕಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ನೀಡಿದಲ್ಲಿ ಮುಂದೆ ಅವರು ಸಮಾಜದಲ್ಲಿ ಗುರುತಿಸಲ್ಪಡಬಲ್ಲ ಒಬ್ಬ ವ್ಯಕ್ತಿಯಾಗಿ ಬೆಳೆಯಬಲ್ಲರು. ಆದ್ದರಿಂದ ಓದಿ ಅರ್ಥ ಮಾಡಿಕೊಳ್ಳಬಲ್ಲ ಮಕ್ಕಳ ಸಾಹಿತ್ಯ ಅವರಿಗೆ ಅಗತ್ಯವಾಗಿದೆ.

    ಮಕ್ಕಳಲ್ಲಿ ಸ್ವಂತ ವ್ಯಕ್ತಿತ್ವ ಬೆಳೆಯಲು ಅವಕಾಶ ಮಾಡಿಕೊಡಬೇಕು. ಅವರಿಗೆ ಬಾಳುವ ಕಲೆಯನ್ನು ಕಲಿಸಬೇಕು. ಇದಕ್ಕೆ ನಾಟಕವೇ ಉತ್ತಮ ಕಲೆಯಾಗಿರುತ್ತದೆ. ಮಕ್ಕಳಿಗೆ ಏನು ಬೇಕೋ ಅದನ್ನು ಕೊಡಬೇಕೇ ಹೊರತು, ದೊಡ್ಡವರು ತಮಗೆ ಬೇಕಾದುದನ್ನು ಅವರ ಮೇಲೆ ಹೇರಬಾರದು. ಮಕ್ಕಳ ವ್ಯಕ್ತಿತ್ವ ಬೆಳೆಯಲು ರಂಗಭೂಮಿಯಲ್ಲಿ ಹೆಚ್ಚು ಅವಕಾಶವಿದೆ. ಬದುಕುವುದು ಬೇರೆ- ಬಾಳುವುದು ಬೇರೆ. ಮಕ್ಕಳಿಗೆ ಬದುಕುವುದನ್ನು ಕಲಿಸಬೇಕಾಗಿಲ್ಲ, ಬಾಳುವುದನ್ನು ಕಲಿಸಬೇಕು. ರಂಗಭೂಮಿಯಲ್ಲಿ ತಾವು ಸುಖ ಅನುಭವಿಸದೆ ಕೇವಲ ಪ್ರೇಕ್ಷಕರು ಸುಖ ಅನುಭವಿಸಿದರೆ ಸಾಲದು. ಮಕ್ಕಳು ತಾವು ತಮ್ಮ ನಟನೆಯನ್ನು ಅನುಭವಿಸುವಂತಹ ಅವಕಾಶವಿರಬೇಕು. ಮಕ್ಕಳ ನಾಟಕ ದೊಡ್ಡವರ ನಾಟಕದ ಸಂಸ್ಕರಣ ಅಲ್ಲ. ಅದಕ್ಕೆ ಸ್ವತಂತ್ರ ಅಸ್ತಿತ್ವವಿದೆ.

    ಬಾಲ್ಯವನ್ನು ನೂರಕ್ಕೆ ನೂರರಷ್ಟು ಉಪಯೋಗಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಮಕ್ಕಳಿಗೆ ಕಲ್ಪಿಸಿಕೊಳ್ಳುವಲ್ಲಿ ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ. ನಾವು ಮಕ್ಕಳಿಗೆ ಏನೂ ಮಾಡಿಯೇ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಮಕ್ಕಳನ್ನು ತುಂಬಾ ಇಂಡಿಜುವಲಿಸ್ಟಿಕ್ ಆಗಿ ಬೆಳೆಸುತ್ತಿದ್ದೇವೆ .ಕೇವಲ ಪದವಿ, ಮತ್ತೊಂದು ಪದವಿ .ಮತ್ತೆ ಕೆಲಸ. ಹೀಗೆ ಇಂತಹ ಕಾರಣಗಳಿಗೆ ಮಾತ್ರ ಅವರನ್ನು ಬೆಳೆಸುತ್ತಿದ್ದೇವೆಯೇ ಹೊರತು, ಅವರನ್ನು ಒಬ್ಬ ನಾಗರೀಕನಾಗಿ ಬೆಳೆಸಲು ಯಾರೂ ಮುಂದಾಗುತ್ತಿಲ್ಲ. ಮಕ್ಕಳಿಗೆ ನಾವು ಕಲಿಸುವ ಯಾವುದೇ ವಿಷಯಗಳು ಫಲಿತಾಂಶವನ್ನು ಮುಖ್ಯವಾಗಿ ಇಟ್ಟುಕೊಂಡಿರುವುದಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ. ಮಕ್ಕಳ ಕಲಿಕೆಯ ಪ್ರಕ್ರಿಯೆ ಬಹಳ ಮುಖ್ಯ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲವನ್ನು ಅವರಿಗೆ ಕಲಿಸಬೇಕಾಗಿದೆ.

    ಸಂಘಜೀವಿಯಾಗಿರುವ ಮನುಷ್ಯನ ಮಟ್ಟಿಗೆ ಹೇಳುವುದಾದರೆ ಮಕ್ಕಳಿಗೆ ನಾಟಕದಂತಹ ಕಲೆಯನ್ನು ಕಲಿಸುವುದು ಬಹಳ ಉತ್ತಮ. ಏಕೆಂದರೆ ನಾಟಕದಲ್ಲಿ ಕೇವಲ ‘ನಾನು’ ಮತ್ತು ‘ನೀನು’ ಇರುವುದಲ್ಲ. ಅದರಲ್ಲಿ ‘ಅವನು’ ಕೂಡ ಇದ್ದಾನೆ. ‘ಅವನ’ ಕುರಿತಂತೆ ಮಾತನಾಡಲು ಮತ್ತು ಆಸಕ್ತಿ ಹುಟ್ಟಿಸಲು ನಾಟಕ ಕಾರಣವಾಗುತ್ತದೆ. ಇದು ಮಕ್ಕಳನ್ನು ಒಬ್ಬ ಉತ್ತಮ ನಾಗರೀಕನಾಗಿ ಬೆಳೆಯಲು ಸಹಕರಿಸುತ್ತದೆ.

    ಮಕ್ಕಳಿಗೆ ನೀಡುವ ನಾಟಕ ತರಬೇತಿ ಅವರ ನೆನಪಿನಲ್ಲಿ ದೀರ್ಘ ಕಾಲ ಉಳಿಯುತ್ತದೆ. ಮುಂದೊಂದು ದಿನ ಅವರು ಏನೋ ಸಾಧನೆ ಮಾಡುವಾಗ ಅದು ಪ್ರತಿಬಿಂಬಿಸುತ್ತದೆ. ನಾಟಕದ ಪ್ರಕ್ರಿಯೆಯಲ್ಲಿ ಅವನಿಗೆ ಸ್ಥಾನವಿಲ್ಲದೆ ಹೋದರೆ ನಾಟಕಕ್ಕೆ ಅರ್ಥವೇ ಇರುವುದಿಲ್ಲ. ಅದು ನಾಟಕವೂ ಆಗುವುದಿಲ್ಲ. ‘ಅವನ’ ಬಗ್ಗೆ ಕಲಿಸಿಕೊಡುವ ನಾಟಕ ಮಕ್ಕಳನ್ನು ಬಾಳಿನಲ್ಲಿ ಕಲಾವಿದನನ್ನಾಗಿ ಬೆಳೆಸುತ್ತದೆ. ಸಮೂಹದಿಂದ ಗುಂಪಾಗಿ, ಗುಂಪು ತಂಡವಾಗಿ, ಮಾರ್ಪಾಡು ಆಗುತ್ತದೆ. ನಾಟಕದಂತಹ ಕಲೆಗಳ ಮಹತ್ವ, ಗುಂಪೊಂದು ತಂಡವಾಗುವ ಉದ್ದೇಶಕ್ಕೆ ಕೆಲಸ ಮಾಡುವ ಪ್ರಕ್ರಿಯೆ, ಮಕ್ಕಳಲ್ಲಿ ಸಂವೇದನಾಶೀಲತೆಯನ್ನು ಬೆಳೆಸುತ್ತದೆ ಮತ್ತು ನಾಟಕ ನಾಗರೀಕತೆಯನ್ನು ಕಲಿಸುತ್ತದೆ.

    ನಾಟಕ ಕಲಿತರೆ ಮಕ್ಕಳ ಬುದ್ಧಿ ಕುಂಠಿತವಾಗುತ್ತದೆ, ನಾಟಕ ಕಲಿತ ಮಕ್ಕಳು ಹಾಳಾಗುತ್ತಾರೆ, ಮಕ್ಕಳು ಓದುವುದಿಲ್ಲ ಎಂಬ ಮೂಢನಂಬಿಕೆಗಳನ್ನು ಪಾಲಕರು ಬಿಡಬೇಕು. ನಾಟಕದಲ್ಲಿನ ಪಾತ್ರದಲ್ಲಿ ಇರುವುದು ಭಾಗವಹಿಸುವುದು ಮಕ್ಕಳಿಗೆ ಮಾನಸಿಕವಾಗಿ ಎಚ್ಚರವಾಗಿರಲು ಕಲಿಸುತ್ತದೆ. ಅದರಿಂದಾಗಿ ದಡ್ಡ ಮಕ್ಕಳೆಂದು ಕರೆಸಿಕೊಳ್ಳುವವರು ಕೂಡಾ ಕಲಿಕೆಯಲ್ಲಿ ಚುರುಕಾಗುತ್ತಾರೆ. ನಾಟಕಕ್ಕೆ ಬೇಕಾಗುವಷ್ಟು ಮಾನಸಿಕ ಎಚ್ಚರ ಬೇರೆ ಯಾವುದಕ್ಕೂ ಬೇಡ. ಇತರರ ಬಗೆಗೆ ಸಕಾರಾತ್ಮಕವಾದ ಆಸಕ್ತಿಯನ್ನು ನಾಟಕ ಬೆಳೆಸುತ್ತದೆ. ಮತ್ತು ಇತರರ ಜೊತೆಗೆ ಹೊಂದಿಕೊಂಡು ಅರ್ಥಪೂರ್ಣವಾಗಿ ಬಾಳುವುದನ್ನು ಕಲಿಸುತ್ತದೆ.

    ಮಕ್ಕಳು ಇಂದು ತಮ್ಮ ಬಾಲ್ಯ ಸಹಜವಾದ ಬೇಕು- ಬೇಡಗಳನ್ನು ಮುಕ್ತವಾಗಿ ಪ್ರದರ್ಶಿಸಲು ಸಾಕಷ್ಟು ಸ್ವಾತಂತ್ರ್ಯವನ್ನು ಪಡೆದಿಲ್ಲ. ಅಂತಹ ಪರಿಸರದಿಂದ ನಮ್ಮ ಮಕ್ಕಳು ಸಂಪೂರ್ಣ ವಂಚಿಸಲ್ಪಟ್ಟಿದ್ದಾರೆ. ಮಕ್ಕಳ ಸರ್ವತೋಮುಖವಾದ ಅಭಿವೃದ್ಧಿಯಾಗಬೇಕಾದರೆ ಅವರು ತಮ್ಮ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶವನ್ನು ಸಮಾಜ ಕಲ್ಪಿಸಿ ಕೊಡಬೇಕು. ನಾವು ನಮ್ಮ ಮಕ್ಕಳನ್ನು ಸಾಕಷ್ಟು ಪ್ರೀತಿಸುತ್ತೇವೆ. ಆದರೆ ಅವರನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪ್ರೀತಿಸುವುದಕ್ಕೂ ಅರ್ಥೈಸಿಕೊಳ್ಳೋದಕ್ಕೂ ತುಂಬಾ ವ್ಯತ್ಯಾಸವಿದೆ. ಮಕ್ಕಳನ್ನು ಪ್ರೀತಿಸುವುದು ಎಷ್ಟು ಮುಖ್ಯವೋ ಅವರ ಬಾಲ್ಯ ಸಹಜವಾದ ‘ಬೇಕು’-’ ಬೇಡ’ಗಳನ್ನು ಅರ್ಥೈಸಿಕೊಳ್ಳುವುದು ಅಷ್ಟೇ ಮುಖ್ಯ.

    ಈ ಶಿಬಿರಗಳಲ್ಲಿ ನಾಟಕದ ವೃತ್ತಿಯನ್ನು ಕಲಿಸಲು ಸಾಧ್ಯವಾಗುವುದಿಲ್ಲ. ಆದರೆ ಪ್ರವೃತ್ತಿಯನ್ನು ಸುಗಮಗೊಳಿಸಬಹುದು. ಇತರ ಭಾಷೆಗಳಿಗೆ ಇರುವಂತೆ ತುಳು ಭಾಷೆಯಲ್ಲಿಯೂ ಮಕ್ಕಳಿಗಾಗಿ ಸಾಹಿತ್ಯ ಮೂಡಿ ಬರಬೇಕಾಗಿದೆ. ಇಂದು ಶಾಲೆಗಳಲ್ಲಿ ಮನರಂಜನೆಗಾಗಿ ಶೇಕ್ಸ್ ಪಿಯರ್ ನಂತಹ ಪರಕೀಯ ಸಾಹಿತ್ಯಗಳನ್ನೇ ಬಲವಂತವಾಗಿ ಬೋಧಿಸಲಾಗುತ್ತಿದೆ. ಶಿಕ್ಷಣದಲ್ಲಿ ಬಲವಂತದ ಓದನ್ನು ಬದಿಗಿಟ್ಟು ಮಕ್ಕಳ ಅಭಿಲಾಷೆಗೆ ತಕ್ಕಂತಹ ಸಾಹಿತ್ಯ ಲಭಿಸುವಂತಾಗಬೇಕಾಗಿದೆ. ನಾಟಕ ಸಂಪರ್ಕ ಸೇತುವಾಗಿದ್ದರೂ ಅದು ಇಂದು ಅನೇಕ ಆಘಾತಗಳನ್ನು ಎದುರಿಸುತ್ತಿದೆ. ಅದು ಸ್ವತಂತ್ರವಾಗಿ ಬೆಳೆಯಬೇಕಾದರೆ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಬೇಕಾಗಿದೆ. ಕಲೆ ಸ್ವತಂತ್ರ ವಸ್ತು ಅಲ್ಲದೆ ಇರುವುದರಿಂದ ಸಮಾಜದ ಸಹಕಾರ ಅದಕ್ಕೆ ಅಗತ್ಯವಾಗಿ ಬೇಕಾಗಿದೆ. ಈ ದಿಸೆಯಲ್ಲಿ ನಾಟಕಗಳು ಸ್ಥಳೀಯ ಆಡು ಭಾಷೆಯಲ್ಲಿಯೇ ನಡೆದಲ್ಲಿ ಕಲೆ ಜೀವಂತವಾಗಿ ಇರಬಹುದು. ನಾಟಕಗಳು ಸುಲಭವಾಗಿ ಜನರನ್ನು ತಲುಪುವ ಮಾಧ್ಯಮ. ನಾಟಕದ ಮೂಲಕ ಸಂವಹನ ಕ್ರಿಯೆಯು ಮಾತು ನಡವಳಿಕೆಗಳ ಮೇಲೆ ತ್ವರಿತಗತಿಯ ಪರಿಣಾಮ ಉಂಟುಮಾಡುತ್ತದೆ. ಮಕ್ಕಳ ನಾಟಕಗಳು ಮಕ್ಕಳಿಗೆ ದೊಡ್ಡವರ ನಾಟಕಗಳು ದೊಡ್ಡವರಿಗೆ ಎಂಬ ತಾರತಮ್ಯಗಳು ಎಂದಿಗೂ ಸಲ್ಲದು.

    ಬದುಕು ಬಾಳಾಗುವುದನ್ನು ಅರ್ಥ ಮಾಡಿಕೊಳ್ಳಬೇಕು. ಬದುಕು ಸವೆಸುವುದು ಎಲ್ಲರಿಗೂ ಸಾಧ್ಯವಾಗುತ್ತದೆ. ಆದರೆ ಬಾಳುವುದು ಹಾಗಾಗುವುದಿಲ್ಲ. ಬದುಕಿದ ಮಾತ್ರಕ್ಕೆ ವ್ಯಕ್ತಿಗೆ ಬಾಳಲು ಸಾಧ್ಯವಿಲ್ಲ. ನಾಟಕ ಮತ್ತು ಸಿನಿಮಾಗಳು ಪ್ರದರ್ಶನಗಳೇ ಆಗಿದ್ದರೂ ನಾಟಕದಲ್ಲಿ ಪ್ರಯೋಗ ಸಾಧ್ಯವಿದೆ ಒಂದು ನಾಟಕದ ಪಾತ್ರ ದೃಶ್ಯ ಅಥವಾ ವೇಷಭೂಷಣಗಳು ಪ್ರೇಕ್ಷಕರಿಗೆ ಇಷ್ಟವಾಗದೆ ಹೋದರೆ ಮುಂದಿನ ಪ್ರದರ್ಶನಗಳಿಗೆ ಅದನ್ನು ಬದಲಾಯಿಸಬಹುದು. ಆದರೆ ಸಿನಿಮಾದಲ್ಲಿ ಇದಕ್ಕೆಅವಕಾಶವಿಲ್ಲ. ನಾಟಕದಂತಹ ಪರಿಣಾಮಕಾರಿ ಸಂವಹನವನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳಿಗೆ ಬಾಳುವುದನ್ನು ಕಲಿಸಿಕೊಟ್ಟಂತಾಗುತ್ತದೆ.

    ನಮ್ಮ ಹಿರಿಯರು ಬಡತನದ ಬದುಕಿನ ನಡುವೆಯೂ ಬಾಳುತ್ತಿದ್ದರು ಎಂಬುದಕ್ಕೆ ನಮ್ಮ ನಡುವೆ ಉಳಿದಿರುವ ಜನಪದ ಕಲೆಗಳು ಸಾಕ್ಷಿಗಳಾಗಿವೆ. ಕಲೆಗಳಿಗೆ ಭಾಷೆ ಮುಖ್ಯವಾಗುವುದಿಲ್ಲ. ಆಡು ಭಾಷೆಗಳಲ್ಲಿನ ಏರಿಳಿತ ‘ಲಿಖಿತ ‘ಅಥವಾ ‘ಲಿಪಿ ‘ಇರುವ ಭಾಷೆಗಳಿಗೆ ಇರುವುದಿಲ್ಲ. ಆದ್ದರಿಂದ ಕನ್ನಡ ಅಥವಾ ತುಳು ಎಂಬ ಪ್ರಭೇದ ಇಲ್ಲಿ ನಗಣ್ಯವಾಗುತ್ತದೆ. ನಮ್ಮಲ್ಲಿ ಲಿಪಿ ಇರುವ ಭಾಷೆಗಿಂತಲೂ ಆಡು ಭಾಷೆಗಳು ಹೆಚ್ಚುಜೀವಂತವಾಗಿದೆ.

    ತುಳು ಕೊ೦ಕಣಿಯಂತಹ ಭಾಷೆಗಳು ಲಿಪಿ ಇಲ್ಲದಿದ್ದರೂ ತಮ್ಮ ಜೀವಂತಿಕೆಯಿಂದಾಗಿಯೇ ಉಳಿದುಕೊ0ಡಿವೆ. ಆದುದರಿಂದ ಕನ್ನಡ ಅಥವಾ ತುಳು ಎಂಬ ಪ್ರಭೇದ ಇಲ್ಲಿ ನಗಣ್ಯವಾಗುತ್ತದೆ. ಲಿಪಿ ಇರುವ ಭಾಷೆಗಿಂತಲೂ ಆಡು ಭಾಷೆಗಳು ಹೆಚ್ಚು ಜೀವಂತ. ಆಡು ಭಾಷೆಯಲ್ಲಿ ಬರುವ ಸ್ವರಾಲಾಪಗಳನ್ನು ಲಿಪಿಯಲ್ಲಿ ಬರೆಯುವುದು ಕಷ್ಟ. ಹಿಂದಿ ಲಿಪಿ ಒಂದೇ ಆದರೂ ಹಿಂದಿಯಲ್ಲಿ ಸುಮಾರು 800ಕ್ಕೂ ಹೆಚ್ಚು ಆಡುಭಾಷೆಗಳಿವೆ. ಶಿಷ್ಟವೆಂದು ಕರೆಯಿಸಿಕೊಳ್ಳುವ ಭಾಷೆಯಲ್ಲಿ ಏರಿಳಿತಗಳು ಸಾಕಷ್ಟು ಲಯವಾಗಿ ಹೋಗಿವೆ. ಕೊಂಕಣಿ ತುಳುಗಳಲ್ಲಿ ಬರುತ್ತಿರುವ ಬರವಣಿಗೆಯನ್ನು ನೋಡಿದರೆ ಈ ಭಾಷೆಗಳು ತಮ್ಮ ಲಯವನ್ನು ಕಳೆದುಕೊಂಡುಬಿಡುತ್ತವೆ ಎಂಬ ಭಯವಾಗುತ್ತಿದೆ. ಹಾಗಾಗಿ ನಾಟಕದ ಭಾಷೆ ಅಂದರೆ ರಂಗ ಭಾಷೆ ಹಾಗಾಗಿ ರಂಗಭಾಷೆಯೇ ಅತ್ಯಂತ ಪ್ರಮುಖ ಭಾಷೆಯಾಗಿ ಕೆಲಸ ನಿರ್ವಹಿಸುತ್ತದೆ.

    ಈ ಶಿಬಿರಗಳಲ್ಲಿ ನಾಟಕದ ವೃತ್ತಿಯನ್ನು ಕಲಿಸಲು ಸಾಧ್ಯವಾಗುವುದಿಲ್ಲ. ಆದರೆ ಪ್ರವೃತ್ತಿಯನ್ನು ಸುಗಮಗೊಳಿಸಬಹುದು. ಕಮ್ಮಟದಲ್ಲಿ ಕಾರಂತರು ಮಾತನಾಡಿದ ಬಹುಭಾಗದ ಸಂಭಾಷಣೆ ಮಾತುಗಳನ್ನು ನಾನು ತುಳುವಿಗೆ ಅನುವಾದಿಸಿ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೂ ನಿರಂತರವಾಗಿ ನಡೆಯುತ್ತಿದ್ದ ಈ ಸನಿವಾಸ ಶಿಬಿರದಲ್ಲಿ ಕಾರಂತರು ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದರು. ಈ ಕಮ್ಮಟದ ಸಂದರ್ಭದಲ್ಲಿಯೇ ಬಿ.ವಿ. ಕಾರಂತರು ಹೇಳುತ್ತಿದ್ದ ಮಕ್ಕಳ ಉನ್ನತಿಗಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಕೇವಲ ಒಂದು ಬಾಲವನವನ್ನು ಅಥವಾ ಒಂದಷ್ಟು ಬೊಂಬೆಗಳನ್ನು ನಿರ್ಮಿಸಿದರಾಯಿತು ಎನ್ನುವ ಜಾಯಮಾನದ ಶಿಬಿರಗಳನ್ನು ಯಾರು ಮಾಡಕೂಡದು. ನಾಟಕ ಕಲಿಯುವುದು ಎಂಬುದು ವಿಲಾಸವಲ್ಲ. ಅದು ಎಲ್ಲ ಕಲೆಗಳ ಸಂಗಮ. ಮಕ್ಕಳನ್ನು ನಟ -ನಟಿಯರನ್ನಾಗಿಸುವುದು ಮಾತ್ರ ಯಾವುದೇ ಶಿಬಿರಗಳ ಉದ್ದೇಶವಾಗಬಾರದು. ಮಕ್ಕಳನ್ನು ಬದುಕಿನ ಕಲಾವಿದರನ್ನಾಗಿಸುವುದೇ ನಮ್ಮ ಧ್ಯೇಯವಾಗಬೇಕು ಎಂದು ಪದೇ ಪದೇ ಹೇಳುತ್ತಿದ್ದ ಈ ಸನಿವಾಸ ಶಿಬಿರದಲ್ಲಿ ಯಾವತ್ತೂ ರಂಗಸಂಗೀತದ ಬಗ್ಗೆ ತಮ್ಮ ಅಪಾರ ಅನುಭವಗಳನ್ನು, ಹೊಸ ಸಂಗೀತವನ್ನು ಹಂಚಿಕೊಳ್ಳುತ್ತಿದ್ದ ಬಿ.ವಿ. ಕಾರಂತರು ಈ ಮಕ್ಕಳ ನಾಟಕ ‘ಜಾತ್ರೆ’ಯಲ್ಲಿ ಸಂಗೀತದ ಪಾಠಗಳನ್ನಾಗಲೀ ಹಾಡುಗಳನ್ನಾಗಲಿ ಬಳಕೆ ಮಾಡದಿರುವುದು ಮಾತ್ರ ನನಗೆ ಅಚ್ಚರಿಯ ಸಂಗತಿಯಾಗಿಯೇ ಉಳಿದಿದೆ.

    ವಿಮರ್ಶಕರು : ಐ.ಕೆ. ಬೊಳುವಾರು

    baikady roovari specialarticle theatre
    Share. Facebook Twitter Pinterest LinkedIn Tumblr WhatsApp Email
    Previous Articleಕಟೀಲಿನಲ್ಲಿ ಐನ್‌ಕೈ ಅಜ್ಜಿಕತೆ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 20
    Next Article ‘ನವರಸಗಳಲ್ಲಿ ನವರಾತ್ರಿ’ ವೈಶಿಷ್ಟಪೂರ್ಣ ದಸರಾ ಕವಿಗೋಷ್ಠಿ ಕಾರ್ಯಕ್ರಮ | ಸೆಪ್ಟೆಂಬರ್ 22
    roovari

    Add Comment Cancel Reply


    Related Posts

    ಸಮೂಹ ಕಲಾಲಾಂಛನದ ‘ಶಬರಿ’ ನೃತ್ಯನಾಟಕ ಪ್ರದರ್ಶನ

    September 20, 2025

    ಮೈಸೂರು ದಸರಾದ ಅರಮನೆ ವೇದಿಕೆಯಲ್ಲಿ ಡಾ. ಮೊಹಸಿನ್‌ ಖಾನರ ಸಿತಾರ್‌ ಝೇಂಕಾರ

    September 20, 2025

    ಬೆಂಗಳೂರಿನ ಬಿ.ಪಿ. ವಾಡಿಯಾ ಹಾಲ್ ನಲ್ಲಿ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ | ಸೆಪ್ಟೆಂಬರ್ 21

    September 20, 2025

    ವಿಶಾಲ ಯಕ್ಷ ಕಲಾ ಬಳಗದಿಂದ ‘ತಾಳಮದ್ದಳೆ ಜ್ಞಾನಯಜ್ಞ’ | ಸೆಪ್ಟೆಂಬರ್ 21, 23, 26 ಮತ್ತು ಅಕ್ಟೋಬರ್ 02

    September 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.