ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇದರ ವತಿಯಿಂದ ‘ವಿದ್ಯಾದಶಮಿ ಸಂಗೀತೋತ್ಸವ -2025’ವನ್ನು ದಿನಾಂಕ 02 ಅಕ್ಟೋಬರ್ 2025ರಂದು ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಭಾಂಗಣದಲ್ಲಿ ನಡೆಯಿತು.
ಈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಪ್ರಕೃತಿಯಲ್ಲಿ ಮತ್ತು ಕಲಾ ಪ್ರಕಾರಗಳಲ್ಲಿ ನಮ್ಮ ಹಿರಿಯರು ಭಗವಂತನ ಅನುಸಂಧಾನ ಕಂಡುಕೊಂಡರು. ಕಳೆದ 25 ವರ್ಷಗಳಿಂದ ಈ ಪರಂಪರೆಯಲ್ಲಿ ಸರಿಗಮ ಭಾರತಿ ಸಂಸ್ಥೆ ಸಾಗಿ ಬಂದಿದೆ. ಸನಾತನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಈ ಸಂಸ್ಥೆಯ ಕಾಳಜಿಗೆ ಬಹಳಷ್ಟು ಮಂದಿ ಸ್ಪಂದಿಸಿ ಕೈಜೋಡಿಸಿದ್ದಾರೆ ಎನ್ನುವುದು ಸಂತೋಷದ ಸಂಗತಿ. ವಿಜಯದಶಮಿಯ ಈ ಸಂದರ್ಭ ಇದೊಂದು ಆನಂದದ ಕ್ಷಣ. ಇಂದಿನ ಒತ್ತಡದ ಬದುಕಿನ ಮಧ್ಯೆ ಎಲ್ಲರದ್ದು ಆನಂದದ ಹುಡುಕಾಟ. ಯಾವುದೇ ಕಾರ್ಯಕ್ರಮ ನಡೆಯಲಿ ಇದರಿಂದ ನನಗೆ ಲಾಭ ಏನಿದೆ ಎನ್ನುವ ಪ್ರಶ್ನೆ ನಮ್ಮನ್ನೆಲ್ಲ ಕಾಡುವುದು ಸಹಜ. ಆದರೆ ಅದನ್ನು ಮೀರಿ ಈ ಕಾರ್ಯಕ್ರಮದಲ್ಲಿ ನನ್ನ ಪಾತ್ರವೇನಿದೆ, ನಾನು ಮಾಡಬೇಕಾದ ಕೆಲಸ ಏನಿದೆ ಎನ್ನುವ ಬಗ್ಗೆ ನಾವು ಚಿಂತಿಸಿ ಆ ಕೆಲಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ನಿರಾಯಾಸವಾಗಿ ಆನಂದ ನಮಗೆ ಸಿಗಬಲ್ಲದು. ಸಮಾಜ ಇಂದು ಕವಲು ದಾರಿಯಲ್ಲಿದೆ. ಕ್ಷಣಿಕ ಆಕರ್ಷಣೆ ನಮ್ಮ ಮಕ್ಕಳನ್ನು ದಿಕ್ಕು ಕೆಡಿಸುವ ಅಪಾಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಬಹಳಷ್ಟು ಮಕ್ಕಳಿಗೆ ಮನೆಯಿಂದ ಬೇಕಾದ ಸಂಸ್ಕಾರ ಸಿಗುತ್ತಿಲ್ಲ. ಹೀಗಾಗಿ ಹೆಚ್ಚಿನ ಮಕ್ಕಳ ಕೈಗಳಲ್ಲಿ ಮೊಬೈಲುಗಳೇ ಕಾಣಿಸುತ್ತಿವೆ. ಸರಿಗಮ ಭಾರತಿ ಈ ನಿಟ್ಟಿನಲ್ಲಿ ನಮಗೊಂದು ದೀಪ. ಸಂಸ್ಕಾರದ ಬಾಗಿಲು ತೆರೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಇಂಥ ಸಂಸ್ಥೆಗಳು ಇನ್ನಷ್ಟು ಹೆಚ್ಚಲಿ. ನಮ್ಮ ಮಕ್ಕಳ ಬದುಕು ಹಸನಾಗಲಿ” ಎಂದು ಹೇಳಿದರು.
ಇದೇ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜುನಾಥ ಉಪಾಧ್ಯಾಯ ಅವರು ಮಾತನಾಡಿ “ಸಂಗೀತದ ಮೂಲಕ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಇಂಥ ಸಂಸ್ಥೆ ನಮ್ಮ ಹತ್ತಿರವೇ ಇರುವುದು ಭಾಗ್ಯ” ಎಂದು ಹೇಳಿ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಬಹುಮುಖ ಪ್ರತಿಭೆಯ ಆಪ್ತ ಸಮಾಲೋಚಕಿ ಶ್ರೀಮತಿ ಶಿಲ್ಪಾ ಜೋಶಿ ಮತ್ತು ಹೆಸರಾಂತ ನೃತ್ಯಗಾತಿ, ಗುರು ಮತ್ತು ನಟಿ ಶ್ರೀಮತಿ ಮಾನಸಿ ಸುಧೀರ್ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಇಬ್ಬರೂ ಉತ್ತರರೂಪವಾಗಿ ಸರಿಗಮ ಭಾರತಿಯನ್ನು ಅಭಿನಂದಿಸಿದರು. ಆರಂಭದಲ್ಲಿ ಸರಿಗಮ ಭಾರತಿಯ ಶ್ರೀ ಉದಯ ಶಂಕರ್ ಪ್ರಸ್ತಾವನೆಯ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸರಿಗಮ ಭಾರತಿಯ ಗುರು ಶ್ರೀಮತಿ ಉಮಾಶಂಕರಿ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಶಕುಂತಲಾ ಪ್ರಾರ್ಥನೆ ಗೈದರು. ಡಾ. ರಾಘವೇಂದ್ರ ಹೊಳ್ಳ ಕಾರ್ಯಕ್ರಮ ನಿರ್ವಾಹಕರಾಗಿ ಸಹಕರಿಸಿದರು.
ಬೆಳಿಗ್ಗೆ ಮಣಿಪಾಲದ ಹಿಂದೂಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಇವರ ಹಿಂದೂಸ್ತಾನಿ ಗಾಯನ, ಇವರಿಗೆ ತಬಲಾದಲ್ಲಿ ಭಾರವಿ ದೇರಾಜೆ ಹಾಗೂ ಹಾರ್ಮೋನಿಯಂ ಶಶಿಕಿರಣ್ ರಾವ್ ಸಹಕರಿಸಿದರು. ನಂತರ ವಿದುಷಿ ಸುರೇಖಾ ಭಟ್ ಇವರಿಂದ ಕರ್ನಾಟಕ ಸಂಗೀತ ಕಛೇರಿ, ಇವರಿಗೆ ವಯೋಲಿನ್ ನಲ್ಲಿ ಪ್ರಮಥ್ ಭಾಗವತ್, ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಸಹಕರಿಸಿದರು. ನಂತರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳ ಪ್ರಸ್ತುತಿ ನಡೆಯಿತು. ನಂತರ ತನ್ಮಯಿ ಉಪ್ಪಂಗಳ ಇವರ ಸಂಗೀತ ಕಛೇರಿ, ಇವರಿಗೆ ವಯೋಲಿನ್ ನಲ್ಲಿ ಶ್ರುತಿ ಸಿ.ವಿ. ಹಾಗೂ ಮೃದಂಗದಲ್ಲಿ ಸುನಾದಕೃಷ್ಣ ಅಮೈ ಸಹಕರಿಸಿದರು. ನಂತರ ವಿದ್ಯಾಲಯದ ಮಕ್ಕಳಿಂದ ಕೃತಿಗಳ ಪ್ರಸ್ತುತಿ ಹಾಗೂ ಎಲ್ಲ ಕಲಾವಿದರಿಂದ ತ್ಯಾಗರಾಜರ ಘನಪಂಚರತ್ನ ಗೋಷ್ಠಿ ಗಾಯನ ನಡೆಯಿತು.
ಸಂಜೆ ಮೈಸೂರಿನ ಎ. ಚಂದನ್ ಕುಮಾರ್ ಇವರ ಕೊಳಲವಾದನ, ಇವರೊಂದಿಗೆ ವಯೊಲಿನ್‌ನಲ್ಲಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ಅರ್ಜುನ್ ಕುಮಾರ್ ಬೆಂಗಳೂರು ಮತ್ತು ಸುನಾದ ಕೃಷ್ಣ ಅಮೈ ಸಾಥ್ ನೀಡಿದರು. ನಂತರ ಮಂಗಳೂರಿನ ‘ನೃತ್ಯಾಂಗನ್’ನ ಅದಿತಿ ಲಕ್ಷ್ಮಿ ಭಟ್ ಹಾಗೂ ಪುತ್ತೂರಿನ ದೀಪಕ್ ಕುಮಾರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆದು ಮಂಗಲದೊಂದಿಗೆ ಮುಕ್ತಾಯಗೊಂಡಿತು.