ಕಾಸರಗೋಡು : ಚತುರ್ಭಾಷಾ ವಿದ್ವಾಂಸ, ತುಳು ಲಿಪಿ ಬ್ರಹ್ಮ ದಿ. ಪುಂಡೂರು ವೆಂಕಟರಾಜ ಪುಣಿಂಚತ್ತಾಯ (ಪುವೆಂಪು) ಇವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ‘ಪುವೆಂಪು ನೆನಪು 2025’ ಇದರ ಆಮಂತ್ರಣ ಪತ್ರಿಕೆಯನ್ನು ದಿನಾಂಕ 02 ಅಕ್ಟೋಬರ್ 2025ರಂದು ಎಡನೀರು ಶ್ರೀ ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವುಗಳು ಸಂಯುಕ್ತವಾಗಿ ದಿನಾಂಕ 15 ಅಕ್ಟೋಬರ್ 2025ರಂದು ಹೊಸಂಗಡಿ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಡನೀರು ಮಠಾಧೀಶರು ಆಶೀರ್ವಚನ ನೀಡುವರು. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉದ್ಘಾಟಿಸುವರು. ಈ ಸಂದರ್ಭ ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಇವರಿಗೆ ‘ಪುವೆಂಪು ಪ್ರಶಸ್ತಿ 2025’ಯನ್ನು ಪ್ರದಾನಗೈಯ್ಯಲಾಗುವುದು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ . ಸುಬ್ಬಯ್ಯಕಟ್ಟೆ ಪುವೆಂಪು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿಜಯರಾಜ ಪುಣಿಂಚತ್ತಾಯ ಪುಂಡೂರು, ಕಾಸರಗೋಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಈ ಸಂದರ್ಭ ಉಪಸ್ಥಿತರಿದ್ದರು.