ಮೂಡುಬಿದಿರೆ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಪರಮಪೂಜ್ಯ ಭಾರತ ಭೂಷಣ ಜಗದ್ಗುರು ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯ ಪಟ್ಟಾಚರ್ಯವರ್ಯ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ದಿನಾಂಕ 21 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಸಭಾ ಭವನದಲ್ಲಿ ‘ಐರಾವತ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ, ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ ಭಟ್ ಹಾಗೂ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಅರ್ಜುನ), ಕಿಶೋರಿ ದುಗ್ಗಪ್ಪ ನಡುಗಲ್ಲು (ಕುಂತಿ), ಹರಿಣಾಕ್ಷಿ ಜೆ. ಶೆಟ್ಟಿ (ಧರ್ಮರಾಯ), ಶಾರದಾ ಅರಸ್ (ದೇವೇಂದ್ರ), ಮನೋರಮಾ ಜಿ. ಭಟ್ (ನಾರದ) ಸಹಕರಿಸಿದರು. ಸ್ವಾಮೀಜಿಯವರು ಕಲಾವಿದರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.