Subscribe to Updates

    Get the latest creative news from FooBar about art, design and business.

    What's Hot

    ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವಯತ್ರಿ ಡಾ. ಅನುರಾಧಾ ಕುರುಂಜಿ ಆಯ್ಕೆ

    September 22, 2025

    ತುಳುಭವನದಲ್ಲಿ ಬಹುಭಾಷಾ ಕವಿಗೋಷ್ಠಿ

    September 22, 2025

    ಮೈಸೂರು ದಸರಾ ಕವಿಗೋಷ್ಠಿಗೆ ಯೋಗೀಶ್ ಕಾಂಚನ್ ಆಯ್ಕೆ

    September 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಥೆ | ‘ಮತ್ತೆ ಒಂದು ನಾಟಕ’
    Literature

    ಕಥೆ | ‘ಮತ್ತೆ ಒಂದು ನಾಟಕ’

    September 22, 2025No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನನ್ನ ಕಣ್ಣುಗಳು ಅವನ ನಡೆ, ನುಡಿಗಳನ್ನು ಹಿಂಬಾಲಿಸಿದವು. ಅವನ ನಡಿಗೆಯಲ್ಲೇ ಒಂದು ವಿಚಿತ್ರ ಲಯವಿತ್ತು. ಆ ಲಯ, ನನ್ನ ನಾಟಕದ ಮುಖ್ಯ ಪಾತ್ರದಂತೆಯೇ ಕಂಡಿತು. ‘ಯಾರವನು?’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದೆ. ‘ಅವನು ಪ್ರಸಾದರಾವ್. ಒಂದು ರೀತಿಯಲ್ಲಿ ಹುಚ್ಚ. ಅವನ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ’ ಎಂದು ನಕ್ಕ. ಆದರೂ ನನ್ನ ಮನಸ್ಸು ಆತನನ್ನೇ ಹಿಂಬಾಲಿಸಿತು. ಆತ ಇನ್ನೊಬ್ಬರೊಂದಿಗೆ ನಗುತ್ತಾ, ಹರಟುತ್ತಿದ್ದ. ಆ ನಗು, ಆ ಹರಟೆಗಳಲ್ಲಿ ಪಾತ್ರದ ತುಡಿತ ಕಾಣಿಸಿತು. ‘ನನ್ನ ನಾಟಕಕ್ಕೆ ಇವನೇ ತಕ್ಕವನು’ ಎಂದು ಮನಸ್ಸಿನಲ್ಲಿ ನಿರ್ಧರಿಸಿದೆ.

    ಅವನನ್ನು ಪರಿಚಯಿಸುವಂತೆ ಸಹೋದ್ಯೋಗಿಯನ್ನು ಕೋರಿಕೊಂಡೆ. ಅವನು ವ್ಯಂಗ್ಯವಾಗಿ ನಗುತ್ತಾ, ‘ನಿನ್ನ ಇಷ್ಟ. ಕೋತಿ ಜೊತೆ ಜಗಳವಾಡಬೇಕೆಂದರೆ ನಾನೇನು ಮಾಡಲಿ?’ ಎಂದು ಹೇಳಿದರೂ, ಪ್ರಸಾದರಾವ್‌ನನ್ನು ಕರೆದ. ಪ್ರಸಾದ್ ನಗುತ್ತಾ ನಮ್ಮತ್ತ ಬಂದ. ಕೈಕುಲುಕಿ ಪರಿಚಯವಾದಾಗ, ಯಾವುದೇ ಪೀಠಿಕೆಯಿಲ್ಲದೆ ನೇರವಾಗಿ ವಿಷಯಕ್ಕೆ ಬಂದೆ. ‘ನಾನು ಒಂದು ನಾಟಕ ಬರೆದಿದ್ದೇನೆ. ನಿಮ್ಮ ನಡಿಗೆ, ಭಂಗಿಗಳಿಂದ ನೀವೇ ಆ ಪಾತ್ರಕ್ಕೆ ಸೂಕ್ತರೆಂದು ಅನಿಸಿತು. ನನ್ನ ನಾಟಕದಲ್ಲಿ ಅಭಿನಯಿಸುತ್ತೀರಾ?’ ಅವನ ಮುಖದಲ್ಲಿ ಅನಿರೀಕ್ಷಿತ ಭಾವ ಮೂಡಿತು. ಕಣ್ಣುಗಳಲ್ಲಿ ವಿಷಾದದ ಛಾಯೆ ಸುಳಿದು, ‘ಇಪ್ಪತ್ತೇ ವರ್ಷಗಳ ಹಿಂದೆ ಎಲ್ಲವನ್ನೂ ತೊರೆದೆ. ಆ ದಿನಗಳು… ಆ ಜನರು… ಆ ಬರಹಗಾರರು… ಆ ನಟರು…’ ಎಂದು ಹೇಳುವಾಗ ನನ್ನ ಸಹೋದ್ಯೋಗಿ ನಗದಿದ್ದರೆ, ಆ ಮಾತುಗಳನ್ನು ನಿಜವೆಂದು ನಂಬಿ ಬಿಡುತ್ತಿದ್ದೆ.

    ಕ್ಷಣಾರ್ಧದಲ್ಲಿಯೇ ಅವನು ತನ್ನ ದುರಾದೃಷ್ಟದ ಕಥೆ ಹೇಳಲಾರಂಭಿಸಿದ. ‘ನನ್ನ ಜೀವನ ಒಂದು ದುರಾದೃಷ್ಟದ ಪ್ರಹೇಳಿಕೆ. ಹುಟ್ಟಿದಾಗಲೇ ತಂದೆಯನ್ನು ಕಳೆದುಕೊಂಡೆ. ಅರಿವು ಮೂಡುವಷ್ಟರಲ್ಲಿ ತಾಯಿಯೂ ಕೈಬಿಟ್ಟಳು. ನನ್ನವರೆಂದು ಯಾರೂ ಇಲ್ಲ, ಅನ್ನ ಹಾಕಿದವರು ಯಾರೂ ಇಲ್ಲ…’ ಎಂದು ಹೇಳುತ್ತಲೇ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು, ಅದು ನಿಜವಾದ ಅಳುವೇ ಇರಬಹುದೆಂಬಂತೆ. ಆದರೆ, ಇದ್ದಕ್ಕಿದ್ದಂತೆ ನನ್ನ ಮುಖ ನೋಡಿದು ಗಟ್ಟಿಯಾಗಿ ನಕ್ಕ. ಅವನ ಈ ಕ್ಷಣಕ್ಷಣದ ಭಾವಾಂತರ ನೋಡಿದಾಗ, ಇಂಥ ಅದ್ಭುತ ಪ್ರತಿಭೆ ವ್ಯರ್ಥವಾಗುವುದು ಅನ್ಯಾಯವೆಂದು ಅನಿಸಿತು. ಅದನ್ನು ಅವನಿಗೆ ಹೇಳಿದೆ, ‘ಈಗ ನನಗೆ ಸಂಪೂರ್ಣ ನಂಬಿಕೆ ಬಂದಿದೆ. ಆ ಪಾತ್ರಕ್ಕೆ ನಿಮ್ಮ ಹೊರತು ಬೇರೆ ಯಾರೂ ತಕ್ಕವರಲ್ಲ.’

    ಅವನು ನನ್ನನ್ನು ದಿಟ್ಟಿಸಿ ನೋಡಿ, ‘ನಾಳೆ ಬನ್ನಿ. ಆಲೋಚಿಸಿ ಹೇಳುತ್ತೇನೆ’ ಎಂದ. ನನ್ನ ಕೈಯಲ್ಲಿದ್ದ ಸ್ಕ್ರಿಪ್ಟ್ ತೆಗೆದುಕೊಳ್ಳಲು ಯತ್ನಿಸಿದೆ, ಆದರೆ ಅವನು ಅದನ್ನು ನಿರಾಕರಿಸಿ, ‘ನಾಳೆ ಬನ್ನಿ ಎಂದೆನಲ್ಲ!’ ಎಂದು ಹೇಳಿ ನಡೆದುಬಿಟ್ಟ. ಒಂದು ಕ್ಷಣ ನನಗೆ ಕೋಪ ಬಂದರೂ, ನನ್ನ ಮುಂದೆ ಬೇರೆ ದಾರಿಯಿರಲಿಲ್ಲ. ಸರ್ಕಾರದ ನೌಕರರ ಮನಸ್ಥಿತಿ ಒಂದು ಹಂತದ ನಂತರ ಒಂದೇ ರೀತಿ ಇರುತ್ತದೆ. ಜೀವನದಲ್ಲಿ ಮತ್ತಷ್ಟು ಏರಿಕೆ ಸಾಧ್ಯವಿಲ್ಲ ಎಂಬ ಭಾವನೆ ಮೂಡುತ್ತದೆ. ತಮ್ಮ ಪ್ರತಿಭೆಗೆ ತಾವೇ ನ್ಯಾಯ ಸಲ್ಲಿಸಲಿಲ್ಲವೆಂಬ ಅರಿವಿದ್ದರೂ, ಸೋಲಿಗೆ ತಾವೇ ಕಾರಣವೆಂದು ಒಪ್ಪಿಕೊಳ್ಳಲು ಮನಸ್ಸಾಗುವುದಿಲ್ಲ. ಅದಕ್ಕೆ ನಾನಾ ಕಾರಣಗಳನ್ನು ಹುಡುಕಿಕೊಳ್ಳುತ್ತಾರೆ. ಇಂಥವರ ಮಧ್ಯೆ ಒಳ್ಳೆಯ ಕಲಾವಿದರನ್ನು ಹುಡುಕುವುದು ಆಕಾಶದಲ್ಲಿ ನಕ್ಷತ್ರ ಹಿಡಿದಂತೆ. ಎಲ್ಲರೂ ತಾವೇ ಶ್ರೇಷ್ಠರು ಎಂದು ಭಾವಿಸುತ್ತಾರೆ. ಆದರೆ ಅಹಂಕಾರ ಮತ್ತು ಸೋಲಿನ ಭಯವೇ ಅವರ ದೊಡ್ಡ ಅಡ್ಡಿ.

    ನನ್ನ ನಾಟಕದ ಪಾತ್ರ ಮಹತ್ವದ್ದಾಗಿದ್ದರಿಂದ, ಬೇರೆ ಹಿರಿಯ ಕಲಾವಿದರನ್ನೂ ಕೇಳಿದ್ದೆ. ಅವರು ಸ್ಕ್ರಿಪ್ಟ್ ಓದಿ ‘ಚೆನ್ನಾಗಿದೆ, ಆದರೆ ಬದಲಿಸಬೇಕು’ ಎಂದರು. ಏನು ಬದಲಿಸಬೇಕೆಂದು ಅವರಿಗೂ ತಿಳಿದಿರಲಿಲ್ಲ. ಮತ್ತೊಬ್ಬ ಹಿರಿಯ ನಟ ನನ್ನ ನಿರ್ದೇಶನದಲ್ಲಿ ಕೆಲಸ ಮಾಡಲು ತನ್ನ ಅಹಂಕಾರ ಅಡ್ಡಿ ಎಂದು ಬಿಟ್ಟುಕೊಟ್ಟ. ಇದರಿಂದ ಬೇಸರಗೊಂಡಿದ್ದ ನನಗೆ, ಪ್ರಸಾದ್‌ನ ಭೇಟಿಯಾಯಿತು. ಇದ್ದ ವಸ್ತು ಸಿಗದೇ ಹೋದರೆ ಬೇಸರವಾಗುತ್ತದೆ, ಆದರೆ ಇಲ್ಲ ಎಂದು ಗೊತ್ತಾದರೆ ತೃಪ್ತರಾಗುತ್ತೇವೆ. ಹಾಗಾಗಿ, ನನ್ನ ಅಹಂಕಾರವನ್ನು ಬದಿಗಿಟ್ಟು ಮರುದಿನವೇ ಪ್ರಸಾದ್‌ನನ್ನು ಭೇಟಿಯಾದೆ.

    ಅವನು ನನ್ನನ್ನು ಗುರುತಿಸಲಿಲ್ಲ. ಅದು ಕೂಡ ಅವನ ಅಭಿನಯವೇ ಎಂದು ಅನಿಸಿತು. ನಾನು ನನ್ನನ್ನು ಪರಿಚಯಿಸಿಕೊಂಡು ಸ್ಕ್ರಿಪ್ಟ್ ನೀಡಿದೆ. ಪ್ರಸಾದ್ ಅದನ್ನು ನೋಡದೆ, ‘ನಾನು ವೈಕುಂಠಂ ಟ್ರೂಪ್‌ನ ಸದಸ್ಯ. ವೈಕುಂಠಂ ಅನುಮತಿಸಿದರೆ ಮಾತ್ರ ನಿಮ್ಮ ಸ್ಕ್ರಿಪ್ಟ್ ನೋಡುತ್ತೇನೆ’ ಎಂದ. ನಾನು ಒಪ್ಪಿಕೊಂಡು ಹೊರಟೆ. ಒಂದು ವಾರ ಕಳೆದರೂ ಅವನಿಂದ ಪ್ರತಿಕ್ರಿಯೆ ಬರಲಿಲ್ಲ. ನನಗೆ ಬೇರೆ ಯಾರನ್ನೂ ಆ ಪಾತ್ರದಲ್ಲಿ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ನಾಟಕ ಮಾಡುವುದು ಖಚಿತವಾದ ನಂತರ, ಉತ್ತೇಜನಕ್ಕಿಂತ ವ್ಯಂಗ್ಯದ ಮಾತುಗಳೇ ಹೆಚ್ಚು ಕೇಳಿಬರಲಾರಂಭಿಸಿದವು. ‘ನಾಯಿ ಬಾಲ ಹಿಡಿದು ಗೋದಾವರಿ ಈಜುತ್ತಿದ್ದಾನೆ’ ಎಂದು ನನ್ನನ್ನು ಹಾಸ್ಯ ಮಾಡತೊಡಗಿದರು. ಇದು ಹಳೆಯ ಹಾಗೂ ಹೊಸ ಕಲಾವಿದರಿಂದಲೂ ಬರುತ್ತಿದ್ದು ನೋವು ತಂದಿತು.

    ನಾಟಕ ಸ್ಪರ್ಧೆಗೆ ಅರ್ಜಿ ಹಾಕಲು ಕೊನೆಯ ದಿನವಾಗಿತ್ತು. ಆಸೆ ಬಿಟ್ಟಿದ್ದ ನನಗೆ ಪ್ರಸಾದ್, ನನ್ನನ್ನು ಹುಡುಕಿಕೊಂಡು ಬಂದ. ‘ಮತ್ತೆ ಬರಲಿಲ್ಲವಲ್ಲ?’ ಎಂದು ನಕ್ಕ. ನಾನು ಮೌನವಾಗಿದ್ದೆ. ಅವನು, ‘ಅಪ್ಲಿಕೇಶನ್ ಕೊಡಿ. ನಾನು ನಿಮ್ಮ ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ’ ಎಂದೂ ಯಾವುದೇ ಕಾರಣವಿಲ್ಲದೆ ಹೋಗಿಬಿಟ್ಟ. ಆ ಕ್ಷಣ ಏನಾಯಿತೆಂದು ನನಗೆ ಅರ್ಥವಾಗಲಿಲ್ಲ. ಅರ್ಥವಾದ ತಕ್ಷಣವೇ ಅರ್ಜಿ ಸಲ್ಲಿಸಿ, ಉಳಿದವರಿಗೆ ಅಭ್ಯಾಸದ ಸಮಯ ಹಾಗೂ ಸ್ಕ್ರಿಪ್ಟ್ ನೀಡಿದೆ.

    ಅಭ್ಯಾಸ ಶುರುವಾಯಿತು. ಉಳಿದ ನಟರು ತಡವಾಗಿ ಬರುವವರು, ಕೆಲವೊಮ್ಮೆ ಬಾರದವರು, ಸಂಭಾಷಣೆ ಮರೆತುಬಿಡುವವರು. ಆದರೆ ಪ್ರಸಾದ್ ಮೊದಲ ದಿನದಿಂದಲೂ ಒಂದು ಕ್ಷಣವೂ ತಡವಾಗಿ ಬಂದಿಲ್ಲ. ಅವನು ಪ್ರಸಾದ್ ಅಲ್ಲ, ಆ ಪಾತ್ರವೇ ತಾನೆಂಬಂತೆ ವರ್ತಿಸುತ್ತಿದ್ದ. ಅವನ ಅಭಿನಯದಲ್ಲಿ ಉಳಿದವರು ತಮ್ಮ ಸಂಭಾಷಣೆಗಳನ್ನು ಮರೆತು ತಲ್ಲೀನರಾಗುತ್ತಿದ್ದರು. ಅಭ್ಯಾಸದ ನಂತರ ಸಾಮಾನ್ಯವಾಗಿ ಮೌನವಾಗಿ ಹೊರಟು ಹೋಗುತ್ತಿದ್ದ. ಪ್ರಸಾದ್‌ನೊಂದಿಗೆ ಕೆಲಸ ಮಾಡುವುದರಿಂದ ಎಲ್ಲರೂ ನನ್ನನ್ನು ಹಾಸ್ಯ ಮಾಡತೊಡಗಿದರು.

    ನನಗೆ ಪ್ರಸಾದ್‌ನ ಹಿನ್ನೆಲೆ ತಿಳಿದು ಬಂತು. ಒಮ್ಮೆ ಅವನು ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದನಂತೆ. ಆದರೆ ಸರಿಯಾದ ಪಾತ್ರಗಳು ಸಿಗಲಿಲ್ಲ, ಸಿಕ್ಕ ಪಾತ್ರಗಳಲ್ಲಿ ಉತ್ತಮ ಅಭಿನಯ ನೀಡಿದರೂ ಮುಂದಿನ ಪ್ರದರ್ಶನದಲ್ಲಿ ಅವನ ಪಾತ್ರವನ್ನು ಬದಲಾಯಿಸುತ್ತಿದ್ದರು. ‘ನೀನು ಯಾವ ಪಾತ್ರವನ್ನಾದರೂ ಮಾಡಬಲ್ಲೆಯಲ್ಲ’ ಎಂದು ಸಮಾಧಾನ ಪಡಿಸುತ್ತಿದ್ದರು. ಕುತಂತ್ರಗಳ ಹಿಂದೆ ತನ್ನ ಪ್ರತಿಭೆಯನ್ನು ಕುಗ್ಗಿಸುವ ಬಯಕೆ ಇದೆ ಎಂದು ಅರಿತು ಅವನ ಮನಸ್ಸು ಒಡೆದುಹೋಯಿತು. ಅದರಿಂದಲೇ ಗಂಭೀರವಾಗಿ ನಟಿಸುವುದನ್ನು ನಿಲ್ಲಿಸಿದ್ದನಂತೆ. ಒಮ್ಮೆ ನಾನೇ ಅವನನ್ನು ಕೇಳಿದೆ, ‘ಇದು ನಿಜವೇ?’ ಅವನು ನಕ್ಕ, ‘ಪ್ರತಿದಿನ ಸೂರ್ಯೋದಯವಾಗುತ್ತದೆ. ಪ್ರತಿದಿನ ಸೂರ್ಯಾಸ್ತವಾಗುತ್ತದೆ. ನಾವು ನೋಡದಿದ್ದರೆ ಅವುಗಳಿಗೆ ಏನಾದರೂ ನಷ್ಟವೇ?’ ಎಂದ.

    ನಮ್ಮ ನಾಟಕವನ್ನು ನೋಡಿದ ಸ್ಕ್ರೂಟಿನಿ ಸದಸ್ಯರು ಮೆಚ್ಚಿದರು. ಹೊರಗೆ ಬಂದಾಗ ನಾನು ಪ್ರಸಾದ್‌ಗೆ, ‘ನೀವು ಅತ್ಯುತ್ತಮ ನಟ ಪ್ರಶಸ್ತಿ ಖಂಡಿತ ಗೆಲ್ಲುತ್ತೀರಿ’ ಎಂದೆ. ಅವನು ನಕ್ಕ, ‘ಬರುವುದಿಲ್ಲ’ ಎಂದ. ಇನ್ನೊಬ್ಬ ನಟ, ‘ಉಳಿದ ಸ್ಕ್ರಿಪ್ಟ್ ಚೆನ್ನಾಗಿಲ್ಲ, ನಮ್ಮದೇ ಚೆನ್ನಾಗಿದೆ. ಪ್ರಶಸ್ತಿ ಖಂಡಿತಾ ಬರುತ್ತೆ’ ಎಂದ. ಪ್ರಸಾದ್ ಮತ್ತೆ ನಕ್ಕ, ‘ಬರುವುದಿಲ್ಲ’ ಎಂದ. ‘ಏಕೆ?’ ಎಂದು ಕೇಳಿದಾಗ, ‘ಇದು ನಿಮಗೆ ಮೊದಲ ನಾಟಕ, ಮೊದಲ ಪ್ರದರ್ಶನ’ ಎಂದಷ್ಟೇ ಹೇಳಿದ. ನನಗೆ ಮಾತ್ರ ನಮ್ಮ ನಾಟಕಕ್ಕೆ ಪ್ರಶಸ್ತಿ ಸಿಗುವ ವಿಶ್ವಾಸವಿತ್ತು.

    ಪ್ರದರ್ಶನದ ದಿನ ಹತ್ತಿರ ಬಂದಂತೆ ಉತ್ಸಾಹ ಹೆಚ್ಚಾಯಿತು. ಆದರೆ ಪ್ರಸಾದ್ ಪ್ರತಿ ಅಭ್ಯಾಸದಲ್ಲೂ ಹೊಸತನ ತೋರಿಸಿ, ಹಿಂದಿನದಕ್ಕಿಂತ ಅದ್ಭುತವಾಗಿ ಮಾಡುತ್ತಿದ್ದ. ಪ್ರದರ್ಶನದ ದಿನ, ‘ಇದು ಹೇಗೆ ಸಾಧ್ಯ ಪ್ರಸಾದ್?’ ಎಂದು ಕೇಳಿದಾಗ, ‘ನಾನು ಪ್ರಸಾದ್ ಅಲ್ಲ, ಆ ಪಾತ್ರ’ ಎಂದ. ನಾನು ಅವನನ್ನು ಸವಾಲು ಹಾಕುವಂತೆ ‘ನಮ್ಮ ನಾಟಕವೇ ಚೆನ್ನಾಗಿದೆ, ಪ್ರಶಸ್ತಿ ನಮ್ಮದೇ’ ಎಂದೆ. ಅವನು ನಕ್ಕ, ‘ನಿಮ್ಮ ಭರವಸೆಗೆ ಶುಭವಾಗಲಿ’ ಎಂದಷ್ಟೇ ಹೇಳಿ ಎದ್ದು ಹೋದ.

    ಆ ನಂತರ ನಡೆದದ್ದು ಕನಸಿನಂತಾಗಿತ್ತು. ಪ್ರದರ್ಶನ ಪ್ರಾರಂಭವಾಯಿತು, ಮುಗಿಯಿತು. ಸಭಾಂಗಣ ಚಪ್ಪಾಳೆಗಳ ಗದ್ದಲದಿಂದ ತುಂಬಿಹೋಯಿತು. ಜನರು ವೇದಿಕೆಯತ್ತ ಓಡಿ, ಪ್ರಸಾದ್‌ನನ್ನು ಎತ್ತಿಕೊಂಡರು. ನನ್ನ ಬೆನ್ನನ್ನು ತಟ್ಟಿದವರ ಸಂಖ್ಯೆ ನೆನಪಿಲ್ಲ. ನಾಟಕ ಮುಗಿದ ಕ್ಷಣದಲ್ಲೇ ಫಲಿತಾಂಶ ತಿಳಿದುಬಿಟ್ಟಿತು! ನನ್ನ ತಲೆ ತಿರುಗಿಬಿಟ್ಟಿತು. ಸಂತೋಷದ ಅಮಲು ದೇಹದ ನರನರಗಳಲ್ಲಿ ಹರಿಯಿತು. ಆಗ ಅರ್ಥವಾಯಿತು – ಕಲಾವಿದ ಜನರ ಮೆಚ್ಚುಗೆಗಾಗಿ, ಚಪ್ಪಾಳೆಗಾಗಿ ಏಕೆ ತವಕಿಸುತ್ತಾನೆಂದು.

    ಪ್ರಸಾದ್ ನಿರ್ಲಿಪ್ತನಾಗಿ ಕುಳಿತಿದ್ದ. ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದ, ನಗುತ್ತಿದ್ದ. ಬಹುಮಾನಗಳ ಘೋಷಣೆ ಆರಂಭವಾಯಿತು. ‘ಉತ್ತಮ ನಾಟಕ…’ ನಾನು ಕುರ್ಚಿಯಿಂದ ಅರ್ಧ ಎದ್ದಿದ್ದೆ, ಆದರೆ ಬಹುಮಾನ ನಮಗೆ ಸಿಗಲಿಲ್ಲ. ನಾನು ಕುರ್ಚಿಯಲ್ಲಿ ಕುಸಿದುಬಿದ್ದೆ. ಆಗ ಪ್ರಸಾದ್ ನನ್ನ ಕಿವಿಯಲ್ಲಿ, ‘ಪ್ರತಿಭಾವಂತ ಕಲಾವಿದರು ಸಿಗುವುದು ಅಪರೂಪ. ಅದನ್ನು ಗುರುತಿಸುವವರು ಇನ್ನೂ ಅಪರೂಪ’ ಎಂದು ಗುಸುಗುಸಿಸಿದ. ಪ್ರೇಕ್ಷಕರ ಮೆಚ್ಚುಗೆಯ ಅಮಲು ಒಂದು ಕಡೆ ಇದ್ದರೆ, ಈ ತಿರಸ್ಕಾರ ಅದಕ್ಕೆ ಪ್ರತಿವಿಷವಾಯಿತು. ಮೆದುಳು ಜಡವಾಯಿತು. ‘ಇನ್ನು ನಾಟಕ ಮಾಡುವುದಿಲ್ಲ’ ಎಂದು ನಿರ್ಧರಿಸಿದೆ.

    ‘ಉತ್ತಮ ನಟ…’ ಪ್ರಸಾದ್‌ನ ಹೆಸರು ಕೇಳಿಬರಲಿಲ್ಲ. ಅವನ ತುಟಿಗಳಲ್ಲಿ ವಿಚಿತ್ರ ನಗು ಇತ್ತು. ಪ್ರೇಕ್ಷಕರಿಂದ ಮೆಚ್ಚುಗೆಯ ಧ್ವನಿಗಳ ಬದಲು ಟೀಕೆಯ ಕೂಗುಗಳು ಬಂದವು. ‘ಪ್ರಸಾದ್ ಉತ್ತಮ ನಟ’ ಎಂದು ಏಕಕಂಠದಿಂದ ಕೂಗಿದರು. ಕಾರ್ಯಕ್ರಮದ ನಿರ್ವಹಕರೊಂದಿಗೆ ವಾದಿಸಿದರು. ಕೊನೆಗೆ, ‘ನ್ಯಾಯಾಧೀಶರ ತೀರ್ಮಾನ ಬದಲಾಯಿಸಲು ಆಗುವುದಿಲ್ಲ, ಪ್ರಸಾದ್‌ಗೆ ವಿಶೇಷ ಬಹುಮಾನ ನೀಡುತ್ತಿದ್ದೇವೆ’ ಎಂದು ಘೋಷಿಸಿದರು. ಸಭಾಂಗಣ ಹರ್ಷೋದ್ಗಾರಗಳಿಂದ ತುಂಬಿಹೋಯಿತು.

    ‘ನನಗೆ ಈ ಬಹುಮಾನ ಬೇಡ’ ಎಂದು ಪ್ರಸಾದ್ ನಿಧಾನವಾಗಿ ಹೇಳಿದ. ‘ಹೋಗಿ ಬನ್ನಿ’ ಎಂದು ನಾನು ವಿನಂತಿಸಿದೆ, ‘ನಿಮಗೋಸ್ಕರ ಅಲ್ಲ, ನನಗೋಸ್ಕರ ಅಲ್ಲ, ಪ್ರೇಕ್ಷಕರಿಗೋಸ್ಕರ.’ ಮೌನವಾಗಿ, ಚಪ್ಪಾಳೆಗಳ ನಡುವೆ ಅವನು ವೇದಿಕೆಗೆ ಹೋದ. ಅಂದು ನಾನು ಊರಿಗೆ ಹೋಗಬೇಕಾಗಿದ್ದರಿಂದ ತಕ್ಷಣವೇ ಹೊರಟೆ.

    ಹತ್ತು ದಿನಗಳ ನಂತರ ಕಚೇರಿಗೆ ಹೋದಾಗಲೂ ನಮ್ಮ ನಾಟಕದ ಬಗ್ಗೆ ಚರ್ಚೆ ನಡೆಯುತ್ತಿತ್ತು. ದಾರಿಯಲ್ಲಿ ಒಬ್ಬ ಸಹೋದ್ಯೋಗಿ, ‘ನೀನು ಹೋದ ನಂತರ ಪ್ರಸಾದ್‌ಗೆ ತುಂಬಾ ಬೈಗುಳ ಬಂದಿದೆ’ ಎಂದ. ‘ಯಾಕೆ?’ ಎಂದು ಆತುರದಿಂದ ಕೇಳಿದೆ. ‘ಪ್ರಸಾದ್ ಉಳಿದವರನ್ನು ಡಾಮಿನೇಟ್ ಮಾಡಿದ, ಚಪ್ಪಾಳೆ ಬಂದ ಕೂಡಲೇ ಮಿತಿಮೀರಿದ ಎಂದೆಲ್ಲ ಬೈದರು. ನಿಮ್ಮ ನಾಟಕದಲ್ಲಿ ಡ್ರಾಮಾಟಿಕ್ ಎಲಿಮೆಂಟ್ ಇಲ್ಲವೆಂದರು. ಈ ನಾಟಕ ಇಲ್ಲಿ ಪ್ರದರ್ಶಿಸಬೇಕಾದದ್ದಲ್ಲ, ಪ್ರೇಕ್ಷಕರ ಮಟ್ಟಕ್ಕಿಂತ ಮೀರಿದ್ದು ಎಂದರು.’ ಈ ಮಾತುಗಳು ನನಗೆ ನಗು ತಂದವು. ಕಲಾವಿದರು ತಮ್ಮ ಪ್ರತಿಭಾರಾಹಿತ್ಯವನ್ನು ಪ್ರೇಕ್ಷಕರ ಮೇಲೆ ಹೊರಿಸಿ, ಅವರ ಮಟ್ಟವನ್ನು ನಿರ್ಧರಿಸಿ ಆತ್ಮವಂಚನೆ ಮಾಡಿಕೊಳ್ಳುತ್ತಾರೆ ಎಂದು ಅನಿಸಿತು.

    ಒಬ್ಬ ಪ್ರತಿಭಾವಂತ ಮೇಲೇಳುತ್ತಿದ್ದಾನೆ ಎಂದರೆ, ಅವನನ್ನು ಕೆಳಗೆ ಎಳೆಯುವುದರಿಂದಲೇ ಮತ್ತೊಬ್ಬನಿಗೆ ಸಮಾಧಾನ ಸಿಗುತ್ತದೆಯೇ? ಈ ಆಲೋಚನೆಯಿಂದ ಪ್ರಸಾದ್‌ನ್ನು ನೋಡಲು ಹೋದೆ. ‘ಬಹುಮಾನ ಬರದಿದ್ದಕ್ಕೆ ಬೇಸರವಾಗಿದೆ’ ಎಂದೆ. ಪ್ರಸಾದ್ ನಕ್ಕು, ‘ವಿಮರ್ಶಕರ ಬಹುಮಾನ ಬೇಡ, ಪ್ರೇಕ್ಷಕರು ಕೊಟ್ಟ ಬಹುಮಾನವೇ ನಿಜವಾದದ್ದು. ಪ್ರತಿಭೆಯಿದ್ದವರನ್ನು ನೋಡಿದಾಗ ಇಲ್ಲದವರಿಗೆ ಯಾವಾಗಲೂ ಭಯವೇ’ ಎಂದ.

    ‘ಮತ್ತೆ ನಾಟಕ ಮಾಡೋಣ’ ಎಂದಾಗ ಅವನು, ‘ನಾನು ಇನ್ನು ಮಾಡುವುದಿಲ್ಲ’ ಎಂದು ಹಠದಿಂದ ಹೇಳಿದ. ‘ಯಾರೋ ಏನೋ ಹೇಳಿದರು ಎಂದು ಕಲೆಗೆ ಅನ್ಯಾಯ ಮಾಡಿಕೊಳ್ಳಬೇಕೆ? ಕಲೆ ದೇವರು ಕೊಟ್ಟ ವರ’ ಎಂದು ನಾನು ವಾದಿಸಿದೆ. ಅದಕ್ಕೆ ಅವನು, ‘ಇವರಿಗೆ ಪ್ರತಿಭೆಯನ್ನು ಗುರುತಿಸಲು ಸಾಧ್ಯವಿಲ್ಲ, ಗುರುತಿಸಿದರೆ ಸಹಿಸಿಕೊಳ್ಳಲಾಗುವುದಿಲ್ಲ’ ಎಂದ. ‘ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಯಾರಾದರೂ ನೋಡಲಿ, ನೋಡದಿರಲಿ ಅದರ ಸೌಂದರ್ಯಕ್ಕೆ ಏನು ಹಾನಿ? ಹಾಗೆಯೇ, ನಾವು ಕಲೆಯನ್ನು ನಮ್ಮ ಸಂತೋಷಕ್ಕಾಗಿ ಪ್ರದರ್ಶಿಸಬೇಕು’ ಎಂದು ಹೇಳಿದಾಗ, ಅವನು ಮತ್ತೆ ಮೌನವಾದ.

    ಇಷ್ಟೊಂದು ಪ್ರತಿಭಾವಂತ ಕಲಾವಿದರು ಕೀಳು ಮನಸ್ಸಿನ ಜನರ ನಡುವೆ ತಮ್ಮ ಪ್ರತಿಭೆಗಳನ್ನು ಅಡಗಿಸಿಕೊಂಡು ಅನಾಮಿಕರಾಗಿ ಉಳಿದುಬಿಟ್ಟಿದ್ದಾರೆಂದು ನನಗೆ ಅರಿವಾಯಿತು. ನೂರಾರು ಕಲಾವಿದರಲ್ಲಿ ಒಂದಿಬ್ಬರು ಮಾತ್ರ ಉನ್ನತ ಸ್ಥಾನ ತಲುಪುತ್ತಾರೆ, ಸಾವಿರಾರು ಪ್ರತಿಭಾವಂತರು ಪರದೆಗೆ ಬಾರದೆ ಉಳಿದುಬಿಡುತ್ತಾರೆ. ಪ್ರಸಾದ್ ಸಹ ಅವರಂತಾಗುವುದು ನನಗೆ ಸಹಿಸಲಾಗಲಿಲ್ಲ. ‘ನಾನು ನಿಮ್ಮನ್ನು ಬಿಡುವುದಿಲ್ಲ’ ಎಂದು ದೃಢವಾಗಿ ಹೇಳಿದೆ. ‘ನನ್ನನ್ನು ಕಿರಿಕಿರಿ ಮಾಡಬೇಡಿ’ ಎಂದು ಅವನು ಅಸಹನೆಯಿಂದ ಹೇಳಿದ. ನಾನು ಅವನಿಗೆ ಅವಕಾಶ ಕೊಡದೆ, ‘ಮತ್ತೆ ಭೇಟಿಯಾಗುತ್ತೇನೆ, ಹೊಸ ನಾಟಕ ಮಾಡೋಣ’ ಎಂದು ಹೊರಟೆ.

    ನನಗೆ ವಿಶ್ವಾಸವಿತ್ತು, ಪ್ರಸಾದ್ ಮತ್ತೆ ನಾಟಕದಲ್ಲಿ ಅಭಿನಯಿಸುತ್ತಾನೆಂದು. ಏಕೆಂದರೆ ನಿಜವಾದ ಕಲಾವಿದ ತನ್ನ ಪ್ರತಿಭೆ ತೋರಿಸುವ ಅವಕಾಶವನ್ನು ಎಂದಿಗೂ ಕೈಬಿಡುವುದಿಲ್ಲ. ಪ್ರಸಾದ್ ಮತ್ತೆ ವೇದಿಕೆ ಏರಬೇಕೆಂದರೆ, ನಾನು ಈ ಬಾರಿ ಅದ್ಭುತವಾಗಿ ಬರೆಯಬೇಕು. ನನ್ನೊಳಗಿನ ಕಲಾವಿದನು ಉನ್ನತ ಮಟ್ಟ ತಲುಪುತ್ತಾನೆ ಎಂಬ ನಂಬಿಕೆ ನನಗಿತ್ತು. ಪ್ರೇಕ್ಷಕರ ಹರ್ಷೋದ್ಗಾರಗಳನ್ನು ಮತ್ತೆ ಅನುಭವಿಸುವ ಆಕಾಂಕ್ಷೆಯೂ ಇದೆ. ಅದಕ್ಕಾಗಿಯೇ ನಾನು ಹೊಸ ನಾಟಕ ಬರೆಯಲು ಆರಂಭಿಸಿದ್ದೇನೆ.

    ತೆಲುಗು ಮೂಲ : ಕಸ್ತೂರಿ ಮುರಳೀಕೃಷ್ಣ
    ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀಮೋಹನ್

    baikady Literature roovari story
    Share. Facebook Twitter Pinterest LinkedIn Tumblr WhatsApp Email
    Previous Articleಕುದ್ರೋಳಿಯಲ್ಲಿ ‘ಬಹುಭಾಷಾ ಕವಿಗೋಷ್ಠಿ’ ಮತ್ತು ‘ತುಳು ಕವಿಗೋಷ್ಠಿ’ | ಸೆಪ್ಟೆಂಬರ್ 23
    Next Article ಆಳ್ವಾಸ್ ನಲ್ಲಿ ‘ವಿಶೇಷ ಉಪನ್ಯಾಸ ಮತ್ತು ಕವಿಯೊಂದಿಗೆ ಸಂವಾದ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವಯತ್ರಿ ಡಾ. ಅನುರಾಧಾ ಕುರುಂಜಿ ಆಯ್ಕೆ

    September 22, 2025

    ತುಳುಭವನದಲ್ಲಿ ಬಹುಭಾಷಾ ಕವಿಗೋಷ್ಠಿ

    September 22, 2025

    ಮೈಸೂರು ದಸರಾ ಕವಿಗೋಷ್ಠಿಗೆ ಯೋಗೀಶ್ ಕಾಂಚನ್ ಆಯ್ಕೆ

    September 22, 2025

    ಡಾ. ಎಂ. ಮೋಹನ ಆಳ್ವರಿಗೆ ‘ಕೀರಿಕ್ಕಾಡು ಪ್ರಶಸ್ತಿ’

    September 22, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.