Subscribe to Updates

    Get the latest creative news from FooBar about art, design and business.

    What's Hot

    ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 158ನೇ ಜನ್ಮ ದಿನಾಚರಣೆ | ಸೆಪ್ಟೆಂಬರ್ 21

    September 20, 2025

    ಪರಿಚಯ ಲೇಖನ | ತೆಂಕುತಿಟ್ಟಿನ ದೈವಿಕ ಕಲಾತ್ಮ ಪ್ರತಿಭೆ ಬಾಯಾರು ರಮೇಶ ಭಟ್ಟ

    September 20, 2025

    ಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ

    September 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ತೆಂಕುತಿಟ್ಟಿನ ದೈವಿಕ ಕಲಾತ್ಮ ಪ್ರತಿಭೆ ಬಾಯಾರು ರಮೇಶ ಭಟ್ಟ
    Article

    ಪರಿಚಯ ಲೇಖನ | ತೆಂಕುತಿಟ್ಟಿನ ದೈವಿಕ ಕಲಾತ್ಮ ಪ್ರತಿಭೆ ಬಾಯಾರು ರಮೇಶ ಭಟ್ಟ

    September 20, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷಗಾನವು ಪುರಾಣ-ಇತಿಹಾಸಗಳ ಆಧಾರದ ಮೇಲೆ ನಿಂತಿರುವ ಭಾರತೀಯ ರಂಗವಿದ್ಯೆಯ ನವಚೇತನ. ತಾಳ, ಲಯ, ಭಾವ, ವಾಚಿಕ, ಗತಿಭಂಗಿ ಈ ಎಲ್ಲಾ ಅಂಶಗಳ ಸಮಗ್ರ ಸಮನ್ವಯವಾಗಿರುವ ಈ ಕಲೆ, ಕಲಾವಿದರ ವೈಯಕ್ತಿಕ ಶಿಸ್ತು ಮತ್ತು ಸಾಧನೆಯಿಂದಲೇ ಜೀವಂತವಾಗಿರುತ್ತದೆ. ಇಂತಹ ತಾಳ-ಲಯಗಳ ಸೌಂದರ್ಯದಲ್ಲಿ ತನ್ನದೇ ಆದ ಚಿಹ್ನೆ ಮೂಡಿಸಿದ ಕಲಾವಿದರಲ್ಲೊಬ್ಬರು ಬಾಯಾರು ರಮೇಶ ಭಟ್ಟ.

    ದೈವಿಕ ಪಾತ್ರಗಳ ಸೌಂದರ್ಯ :
    ಸ್ತ್ರೀಪಾತ್ರಗಳಲ್ಲಿ, ವಿಶೇಷವಾಗಿ ದೇವಿಯ ಪಾತ್ರದಲ್ಲಿ ಅವರು ತಂದುಕೊಟ್ಟ ಗೌರವ ಅತ್ಯಂತ ಶ್ರದ್ಧಾರ್ಹ. ದೇವಿ ಎಂದರೆ ಭಕ್ತಿ, ಗಂಭೀರತೆ, ದೈವಿಕ ಭಾವ. ‘ಮಾತೃರೂಪೇಣ ಸಂಸ್ಥಿತಾ, ಶಕ್ತಿ ಸ್ವರೂಪಿಣೀ’ ಎಂದು ದೇವಿಯನ್ನು ವರ್ಣಿಸುವ ಶ್ರುತಿವಾಕ್ಯದಂತೆಯೇ, ರಮೇಶ ಭಟ್ಟರು ದೇವಿಯ ಪಾತ್ರವನ್ನು ಭಕ್ತಿಯಾಧಾರಿತ ತಪೋಮೂರ್ತಿಯಂತೆ ನಿರ್ವಹಿಸಿದ್ದಾರೆ. ಅತಿರೇಕವಿಲ್ಲದ ಕುಣಿತ, ಮುಖಭಾವಗಳಲ್ಲಿ ಹೊಳೆಯುವ ಆಂತರಿಕ ಶಕ್ತಿ, ಪಾತ್ರಕ್ಕೆ ಹೊಂದುವ ಮಿತವಾದ ವಾಚಿಕಾಭಿನಯ ಇವುಗಳಿಂದ ಅವರ ದೇವಿಪಾತ್ರ ಯಕ್ಷಗಾನದ ದೈವಿಕತೆಯನ್ನು ನೆನೆಪಿಸುತ್ತಿದೆ.

    ಕಡಂದೇಲು ಪುರುಷೋತ್ತಮ ಭಟ್ಟರ ದಿವ್ಯ ಪರಂಪರೆಯ ನಂತರ, ದೇವಿಯ ಪಾತ್ರಕ್ಕೆ ಶ್ರದ್ಧೆಯ ಬೆಳಕು, ಪ್ರಸ್ತುತಿಯ ಲಾವಣ್ಯ, ಪರಮ ದೈವಿಕ ಭಾವದ ಆಳವನ್ನು ಕೊಡುಗೆಯಾಗಿ ನೀಡಿದವರು ಬಾಯಾರು ರಮೇಶ ಭಟ್ಟರು. ಅವರ ಅಭಿನಯದಲ್ಲಿ ದೇವಿ ಕೇವಲ ಪಾತ್ರವಲ್ಲ, ಭಕ್ತಿಯ ಚೈತನ್ಯವಾಗಿ, ಭಾವನೆಯ ಅಲೌಕಿಕ ರೂಪವಾಗಿರಂಗದಲ್ಲಿ ಅರಳುತ್ತದೆ. ಅದಕ್ಕಾಗಿಯೇ, ಕಡಂದೇಲು ಪುರುಷೋತ್ತಮ ಭಟ್ಟರನ್ನು ‘ದೇವಿ ಭಟ್ಟ’ರೆಂದು ಜನಮನಗಳು ನಾಮಕರಣ ಮಾಡಿದಂತೆ, ಇಂದಿನ ಯಕ್ಷಗಾನದ ಲೋಕವು ಬಾಯಾರು ರಮೇಶ ಭಟ್ಟರನ್ನು ಕೂಡಾ ಅದೇ ಗೌರವದ ‘ದೇವಿ ಭಟ್ಟ’ರೆಂದು ಕರೆಯುತ್ತದೆ.

    ಪಾತ್ರ ವೈವಿಧ್ಯ :
    ಅವರ ಸೀತೆ, ದಮಯಂತಿಗಳಂತಹ ಮೃದು-ಭಾವಪಾತ್ರಗಳು ಹಾಗೂ ಕಯಾದು, ಚಂದ್ರಮತಿ, ಯಶೋಮತಿ ನಿರ್ವಹಣೆಯಲ್ಲಿ ಕಾಣುವ ಶಾಂತ-ಗಂಭೀರ ಮಾತುಕತೆಗಳು, ಮೀನಾಕ್ಷಿ, ಶಶಿಪ್ರಭೆಗಳಂತಹ ಪಾತ್ರಗಳಲ್ಲಿನ ಚುರುಕುತನ ಅವರ ಪಾತ್ರಗ್ರಹಣದ ಆಳತೆಯನ್ನು ತೋರುತ್ತವೆ. ‘ನಾಟ್ಯೇ ನೃತ್ಯೇ ಚ ಗಾನೇ ಚ ವಿದ್ವತ್ ಸರ್ವತ್ರ ದರ್ಶಿತಾ’ ಎಂಬಂತೆ, ಪಾತ್ರದ ಸ್ವಭಾವಕ್ಕೆ ಅನುಗುಣವಾಗಿ ಭಿನ್ನತೆಗೆ ಜೀವ ತುಂಬುವ ಸಾಮರ್ಥ್ಯವೇ ಅವರ ವೈಶಿಷ್ಟ್ಯ.

    ಪುರುಷಪಾತ್ರಗಳ ಶೌರ್ಯ :
    ಸ್ತ್ರೀಪಾತ್ರಗಳಲ್ಲಿ ಕಾವ್ಯಮಯ ಮೃದುತೆ ತೋರಿದ ಹಾಗೆಯೇ, ಪುರುಷಪಾತ್ರಗಳಲ್ಲಿ ಶೌರ್ಯ, ರೌದ್ರ, ವೀರರಸಗಳನ್ನೂ ಸಮರ್ಥವಾಗಿ ಹೊಮ್ಮಿಸಿದ್ದಾರೆ. ರಕ್ತಬೀಜ, ಜರಾಸಂಧ, ಅರುಣಾಸುರ, ಹಿರಣ್ಯಕಶ್ಯಪ, ಕೌರವ, ಭೃಗು ಇಂತಹ ಪಾತ್ರಗಳಲ್ಲಿ ಅವರ ಧ್ವನಿ ಗಾಂಭೀರ್ಯ, ಅಂಗಿಕಾಭಿನಯ, ಶಕ್ತಿಯುತ ಕುಣಿತಗಳು ಪ್ರೇಕ್ಷಕರ ಮನದಲ್ಲಿ ಗಾಢಮುದ್ರೆಯನ್ನಿಟ್ಟು ಹೋಗಿವೆ. ಸ್ತ್ರೀ-ಪುರುಷ ಎರಡೂ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಅನುಭವ ಮತ್ತು ಚಾಕಚಕ್ಯತೆಯನ್ನು ಹೊಂದಿದವರು ರಮೇಶ ಭಟ್ಟರು ಎಂಬುದಾಗಿ ಅವರು ಈಗಾಗಲೇ ನಿರೂಪಿಸಿದ್ದಾರೆ.

    ಯಕ್ಷಗಾನದ ಪಥಯಾತ್ರೆ :
    1967 ನವೆಂಬರ್ 17ರಂದು ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಸರವು ನಾರಾಯಣ ಭಟ್ಟ ಮತ್ತು ಪಾರ್ವತಿ ಅಮ್ಮ ದಂಪತಿಗೆ ಜನಿಸಿದ ರಮೇಶ ಭಟ್ಟರು, ಹತ್ತನೇ ತರಗತಿವರೆಗೆ ಕಲಿತು ಬಳಿಕ ಯಕ್ಷಗಾನ ರಂಗವನ್ನು ಪ್ರವೇಶಿಸಿದರು. ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್ಟ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ ಪಡೆದರು. 1984ರಲ್ಲಿ ಕುಂಬಳೆ ಮೇಳದಲ್ಲಿ ಪ್ರಾರಂಭವಾದ ಅವರ ತಿರುಗಾಟ, 1985ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಮಂಡಳಿಯೊಂದಿಗೆ ಹೊಸ ಅಧ್ಯಾಯಕ್ಕೆ ಕಾಲಿಟ್ಟಿತು. ಆ ಬಳಿಕ ಮೂರೂವರೆ ದಶಕಗಳಿಂದಲೂ ನಿರಂತರ ಸೇವೆ ಸಲ್ಲಿಸುತ್ತಾ, ಕಟೀಲು ಮೇಳದ ಕಲಾತ್ಮವೃಂದದಲ್ಲಿ ಅವರು ಅವಿಭಾಜ್ಯ ವ್ಯಕ್ತಿಯಾಗಿ ಉಳಿದರು. ಯಕ್ಷಗಾನದ ಬಗ್ಗೆ ಯಾವುದೇ ಪೈತ್ರಿಕವಾದ ಹಿನ್ನೆಲೆಯಿಲ್ಲದೆ ತನ್ನ ಸ್ವ-ಪ್ರಯತ್ನದಿಂದ ಯಕ್ಷಗಾನ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದವರು ರಮೇಶ ಭಟ್ಟರು.

    ಕೀರ್ತಿ ಮತ್ತು ಸೇವಾಭಾವ :
    ಮುಂಬಯಿ, ಚೆನ್ನೈ, ಹೈದರಾಬಾದ್, ಸಿಂಗಾಪುರಗಳ ತನಕ ಯಕ್ಷಗಾನದ ಕೀರ್ತಿಯನ್ನು ಅವರು ಹರಡಿದ್ದಾರೆ. ಹಲವಾರು ಸಂಘ-ಸಂಸ್ಥೆಗಳ ಸನ್ಮಾನ-ಗೌರವಗಳನ್ನು ಗಳಿಸಿರುವುದು ಅವರ ಪ್ರತಿಭೆಗೆ ಅಲಂಕಾರ. ರಮೇಶ ಭಟ್ಟರ ಕಲಾವೈಶಿಷ್ಟ್ಯವನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ಅದು ‘ಶಿಸ್ತಿನಲ್ಲಿರುವ ಶೋಭೆ, ಭಾವನೆಯಲ್ಲಿ ಇರುವ ಭಕ್ತಿ, ಪಾತ್ರದಲ್ಲಿ ಇರುವ ಪ್ರಾಮಾಣಿಕತೆ’. ‘ನಟೋ ನಾಟಕಶಾಸ್ತ್ರಜ್ಞೋ ಲೋಕವಿದ್ಯಾಸರೋವರಃ’ ಎಂಬ ಭರತಮುನಿಯ ನಾಟ್ಯಶಾಸ್ತ್ರ ವಾಕ್ಯದಂತೆ, ಯಕ್ಷಗಾನ ಕಲಾವಿದನು ಕೇವಲ ವೇಷಧಾರಿ ಅಲ್ಲ, ಆತ ಲೋಕದ ಸಂಸ್ಕೃತಿಯ ಧ್ವಜವಾಹಕ. ಆ ಧ್ವಜವನ್ನು ಗೌರವದಿಂದ ಹೊತ್ತಿರುವ ಕಲಾವಿದರಲ್ಲಿ ಬಾಯಾರು ರಮೇಶ ಭಟ್ಟರು ಮುಂಚೂಣಿಯವರಾಗಿದ್ದಾರೆ.

    ಅತ್ಯಲ್ಪ ಸಮಯ ಯಕ್ಷಗಾನ ಮೇಳದ ವೃತ್ತಿಯಿಂದ ದೂರವಿದ್ದ ಅವರು ತೆಂಕುತಿಟ್ಟಿನ ಪ್ರಸಿದ್ಧ ಭಾಗವತರು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟರ ಸಂಚಾಲಕತ್ವದ ಪಾವಂಜೆ ಮೇಳದಲ್ಲಿ ಈ ವರ್ಷ ತಿರುಗಾಟ ಮಾಡಲಿರುವುದು ಯಕ್ಷಾಭಿಮಾನಿಗಳಿಗೆ ಸಂತಸ ಕೊಡುವ ವಿಚಾರವಾಗಿದೆ. ವೃತ್ತಿಪರ ಯಕ್ಷಗಾನ ಕಲಾವಿದರಾಗಿ ಸರಿಸುಮಾರು ಮೂರೂವರೆ ದಶಕಗಳ ಅನುಭವ ಹೊಂದಿರುವ ಬಾಯಾರು ರಮೇಶ ಭಟ್ಟರು ಪತ್ನಿ ಗೀತಾ ಮತ್ತು ಪುತ್ರ ಶ್ರೀರಾಮರೊಂದಿಗೆ ಬಾಯಾರು ಗ್ರಾಮದ ಸರವು ಎಂಬಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

    ವಿಮರ್ಶಕರು : ಕುಮಾರ ಸುಬ್ರಹ್ಮಣ್ಯ ಮುಳಿಯಾಲ

    article artist baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ
    Next Article ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 158ನೇ ಜನ್ಮ ದಿನಾಚರಣೆ | ಸೆಪ್ಟೆಂಬರ್ 21
    roovari

    Add Comment Cancel Reply


    Related Posts

    ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 158ನೇ ಜನ್ಮ ದಿನಾಚರಣೆ | ಸೆಪ್ಟೆಂಬರ್ 21

    September 20, 2025

    ಸಿದ್ಧಕಟ್ಟೆ ಫಲ್ಗುಣಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ

    September 20, 2025

    ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30

    September 20, 2025

    ಸಮೂಹ ಕಲಾಲಾಂಛನದ ‘ಶಬರಿ’ ನೃತ್ಯನಾಟಕ ಪ್ರದರ್ಶನ

    September 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.