ಹಾಸನ : ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಇದರ ತಾಲೂಕು ಘಟಕ ಹಾಸನ ಹಾಗೂ ಹಾಸನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ‘ಹಾಸನ ದಸರಾ ಕವಿಗೋಷ್ಠಿ’ಯು ದಿನಾಂಕ 21 ಸೆಪ್ಟೆಂಬರ್ 2025ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಸೈಯದ್ ಶಹಬುದ್ದೀನ್ “ಧರ್ಮಾಂಧತೆಯ ಮಡುವಿನಲ್ಲಿ ನಲುಗುತ್ತಿರುವ ಜನತೆಗೆ ಕುವೆಂಪುರವರ ಚಿಂತನೆಗಳು ದಾರಿದೀಪವಾಗಿವೆ. ಇಂದಿನ ತಲೆಮಾರು ಕುವೆಂಪುರವರನ್ನು ಓದಿಕೊಳ್ಳುವ ಜರೂರಿದೆ. ಕಳೆದ ಏಳೆಂಟು ವರ್ಷಗಳ ಹಿಂದೆ ಪ್ರಾರಂಭವಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನದಿಂದ ಪ್ರಾರಂಭವಾಗಿ ಪ್ರಸ್ತುತ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಗುಣಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸಿ ಮುನ್ನೆಲೆಗೆ ತರುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಾಹಿತಿಗಳು ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಠಿಕೋನದಲ್ಲಿ ಸಾಹಿತ್ಯ ರಚಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ “ರಂಜಾನ್ ದರ್ಗಾ ಹೇಳುವಂತೆ ‘ಬಂದೂಕಿನ ಬಾಯಲ್ಲಿ ಗುಬ್ಬಿ ಗೂಡು ಕಟ್ಟಬೇಕಿದೆ..’ ಎಂಬ ಸದಾಶಯ ಉಳಿಯಬೇಕಾದರೆ ಜಗತ್ತು ಜಾತಿ ಧರ್ಮದೆಲ್ಲೆಗಳ ಮೀರಿ ಮಾನವೀಯ ಮೌಲ್ಯಗಳಲ್ಲಿ ಸಾಗಬೇಕಿದೆ. ಕಾವ್ಯಕ್ಕೆ ನಿರ್ಧಿಷ್ಟ ವ್ಯಖ್ಯಾನವಿಲ್ಲದಿದ್ದರೂ ತನ್ನದೇಯಾದ ಧ್ವನಿ, ಪ್ರತಿಮೆ, ಅಲಂಕಾರ, ಛಂದಸ್ಸು, ಪ್ರಾಸ, ಲಯ, ಗೇಯತೆಗಳಿದ್ದರೆ ಪ್ರಭೆ ಹೆಚ್ಚಾಗುತ್ತದೆ. ಕವಿಯಾದವನಿಗೆ ಪದ ಜಿಪುಣತನವಿರಬೇಕು. ಕಾವ್ಯ ತಳ ಸಮುದಾಯದ ತಲ್ಲಣಗಳಿಗೆ ಸ್ಪಂದಿಸುವುದರ ಜೊತೆಗೆ ದಮನಿತರಿಗೆ, ಶೋಷಿತರಿಗೆ ದನಿಯಾಗಬೇಕು. ಕವಿಯಾದವ ಅಧ್ಯಯನ ಹಾಗೂ ಅಧ್ಯಾಪನಶೀಲರಾಗಿರಬೇಕು. ಪ್ರತಿಯೊಬ್ಬ ಬರಹಗಾರನಿಗೂ ಸಾಹಿತ್ಯ ಪರಂಪರೆಯ ಅರಿವಿರಬೇಕು. ಬಸವಾದಿ ಶಿವಶರಣರಂತೆ ಅನುಭಾವದ, ವೈಚಾರಿಕ ಸಾಹಿತ್ಯದ ಅಗತ್ಯವಿದೆ. ನಾವೆಲ್ಲಾ ಈ ದಿಸೆಯಲ್ಲಿ ಯೋಚಿಸಿ ಸಾಹಿತ್ಯ ಸೃಜಿಸಬೇಕಿದೆ” ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮುಖ್ಯ ಅತಿಥಿಯಾಗಿ ಮಾತನಾಡಿ “ಯಾವುದೇ ಸಂಸ್ಥೆಯು ಅಭಿವೃದ್ಧಿ ಪಥದತ್ತ ಸಾಗಲು ವ್ಯಕ್ತಿ ಆಧಾರಿತವಾಗಿರದೇ ವ್ಯವಸ್ಥೆ ಆಧಾರಿತವಾಗಿದ್ದರೆ ಅದು ಸದಾ ಕಾಲ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುತ್ತದೆ. ಹಾಗೆಯೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಾವುದೇ ವೇದಿಕೆ ಅಥವಾ ಪರಿಷತ್ತಿಗೆ ಪರ್ಯಾಯವಾಗಿ ಎಂದು ಪರಿಗಣಿಸದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಸಾಹಿತ್ಯದ ಮೆರಗನ್ನು ಹೆಚ್ಚಿಸುವಲ್ಲಿ, ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸೇವೆ ಸಲ್ಲಿಸುತ್ತಿದೆ. ಅತ್ಯಲ್ಪ ಕಾಲದಲ್ಲಿ ವೇದಿಕೆ ವ್ಯಾಪಕ ಖ್ಯಾತಿಹೊಂದುತ್ತಿರುವುದು ಶ್ಲಾಘನೀಯವಾಗಿದೆ” ಎಂದರು.
ವೇದಿಕೆಯಲ್ಲಿ ಹಾಸನ ತಾಲೂಕು ಅಧ್ಯಕ್ಷತೆ ಕೆ.ಸಿ. ಗೀತಾ ಆಶಯ ನುಡಿಗಳನ್ನಾಡಿದರು. ‘ಭೀಮವಿಜಯ’ ಪತ್ರಿಕೆ ಸಂಪಾದಕ ನಾಗರಾಜ ಹೆತ್ತೂರು, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ಕವಯಿತ್ರಿ ಜಯರಮೇಶ್, ಆರ್.ಎಸ್. ರಮೇಶ್, ಎ.ಎಸ್.ಒ.ಸಿ. ಎಚ್.ಎಂ. ಪ್ರಿಯಾಂಕ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ, ಸುಮಾ ರಮೇಶ್, ರಾಜೇಶ್ವರಿ ಹುಲ್ಲೇನಹಳ್ಳಿ, ಗೊರೂರು ಅನಂತರಾಜು, ಡಿ.ಎಂ. ಕಲ್ಪನಾ, ಪಲ್ಲವಿ ಬೇಲೂರು, ಸ್ವಾಮಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಗ್ಯಾರಂಟಿ ರಾಮಣ್ಣ, ಹೊ.ರಾ. ಪರಮೇಶ್, ಕೆ.ಟಿ. ಜಯಶ್ರೀ, ಲಲಿತ ಎಸ್., ಜಯಶಂಕರ್ ಬೆಳಗುಂಬ, ಸುರೇಶ್ ಗುರೂಜಿ, ನೀಲಾವತಿ ಸಿ.ಎನ್., ಗಿರಿಜಾ ನಿರ್ವಾಣಿ, ಧರ್ಮ ಕೆರಲೂರು, ಎಚ್. ಪರಮೇಶ್ವರಪ್ಪ, ರೇಖಾ ಪ್ರಕಾಶ್, ನಾಗರಾಜ್ ಹೆತ್ತೂರು, ಮಧುಮಾಲತಿ ರುದ್ರೇಶ್, ಡಾ. ರಕ್ಷಾ, ಗಿರೀಶ್ ಕೊಣನೂರು, ಯಮುನಾವತಿ ಎಚ್., ಮಲ್ಲೇಶ್ ಜಿ. ಹಾಸನ, ಪದ್ಮಾವತಿ ವೆಂಕಟೇಶ್, ಗೀತಾ ಕೆ.ಸಿ., ಚಂದ್ರಕಲಾ ಎಂ. ಆಲೂರು, ಮೇಘ ಬಿ.ಎಸ್., ರುಮಾನ ಜಬೀರ್, ಪಾತರಾಜು ಎಸ್.ಡಿ., ವಿಶ್ವಾಸ್ ಡಿ. ಗೌಡ, ಗಿರೀಶ್ ಚನ್ನರಾಯಪಟ್ಟಣ, ಶ್ವೇತಾ ಮೋಹನ್, ರೇಷ್ಮಾಶೆಟ್ಟಿ ಗೊರೂರು, ಎಲ್. ಹೇಮಲತಾ, ಜಯ ರಮೇಶ್, ಭಾರತಿ ಎಚ್.ಎನ್., ರುದ್ರೇಶ್ ಬೇಲೂರು, ಮಾರುತಿ ಬೇಲೂರು ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.