ಬಂಟ್ವಾಳ : ಯಕ್ಷಕಲಾ ಪೊಳಲಿ ಇದರ 30ನೇ ವರ್ಧಂತ್ಯುತ್ಸವ ತ್ರಿಂಶತಿ ಸಂಭ್ರಮದ ಪ್ರಯುಕ್ತ ‘ಪೊಳಲಿ ಯಕ್ಷೋತ್ಸವ- 2025’ ಪ್ರಶಸ್ತಿ ಪ್ರಧಾನ, ಗೌರವಾರ್ಪಣೆ, ಸನ್ಮಾನ, ಸಂಸ್ಮರಣೆ, ಬಯಲಾಟ ಮತ್ತು ಸಭಾ ಪರ್ವ ಕಾರ್ಯಕ್ರಮವನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಆಯೋಜಿಲಾಗಿದೆ.
ಕಳೆದ 30 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ನಿರಂತರ ಕಲಾ ಸೇವೆ ಮಾಡುತ್ತಿರುವ ಐದು ಮಂದಿ ಕಲಾವಿದರಿಗೆ ಗೌರವಾರ್ಪಣೆ, ಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ, ಸ್ಥಳೀಯ ಕಲಾ ಪೋಷಕರಾದ ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ಮತ್ತು ಕೀರ್ತಿಶೇಷರಾದ ಎಂಟು ಮಂದಿ ಹಿರಿಯ ಕಲಾವಿದರ ಸಂಸ್ಮರಣೆ, ಜರಗಲಿರುವುದು. ಸಮಾರಂಭದಲ್ಲಿ ರಾಮಕೃಷ್ಣ ತಪೋವನ ಪೊಳಲಿಯ ವಿವೇಕಾ ಚೈತನ್ಯಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಬಂಟ್ವಾಳ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಇವರು ಅಧ್ಯಕ್ಷತೆ ವಹಿಸಲಿರುವರು.
ಸಂಜೆ 5-00 ಗಂಟೆಗೆ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಸಿದ್ಧಾಪುರ ಇವರಿಂದ ‘ಮಧುರಾ ಮಹೀಂದ್ರ’ ಎಂಬ ಬಡಗುತಿಟ್ಟಿನ ಯಕ್ಷಗಾನ ಬಯಲಾಟ, ರಾತ್ರಿ 10-30 ಗಂಟೆಗೆ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ‘ದಮಯಂತಿ ಪುನ: ಸ್ವಯಂವರ’, ‘ಜ್ವಾಲಾ ಪ್ರತಾಪ’, ‘ವೀರ ಬಬ್ರುವಾಹನ’ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಸಂಪನ್ನಗೊಳ್ಳಲಿದೆ.