ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‘ಕಾವ್ಯಾಂ ವ್ಹಾಳೊ-7’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ದಿನಾಂಕ 04 ಅಕ್ಟೋಬರ್ 2025ರಂದು ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಕವಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಕಾಡೆಮಿಯು ಪ್ರತಿ ತಿಂಗಳು ಕವಿಗೋಷ್ಟಿಯನ್ನು ಹಮ್ಮಿಕೊಳ್ಳುತ್ತದೆ. ಇದು ಎಲ್ಲಾ ಯುವ ಕವಿಗಳಿಗೆ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲು ಅವಕಾಶವಾಗಲಿʼ ಎಂದು ಹೇಳಿದರು.
ಖ್ಯಾತ ಹಿರಿಯ ಸಂಗೀತಗಾರರಾದ ಶ್ರೀ ಮುರಳೀಧರ್ ಕಾಮತ್ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇವರು ಮಾತನಾಡಿ, “ತುಂಬಾ ಜನರಿಗೆ ಸಂಗೀತದಲ್ಲಿ ಆಸಕ್ತಿ ಇದೆ. ಸಂಗೀತಕ್ಕೆ ತುಂಬಾ ಪ್ರೋತ್ಸಾಹ ಸಿಗುತ್ತಿದೆ. ಕೊಂಕಣಿಯಲ್ಲೂ ಸಂಗೀತ ಹಾಡುತ್ತೇನೆ ಎಂಬುದು ನನಗೆ ಹೆಮ್ಮೆಯ ವಿಷಯ” ಎಂದರು.
ಪ್ರಮುಖ ಉಪಾನ್ಯಾಸಕರಾಗಿ ಆಗಮಿಸಿದ, ಸಾಹಿತಿ ಹಾಗೂ ನಾಟಕ ಬರಹಗಾರರಾದ ಫಾ. ಆಲ್ವಿನ್ ಸೆರಾವೊರವರು ಸಾಹಿತ್ಯದ ಬಗ್ಗೆ ಮಾತಾನಾಡಿ “ಸಾಹಿತ್ಯವು ಕೇವಲ ಕಾಲ್ಪನಿಕವಲ್ಲದೇ ಅನುಭವದಿಂದ ಬರುತ್ತದೆ. ಪ್ರತಿ ಕೆಲಸವು ಚಿಂತನೆಯಿಂದ ಪ್ರಾರಂಭವಾಗುತ್ತದೆ. ಶೃಂಗಾರ, ನವರಸವಿದ್ದಲ್ಲಿ ಮಾತ್ರ ಅದನ್ನು ಸಾಹಿತ್ಯ ಎಂದು ಹೇಳಬಹುದು” ಎಂದರು.
ಶ್ರೀಮತಿ ತಾರಾ ಲವೀನಾ ಫೆರ್ನಾಂಡಿಸ್ರವರು ಕವಿಗೋಷ್ಟಿಯನ್ನು ನಡೆಸಿದರು. ಶ್ರೀಮತಿ ಮರಿಯಾ ಪಿಂಟೊ, ಶ್ರೀ ವಿಲ್ಪ್ರೆಡ್ ಆರ್ ಪಾಂಗ್ಳಾ, ಶ್ರೀ ರಾಧಕೃಷ್ಣ ನಾಯಕ್, ಶ್ರೀಮತಿ ಡಿಂಪಲ್ ಫೆರ್ನಾಂಡಿಸ್, ಡಾ. ಪ್ರೇಮ್ ಮೊರಾಸ್, ಶ್ರೀ ವಿಕಾಸ್ ಲಸ್ರಾದೊ, ಕು. ವೆನಿಶಾ ಜೆಸ್ಸಿಕಾ ಸಲ್ಡಾನ್ಹಾ, ಶ್ರೀ ಅವಿಲ್ ರಸ್ಕೀನ್ಹಾ, ಶ್ರೀ ಗ್ಲ್ಯಾನಿಶ್ ಮಾರ್ಟಿಸ್ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯೆ ಸಪ್ನಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ರೊನಾಲ್ಡ್ ಕ್ರಾಸ್ತಾ ವಂದಿಸಿದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಮರ್ಥ್ ಭಟ್, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.