ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ ಕೊಡ ಮಾಡುವ 2025ರ ಸಾಲಿನ ‘ಆದಿಕವಿ ಪುರಸ್ಕಾರ’ಕ್ಕೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಅರಬಗಟ್ಟೆ ಅಣ್ಣಪ್ಪನವರು ಆಯ್ಕೆಯಾಗಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ವತಿಯಿಂದ ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯ ಸಾಧಕರಿಗೆ ‘ಆದಿಕವಿ ಪುರಸ್ಕಾರ’ವನ್ನೂ, ಕಿರಿಯ ಸಾಹಿತ್ಯ ಸಾಧಕರಿಗೆ ‘ವಾಗ್ದೇವಿ ಪುರಸ್ಕಾರ’ ನೀಡಲಾಗುತ್ತಿದೆ. ಅದರಂತೆ ಈ ಬಾರಿ ಆದಿಕವಿ ಪುರಸ್ಕಾರಕ್ಕೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಅರಬಗಟ್ಟೆ ಅಣ್ಣಪ್ಪನವರು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವನ್ನು ಜಿ.ಕೆ. ಗ್ರೂಪ್ ಉದ್ಯಮಿ ಎಸ್. ಜಯರಾಮ್, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ. ಹರೀಶ್ ಪ್ರಯೋಜಿಸಿದ್ದು, ದಿನಾಂಕ 12 ಅಕ್ಟೋಬರ್ 2025ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ. ಈ ಎರಡು ಪ್ರಶಸ್ತಿಯು ತಲಾ । ಲಕ್ಷ ರೂ.ನಗದು ಹಾಗೂ ಫಲಕವನ್ನು ಹೊಂದಿದೆ.
ಆದಿಕವಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪ್ರೊ. ಎಲ್.ವಿ. ಶಾಂತಕುಮಾರಿಯವರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಧ್ಯಯನ, ಬೋಧನೆ ಮತ್ತು ಕೃತಿಗಳ ಮೂಲಕ ಅಮೂಲ್ಯ ಕೊಡುಗೆಯನ್ನು ನೀಡಿದವರು. ಅವರ ಪಾಂಡಿತ್ಯಪೂರ್ಣ ಸಾಹಿತ್ಯಕ ಸಾಧನೆಯು, ಹೊಸ ಪೀಳಿಗೆಗೆ ಪ್ರೇರಣೆಯ ದೀಪವಾಗಿದೆ. ಸಂಶೋಧನಾ ಲೇಖನಗಳಿಂದ ಹಿಡಿದು, ಕಾವ್ಯ ವಿಮರ್ಶೆಗಳವರೆಗೂ ಅವರ ಬರಹಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸಾತ್ವಿಕ ಬಲವನ್ನು ನೀಡಿವೆ. ಆ ನಿಟ್ಟಿನಲ್ಲಿ ಪ್ರೊ. ಎಲ್.ವಿ. ಶಾಂತಕುಮಾರಿಯವರಿಗೆ ‘ಆದಿಕವಿ ಪುರಸ್ಕಾರ’ ನೀಡಿ ಗೌರವಿಸಲಾಗುತ್ತದೆ.
ಅಣ್ಣಪ್ಪನವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟಿಯವರು. ಪ್ರಸ್ತುತ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು. ಅವರು ಅಧ್ಯಾಪನ, ಅಧ್ಯಯನದ ಜೊತೆ ಬರೆವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕಥೆ, ಕವನ ಹಾಗೂ ಚಿಂತನ ಬರಹಗಳು ಪ್ರಕಟಗೊಂಡಿರುತ್ತವೆ. ‘ಜಾತ್ರೆಗೆ ನುಗ್ಗಿದ ಮಗು’ ಕವನಸಂಕಲನ ಹಾಗೂ ‘ಅಕ್ಕಡಿ’ ಅಣ್ಣಪ್ಪನವರ ಪ್ರಕಟಿತ ಕೃತಿಗಳು. ವರ್ತಮಾನದ ಘಟನೆಗಳಿಗೆ ಪ್ರತಿಕ್ರಿಯಿಸಲು ಸಾಹಿತ್ಯ ರಚನೆಯನ್ನೇ ಆಶ್ರಯಿಸಿರುವ ಇವರು, ಸಾವಿರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ.