ಸಿದ್ಧಕಟ್ಟೆ : ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ ಸಿದ್ಧಕಟ್ಟೆ ಇದರ ಆಶ್ರಯದಲ್ಲಿ 8ನೇ ವಾರ್ಷಿಕೋತ್ಸವ ಪ್ರಯುಕ್ತ ಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 14 ಸೆಪ್ಟೆಂಬರ್ 2025ರಂದು ಬಣ್ಣದ ವೇಷದಾರಿ ದಿ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ ನಡೆಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ “ಸದಾಶಿವ ಶೆಟ್ಟಿಗಾರ್ ಇವರು ಯಕ್ಷಗಾನ ಕ್ಷೇತ್ರದಲ್ಲಿ ಮರೆಯಲಾಗದ ಮಹಾನ್ ದೈತ್ಯ ಪ್ರತಿಭೆ. ಬಣ್ಣದ ಮಾಲಿಂಗರ ಗರಡಿಯಲ್ಲಿ ಪಳಗಿದ ಅವರ ಬಣ್ಣಗಾರಿಕೆ, ಸ್ಪಷ್ಟ ಮಾತುಗಳಿಂದ ತನ್ನದೇ ಛಾಪನ್ನು ಮೂಡಿಸಿದ್ದರು. ಮುಂದಿನ ಜನಾಂಗ ಅವರ ಪರಂಪರೆಯನ್ನು ಉಳಿಸಬೇಕಾಗಿದೆ” ಎಂದು ಹೇಳಿದರು.
ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ಹಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ ಇವರಿಗೆ ‘ಯಕ್ಷಮಿತ್ರ ಸಿದ್ಧಕಟ್ಟೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಸ್ರಣ್ಣ, ರೋಟರಿ ಕ್ಲಬ್ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಸಿದ್ಧಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಸಮಿತಿ ಪದಾಧಿಕಾರಿ ಉಮೇಶ್ ಹಿಂಗಾಣಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸುರೇಶ್ ಶೆಟ್ಟಿ ಸಿದ್ಧಕಟ್ಟೆ ಸಚ್ಚಿದಾನಂದ ಭಟ್, ಡಾ. ಯೋಗೀಶ್ ಕೈರೋಡಿ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಅವರು ಸ್ವಾಗತಿಸಿ, ಗಣೇಶ್ ಶೆಟ್ಟಿ ವಂದಿಸಿ, ಉಮೇಶ್ ಪಾಳ್ಯ ನಿರೂಪಿಸಿದರು. ಬಳಿಕ ‘ಇಂದ್ರಜಿತು ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಿತು.