ಆನೆಗುಡ್ಡೆ : ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರಿಂದೊಡಗೂಡಿದ ಎರಡು ತಂಡ ದಿನಾಂಕ 22 ಸೆಪ್ಟೆಂಬರ್ 2025ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ‘ಕೃಷ್ಣಾರ್ಜುನ ಕಾಳಗ’ ಪ್ರಸಂಗದ ತುಣುಕೊಂದನ್ನು ಪ್ರಸ್ತುತ ಪಡಿಸುವ ಮೂಲಕ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಿದ ಆನೆಗುಡ್ಡೆ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯ “ಹೂವಿನಕೋಲು ಯಕ್ಷಗಾನ ಕಲಾ ಪ್ರಕಾರ ಮಕ್ಕಳ ಕಲಿಕೆಗೆ ದಾರಿಯಾಗುತ್ತದೆ. ಗತಕಾಲದಲ್ಲಿ ಪ್ರಸಿದ್ಧ ಕಲಾವಿದರು, ಗುರುಗಳು ಬಾಲಕರ ತಂಡದೊಂದಿಗೆ ಮನೆ ಮನೆಗೆ ತೆರಳಿ ಹೂವಿನಕೋಲು ಕಾರ್ಯಕ್ರಮವನ್ನು ನವರಾತ್ರಿಯ ಸಂದರ್ಭಗಳಲ್ಲಿ ಮಾಡುತ್ತಿದ್ದುದು ಈಗ ನೆನಪು ಮಾತ್ರ. ಅಂತಹ ಕಲಾ ಪ್ರಕಾರವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಆಯ್ದ ಹಲವಾರು ಮನೆಗಳಿಗೆ ಬೇಟಿ ನೀಡಿ ಪೌರಾಣಿಕ ಪ್ರಸಂಗವನ್ನು ಪ್ರಸ್ತುತ ಪಡಿಸುವುದು ಒಳ್ಳೆಯ ಸಂಸ್ಕಾರ” ಎಂದು ಶುಭ ಹಾರೈಸಿದರು.
ದಿನಾಂಕ 02 ಅಕ್ಟೋಬರ್ 2025ರ ತನಕ ನಿರಂತರ ಎರಡು ತಂಡಗಳು ಕುಂದಾಪುರ, ಉಡುಪಿ, ಬ್ರಹ್ಮಾವರ, ಮಂಗಳೂರು ವಿಭಾಗದಲ್ಲಿ ಅಲ್ಲಲ್ಲಿ ಹಲವಾರು ಮನೆಗಳಿಗೆ ಸಂಪರ್ಕ ಮಾಡಿ ನವರಾತ್ರಿಯನ್ನು ಆಚರಿಸುವವರಲ್ಲಿ ಕಲಾ ಪ್ರಕಾರದ ಪೌರಾಣಿಕ ಪ್ರಸಂಗವನ್ನು ನೀಡಿ, ಮನೆ ಮನೆಗಳಿಗೆ ಮಕ್ಕಳ ಮೂಲಕ ಹರಸುವ ಕಾರ್ಯ ಶ್ಲಾಘನೀಯ ಎಂದು ಅರ್ಚಕ ಶ್ರೀನಿಧಿ ಭಟ್ ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವ್ಯವಸ್ಥಾಪಕ ಮಂಡಳಿಯ ನಟೇಶ್ ಕಾರಂತ್, ಕಲಾವಿದರಾದ ಗಣಪತಿ ಭಟ್, ರಾಹುಲ್ ಕುಂದರ್ ಕೋಡಿ ಕನ್ಯಾಣ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದು ಕಾರ್ಯಕ್ರಮ ಸಂಪನ್ನಗೊಂಡಿತು.