ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ‘ಟಿ. ಗಿರಿಜಾ ದತ್ತಿ ಪುರಸ್ಕಾರ’ಕ್ಕೆ ಖ್ಯಾತ ವಿಜ್ಞಾನ ಬರಹಗಾರರು ಮತ್ತು ಜವಹರಲಾಲ್ ನೆಹರು ತಾರಾಲಯದ ನಿವೃತ್ತ ನಿರ್ದೇಶಕರೂ ಆದ ಡಾ. ಬಿ.ಎಸ್. ಶೈಲಜ ಇವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀಮತಿ ಟಿ.ಎಸ್. ಶೈಲಜ ಇವರು ಸೂಕ್ಷ್ಮ ಸಂವೇದನಾಶೀಲ ಬರಹಗಾರ್ತಿ ಟಿ. ಗಿರಿಜಾ ಇವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಲೇಖಕಿಯವರಿಗೆ ಈ ಗೌರವ ಸಲ್ಲುತ್ತದೆ. ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಅರುಂಧತಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು.
2025ನೆಯ ಸಾಲಿನ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಬಿ.ಎಸ್. ಶೈಲಜ ಇವರು ಕನ್ನಡದ ಮಹತ್ವದ ಬರಹಗಾರ ಬ.ನ. ಸುಂದರರಾಯರ ಮಗಳು. ಭಾರತೀಯ ಭೌತ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪಡೆದ ಇವರು ಜವಹರಲಾಲ್ ನೆಹರು ತಾರಾಲಯದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಕನ್ನಡದಲ್ಲಿ ವಿಜ್ಞಾನವನ್ನು ಅದರಲ್ಲಿಯೂ ಭೌತ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ನಿರಂತರವಾಗಿ ಬರೆಯುತ್ತಿರುವ ಅವರ ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕನ್ನಡದಲ್ಲಿ ಆರು ನೂರು ಮತ್ತು ಇಂಗ್ಲೀಷಿನಲ್ಲಿ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಗಮನ ಸೆಳೆದಿದ್ದಾರೆ. ಅತ್ಯುತ್ತಮ ಅನುವಾದಕರೂ ಆಗಿರುವ ಅವರ ‘ರುದ್ರಪ್ರಯಾಗದ ನರಭಕ್ಷಕ ಚಿರತೆ’, ‘ಗಲಿವರನ ಪ್ರವಾಸ’ ಮಹತ್ವದ ಅನುವಾದಗಳಾಗಿವೆ. ‘ಖಗೋಳ ದರ್ಶನ’ ಎನ್ನುವ ಬೃಹತ್ ಸಂಪುಟ ಅವರು ಕನ್ನಡಕ್ಕೆ ನೀಡಿರುವ ಮಹತ್ವದ ಕೊಡುಗೆ. ಶ್ರೀಮತಿ ಟಿ. ಗಿರಿಜಾ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಬಿ.ಎಸ್. ಶೈಲಜ ಇವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಇವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.