ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ- 2025ರ ಅಂಗವಾಗಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ದಿನಾಂಕ 23 ಸೆಪ್ಟೆಂಬರ್ 2025ರಂದು 2ನೇ ವರ್ಷದ ಬಹುಭಾಷಾ ಮತ್ತು ತುಳು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕವಿಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಿ “ಭಾರತ ಹಲವು ಭಾಷೆಗಳ ರಂಗೋಲಿ. ಎಲ್ಲಾ ಭಾಷೆಗಳ ಉದ್ದೇಶ ಮನುಕುಲದ ಉದ್ದಾರ. ಇಲ್ಲಿ ಯಾವುದೇ ಭಾಷೆಯನ್ನು ಸಾಯಲು ಬಿಡಬಾರದು. ಕೆಲವು ಭಾಷೆಗಳು ಪತನಮುಖಿಯಾಗಿವೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಬಹುಭಾಷಾ ಕವಿಗೋಷ್ಠಿ ಪೂರಕ. ಕವಿಗಳು ಹೊಸಲೋಕವನ್ನು ಭಾಷೆಯಲ್ಲಿ ಸೃಷ್ಟಿಸುತ್ತಾರೆ. ಆದರೆ ಭಾಷೆಯನ್ನು ಮುರಿದು ಕಟ್ಟುವ ಚೈತನ್ಯ ಕವಿಗಳಿಗೆ ಬೇಕು” ಎಂದರು.
ಪದ್ಮರಾಜ್ ಆರ್. ಪೂಜಾರಿ ಮಾತನಾಡಿ “ದಸರಾ ಎನ್ನುವುದು ಕೇವಲ ಧಾರ್ಮಿಕತೆಗೆ ಸೀಮಿತವಾಗಿರದೆ ಕಲೆ, ಸಾಹಿತ್ಯದ ಹಬ್ಬವೂ ಇರಬೇಕು ಎಂಬ ದೃಷ್ಟಿಯಿಂದ ಬಹುಭಾಷಾ ಕವಿಗೋಷ್ಠಿಯನ್ನು ಕಳೆದೆರಡು ವರ್ಷದಿಂದ ಹಮ್ಮಿಕೊಳ್ಳಲಾಗುತ್ತಿದೆ” ಎಂದರು. ಆಯ್ದ ಕವನಗಳ ಕವನ ಸಂಕಲನವನ್ನು ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಬಿಡುಗಡೆಗೊಳಿಸಿದರು. ಕೃತಿನ್ ಧಿರಜ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಬಿ. ಮುರಾರಿ ತಂತ್ರಿ (ಸಂಸ್ಕೃತ), ಮನೋಜ್ ಕುಮಾರ್ (ಕನ್ನಡ), ವಿನೋದ್ ಮೂಡುಗದ್ದೆ (ಅರೆಭಾಷೆ), ಹಂಝಾ ಮಲಾರ್ (ಬ್ಯಾರಿ), ಜೊಸ್ಸಿ ಪಿಂಟೋ (ಕೊಂಕಣಿ), ವೆಂಕಟೇಶ್ ನಾಯಕ್ (ಕೊಂಕಣಿ), ಡಾ. ಸುರೇಶ್ ನೆಗಳಗುಳಿ (ಹವ್ಯಕ), ಡಾ. ಅಣ್ಣಯ್ಯ ಕುಲಾಲ್ (ಕುಂದಗನ್ನಡ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಕವಿತಾ ಅಣ್ಣೂರು (ಶಿವಳ್ಳಿ ತುಳು), ಗೀತಾ ಲಕ್ಷ್ಮೀಶ ಶೆಟ್ಟಿ (ತುಳು), ಸವಿತಾ ಕರ್ಕೇರ ಕಾವೂರು (ಹಿಂದಿ) ಕವನ ವಾಚಿಸಿದರು. ರಂಗಸಂಗಾತಿಯ ಶಶಿರಾಜ್ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.
ತುಳು ಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ವಿ.ವಿ. ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ಕವನಗಳಿಂದ ಒಳ್ಳೆಯದನ್ನು ಕಟ್ಟಿಕೊಡುವ ಕೆಲಸ, ಶಕ್ತಿಯ ಆರಾಧನೆ, ಸಾಹಿತ್ಯದ ಆಸ್ವಾದನೆ ಅಭಿನಂದನೀಯ. ಕವನಗಳಿಂದ ಒಳ್ಳೆಯದನ್ನು ಕಟ್ಟಿಕೊಡುವ ಕೆಲಸವಾಗುತ್ತಿವೆ. ಕವನಗಳೆಂದರೆ ಸಾಗುವಳಿ ಮಾಡಿದಂತೆ. ಕವಿಯಾದವನು ತಾನು ಬರೆಯುವ ಜತೆಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು” ಎಂದರು.
ರೂಪಕಲಾ ಆಳ್ವ, ಅಶೋಕ್ ಎನ್. ಕಡೇಶಿವಾಲಯ, ಸದಾನಂದ ನಾರಾವಿ, ದೊಂಬಯ್ಯ ಇಡ್ಕಿದು, ಶಶಿಕಲಾ ಭಾಸ್ಕರ್ ಬಾಕ್ರಬೈಲ್, ಪ್ರಮೀಳಾ ದೀಪಕ್ ಪೆರ್ಮುದೆ ಕವನ ವಾಚಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕಿಶೋರ್ ದಂಡೆಕೇರಿ ಕವಿಗಳನ್ನು ಗೌರವಿಸಿದರು. ಕೀರ್ತನ ಸನಿಲ್ ಕಾರ್ಯಕ್ರಮ ನಿರೂಪಿಸಿದರು.