ದಾವಣಗೆರೆ : ದಾವಣಗೆರೆ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು, ಯಕ್ಷರಂಗ ಯಕ್ಷಗಾನ ಸಂಘ, ಜಿಲ್ಲಾ ಬ್ಯಾಂಕ್ ನೌಕರರ ಸಂಘಗಳ ಜಂಟಿ ಆಶ್ರಯದಲ್ಲಿ ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ರಾಘವೇಂದ್ರ ನಾಯರಿಯವರು ಆಯೋಜಿಸಿದ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮದ ‘ಸುವರ್ಣ ಪರ್ವ 13’ರ ಕಾರ್ಯಕ್ರಮವು ದಿನಾಂಕ 21 ಸೆಪ್ಟೆಂಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಇವರು ಮಾತನಾಡಿ “ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಕಲೆಗೆ 800 ವರ್ಷಗಳ ಭವ್ಯವಾದ ಪರಂಪರೆಯಿದೆ. ಸಾಹಿತ್ಯ, ಸಂಗೀತ, ನೃತ್ಯ, ಮಾತುಗಾರಿಕೆ, ಅಭಿನಯ ಇವೆಲ್ಲವನ್ನೂ ಒಳಗೊಂಡ ಯಕ್ಷಗಾನ ಕಲೆಗೆ ಮಾನವೀಯ ಸಂಬಂಧಗಳನ್ನು ಗಟ್ಟಿಯಾಗಿ ಬೆಸೆಯುವ ಶಕ್ತಿಯಿದೆ. ಒಬ್ಬ ವ್ಯಕ್ತಿಯೇ 50 ವರ್ಷಗಳನ್ನು ಪೂರ್ಣಗೊಳಿಸುವುದ ಕಷ್ಟಸಾಧ್ಯವಾದ ದುಷ್ಕಾಲದಲ್ಲಿ ನಾವಿದ್ದೇವೆ. ಅಂತದ್ದರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕದ್ವಯರಾದ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಹೆಚ್. ಶ್ರೀಧರ ಹಂದೆಯವರು 1975ರಲ್ಲಿ ಸ್ಥಾಪಿಸಿದ ಸಾಲಿಗ್ರಾಮ ಮಕ್ಕಳ ಮೇಳವು ಯಕ್ಷಗಾನದ ಮೂಲ ಪರಂಪರೆಯನ್ನು ಉಳಿಸಿಕೊಂಡು 50 ವರ್ಷಗಳನ್ನು ಪೂರೈಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ” ಎಂದು ಹೇಳಿದರು.
ಮಕ್ಕಳ ಮೇಳದ ಉಪಾಧ್ಯಕ್ಷ ಎಚ್. ಜನಾರ್ದನ ಹಂದೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗುರು ಹಟ್ಟಿಯಂಗಡಿ ಆನಂದ ಶೆಟ್ಟಿಯವರಿಗೆ ಸುವರ್ಣ ಪರ್ವ ಗೌರವ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೇಳೂರು ಸಂತೋಷ ಕುಮಾರ್ ಶೆಟ್ಟಿಯವರು ಅಭಿನಂದನಾ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಯಕ್ಷರಂಗ-ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಕೆ. ಸೋಮಶೇಖರ್ ನಾಯರಿ, ಶ್ರೀಮತಿ ಗೌರಮ್ಮ ಪಿ. ಮೋತಿ ರಾಮರಾವ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮೋತಿ ಪರಮೇಶ್ವರ ರಾವ್, ಹೋಟೆಲ್ ಉದ್ಯಮಿ ಶೈಲೇಶ್ ಎನ್. ಶೆಟ್ಟಿ, ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಅವರಗೆರೆ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಜ್ಯ ಉಪಾಧ್ಯಕ್ಷ ಕೆ. ವಿಶ್ವನಾಥ್ ಬಿಲ್ಲವ ಭಾಗವಹಿಸಿದ್ದರು.
ಮೇಳದ ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಕ್ಷಗಾನ ಕಲಾವಿದ ಕೆ. ರಾಘವೇಂದ್ರ ನಾಯರಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಎ ಗ್ರೇಡ್ ಕಲಾವಿದೆ ಕೆ. ಭಾರ್ಗವಿ ಮಂಜುನಾಥ್ ಪ್ರಾರ್ಥಿಸಿದರು. ರಂಗಭೂಮಿ ಕಲಾವಿದ ಪಿ.ಕೆ. ಖಾದರ್ ಇವರು ಜಾನಪದ ಗೀತೆ ಹಾಗೂ ವಿದುಷಿ ರಕ್ಷಾ ರಾಜಶೇಖರ ಸಕ್ಕಟ್ಟು ಇವರ ನೃತ್ಯ ವಿದ್ಯಾನಿಲಯ ವಿದ್ಯಾರ್ಥಿಗಳು ನೃತ್ಯ ವೈಭವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಸಮಾರಂಭದ ಕೊನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಲವಳ್ಳಿ ವಿದ್ಯಾಧರ ರಾವ್ ಸಾರಥ್ಯದ ಕಲಾಧರ ಯಕ್ಷರಂಗ ಬಳಗದ ಖ್ಯಾತ ಯಕ್ಷಗಾನ ಕಲಾವಿದರಿಂದ ‘ಶ್ರೀ ರಾಮಾಂಜನೇಯ ಯುದ್ಧ’ ಎನ್ನುವ ಪೌರಾಣಿಕ ಕಥೆಯ ಯಕ್ಷಗಾನ ಪ್ರದರ್ಶನ ನೆರವೇರಿತು.
ಸಾಲಿಗ್ರಾಮ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಕೆ. ಬದರೀನಾಥ ನಾಯರಿ, ವೆಂಕಟೇಶ ಭಟ್, ಮುರಳೀಧರ ನಾವುಡ, ಕೃಷ್ಣಾನಂದ ಆಚಾರ್ಯ ಹಾಗೂ ಹೇಮಾ ಶಾಂತಪ್ಪ ಪೂಜಾರಿ, ಅಡಿಟರ್ ಉಮೇಶ್ ಶೆಟ್ಟಿ, ನಾಗೇಶ್ವರಿ ನಾಯರಿ, ಕಾವ್ಯ ಹಂದೆ, ಕಲಾವಿದ ಎ. ಮಹಾಲಿಂಗಪ್ಪ, ಸುಶೀಲಾದೇವಿ ರಾವ್, ಪ್ರದೀಪ ಕಾರಂತ, ಭಾಸ್ಕರ ನಾಯಕ್, ಎಸ್.ಟಿ. ಶಾಂತ ಗಂಗಾಧರ, ಟಿ. ಪ್ರಹ್ಲಾದ ಮತ್ತಿತರರು ಉಪಸ್ಥಿತರಿದ್ದರು.