ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ, ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ಭಾರತೀಯ ಜೀವನ ದರ್ಶನ ಪ್ರವಚನ ಮಾಲಿಕೆಯ ಮೂರನೆಯ ಹಾಗೂ ನಾಲ್ಕನೆಯ ಸರಣಿ ಕಾರ್ಯಕ್ರಮ ದಿನಾಂಕ 19 ಸೆಪ್ಟೆಂಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಶ್ವನಾಥ ಹೆಗಡೆ ಸುಂಕಸಾಳ ಮಾತನಾಡಿ “ಭಾರತೀಯ ಎಲ್ಲಾ ಶಾಸ್ತ ಗ್ರಂಥಗಳಲ್ಲೂ ಮನಸ್ಸಿನ ಬಗ್ಗೆ ವಿಸ್ತಾರವಾದ ವಿಚಾರಗಳಿವೆ. ಈ ಶಾಸ್ತ್ರಗಳೆಲ್ಲವೂ ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕಾಗಿ ಇರುವುದಾಗಿದೆ. ಅಂದಿನ ಋಷಿಮುನಿಗಳು ಹಾಗೂ ವಿಜ್ಞಾನಿಗಳು ಒಂದೊಂದು ಅಧ್ಯಯನ ವಿಭಾಗವನ್ನು ಬೇರೆಬೇರೆಯಾಗಿ ಕಾಣದೇ ಒಂದಾಗಿ ಕಾಣುತ್ತಿದ್ದರು. ಹಾಗೆ ಇಂದಿನ ಆಧುನಿಕ ಸಿದ್ಧಾಂತಗಳಲ್ಲಿರುವ ವಿಷಯವನ್ನೂ ಒಳಗೊಂಡಂತೆ ಅದಕ್ಕೂ ಹೆಚ್ಚಿನ ವಿಷಯಗಳು ನಮ್ಮ ಕೃತಿಗಳಲ್ಲಿವೆ. ವಿದೇಶೀಯರೂ ನಮ್ಮಲ್ಲಿನ ಜ್ಞಾನವನ್ನು ಅವರು ಬಳಸುತ್ತಿರಬೇಕಾದರೆ ಭಾರತೀಯರಾದ ನಾವು ಈ ಶಾಸ್ತ್ರಗ್ರಂಥಗಳು, ಜ್ಞಾನ ಪರಂಪರೆ ಇತ್ಯಾದಿಗಳನ್ನು ಈ ನೆಲದಲ್ಲಿ ಉಳಿಸಬೇಕಾದದ್ದು ಅತ್ಯವಶ್ಯಕ” ಎಂದು ನುಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಭಾರತೀಯ ಜ್ಞಾನದಲ್ಲಿ ಸತ್ಯತೆ ಇದೆ. ಹೊರಗಿನ ಹೆಚ್ಚಿನ ವಿಷಯಗಳ ಬಗ್ಗೆ ತರಗತಿಯ ಅಧ್ಯಯನದಿಂದ ಕಲಿಯಬಹುದು. ಆದರೆ ನಮ್ಮೊಳಗಿನ ಆಂತರಿಕ ವಿಚಾರಗಳನ್ನು ನಮಗೆ ನಾವಾಗಿಯೇ ತಿಳಿಯಬೇಕು” ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಶುಭ ಹಾರೈಸಿದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಎಂ. ಹಾಗೂ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮುರಳಿ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ವಿಶ್ವನಾಥ್ ಹೆಗಡೆ ಸುಂಕಸಾಳ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘದ ಅಧ್ಯಕ್ಷೆ ಪ್ರಣತಿ.ಕೆ, ಕಾರ್ಯದರ್ಶಿ ಕೃತಿಕಾ ಕೆ.ವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮುರಳಿ ಕೃಷ್ಣ, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ದಿಶಾ ಹಾಗೂ ಅನರ್ಘ್ಯಾ.ಜಿ ನಿರೂಪಿಸಿ, ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿ ಅನರ್ಘ್ಯಾ.ಜಿ ವಂದಿಸಿದರು.
Subscribe to Updates
Get the latest creative news from FooBar about art, design and business.