ಮೈಸೂರು : ಮೈಸೂರು ದಸರಾ ಪ್ರಯುಕ್ತ ದಿನಾಂಕ 22 ಸೆಪ್ಟೆಂಬರ್ 2025ರಿಂದ ಕನ್ನಡ ಪುಸ್ತಕಗಳ ಪ್ರದರ್ಶನ, ರಿಯಾಯಿತಿ ಮಾರಾಟ ಮೇಳ ಪ್ರಾರಂಭವಾಗಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಿಂದ 01 ಅಕ್ಟೋಬರ್ 2025ರವರೆಗೆ ಬೆಳಿಗ್ಗೆ 10-00ರಿಂದ ರಾತ್ರಿ 8-30 ಗಂಟೆವರೆಗೆ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ನಡೆಯುವ ನಾಡ ಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ, ಪ್ರಾಧಿಕಾರದಿಂದ ಪ್ರಕಟಿಸಿರುವ ಹಾಗೂ ಶಿವಾನಂದ ವಿರಚಿತ ಬಾನು ಮುಷ್ತಾಕ್ ಅವರ ಬದುಕು-ಬರಹ ಕುರಿತ ‘ಬುಕರ್ ಬಾನು’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ಸಂಜೆ 5-00 ಗಂಟೆಗೆ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಉದ್ಘಾಟಿಸುವರು.
ಮೇಳದ ಮೊದಲು ‘ಪುಸ್ತಕ ರಥ’ವು ನಗರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದ್ದು, ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಎದುರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಚಾಲನೆ ನೀಡುವರು. 50 ಸಾವಿರಕ್ಕೂ ಹೆಚ್ಚು ಪ್ರಕಟಣೆಗಳು ಮೇಳದಲ್ಲಿರಲಿದ್ದು, 28 ಪುಸ್ತಕಗಳು ಬಿಡುಗಡೆಗೊಳ್ಳಲಿದ್ದು, ಪ್ರತೀ ದಿನ ಬೆಳಿಗ್ಗೆ ಗಂಟೆಗೆ 11-30ಕ್ಕೆ ಕಾರ್ಯಕ್ರಮ ನಡೆಯಲಿದೆ.