ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಬಡಗುತಿಟ್ಟು ಯಕ್ಷಗಾನ ರಂಗದ ಅನುಭವೀ ವೇಷಧಾರಿ ಶ್ರೀ ದಿನಕರ್ ಕುಂದರ್ ನಡೂರು ಅವರು ತಿರುಗಾಟದ ರಜತ ಸಂಭ್ರಮದಲ್ಲಿದ್ದಾರೆ. ವೃತ್ತಿ ಕಲಾವಿದನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ. 2022-23ನೇ ಸಾಲು ಇವರ ಇಪ್ಪತ್ತೈದನೇ ವರ್ಷದ ತಿರುಗಾಟ.
ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ದಿನಕರ್ ಕುಂದರ್ ನಡೂರು ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ, ಕುಣಿತ ನೋಡಲು ಬಹಳ ಸುಂದರ. ೨೮.೦೪.೧೯೮೦ ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನಡೂರು, ಅಜ್ಜಿಮನೆಯ ಮಾಧವ ರಾವ್ (ದಿ.ಶಿರಿಯಾರ ಮಂಜು ನಾಯಕರ ತಮ್ಮ) ಹಾಗೂ ತುಂಗ ಮರಕಾಲ್ತಿ ಇವರ ಮಗನಾಗಿ ಜನನ. ೭ ನೇ ತರಗತಿವರೆಗೆ ವಿದ್ಯಾಭ್ಯಾಸ. ಹಿರಿಯಣ್ಣ ಶೆಟ್ಟಿಗಾರ್, ತಂತ್ರಾಡಿ ಇವರು ಯಕ್ಷಗಾನದ ಪ್ರಥಮ ಗುರು. ಯಕ್ಷಗಾನ ಕಲಾಕೇಂದ್ರ ಉಡುಪಿಯಲ್ಲಿ ಒಂದು ವರುಷದ ಅಭ್ಯಾಸ. ನೀಲಾವರ ಲಕ್ಷ್ಮೀನಾರಾಯಣಯ್ಯ, ಸಂಜೀವ ಸುವರ್ಣ, ಎ.ಪಿ.ಪಾಠಕ್, ಚಂದ್ರಹಾಸ ಪುರಾಣಿಕ ಇವರ ಯಕ್ಷಗಾನದ ಗುರುಗಳು.
ಯಕ್ಷಗಾನ ರಂಗದಲ್ಲಿ ಮೋಹಿನಿ, ದೇವಿ, ತ್ರಿಲೋಕ ಸುಂದರಿ, ರಂಬೆ, ಶಶಿಪ್ರಭೆ, ಭ್ರಮರಕುಂತಳೆ, ಮೀನಾಕ್ಷಿ, ಯೋಜನಗಂದಿ, ಪ್ರಭಾವತಿ, ಮಾಲಿನಿ ಹೀಗೆ ನೂರಾರು ವೇಷಗಳನ್ನು ಮಾಡಿ ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ ದಿನಕರ್ ಕುಂದರ್ ನಡೂರು.
ಎಂ.ಎ.ನಾಯಕ್ ನರಾಡಿ, ಭೋಜರಾಜ್ ಶೆಟ್ಟಿ ಆಜ್ರಿ, ರಮಾಕಾಂತ್ ಮಡಿವಾಳ, ಹೊಳೆಕೊಪ್ಪ ಜಯಾನಂದ, ದಿ.ಕಣ್ಣಿಮನೆ ಗಣಪತಿ ಭಟ್ ಹಾಗೂ ಇನ್ನಿತರರು ಭಾಗವತರಾದ ದಿ.ಸುಬ್ರಹ್ಮಣ್ಯ ಆಚಾರ್, ಸದಾಶಿವ ಅಮೀನ್, ಹೆರಂಜಾಲ್ ಗೋಪಾಲ ಗಾಣಿಗ, ನಾಗೇಶ್ ಕುಲಾಲ್, ಹಿರಿಯಣ್ಣ ಆಚಾರ್ಯ ಹೀಗೆ ಅನೇಕ ಹಿರಿಯ ಕಲಾವಿದರ ಜೊತೆಗೆ ತಿರುಗಾಟ ಮಾಡಿದ ಅನುಭವಿ ಕಲಾವಿದ ದಿನಕರ್ ಕುಂದರ್ ನಡೂರು.
ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ ಮೇಳದಲ್ಲಿ ಒಟ್ಟು ಹದಿನೈದು ವರ್ಷ ತಿರುಗಾಟ ಮಾಡಿ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ, ಮಳೆಗಾಲದಲ್ಲಿ ಭಾಗವತರಾದ(ಸಹೋದರ) ಶ್ರೀ ಸದಾಶಿವ ಅಮೀನ್ ಕೊಕ್ಕರ್ಣೆಯವರ ಸಹಭಾಗಿತ್ವದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಎನ್ನುವ ಸಂಸ್ಥೆಯ ಮೂಲಕ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿ ಕರ್ನಾಟಕದ ಎಲ್ಲಾ ನಗರ ಪ್ರದೇಶಗಳಲ್ಲಿ ಯಕ್ಷಗಾನ ತಿರುಗಾಟವನ್ನು ಮಾಡಿರುತ್ತಾರೆ. ಅಭಿಮಾನಿಗಳಿಂದ ನೂರಾರು ಸನ್ಮಾನ ಪುರಸ್ಕಾರಗಳು ದಿನಕರ್ ಕುಂದರ್ ನಡೂರು ಅವರಿಗೆ ದೊರೆತಿರುತ್ತದೆ.
ದಿನಕರ್ ಕುಂದರ್ ನಡೂರು ಅವರು ರೇಖಾ ಅವರನ್ನು ಮದುವೆಯಾಗಿ ಮಗ ದೀಕ್ಷಿತ್ ಹಾಗೂ ಮಗಳು ರಕ್ಷಿತಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇಂದು (28-4-2023 ಶುಕ್ರವಾರ) ಶ್ರೀ ಮಂದಾರ್ತಿ ಅಮ್ಮನ ಸನ್ನಿಧಿಯಲ್ಲಿ ಹಿತೈಷಿ ಬಳಗದಿಂದ ಯಕ್ಷ ತಿರುಗಾಟ ಇಪ್ಪತ್ತೈದು ವರುಷದ ಸವಿನೆನಪಿಗೆ “ರಜತ ಸಂಭ್ರಮ” ಆಚರಣೆ ಮೂಲಕ ರಜತ ಗೆಜ್ಜೆ ನೀಡಿ ಪ್ರೋತ್ಸಾಹ ನಿಧಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ನಂತರದಲ್ಲಿ ಶ್ರೀ ಪಟ್ಲ ಭಾಗವತರ ಸಾರಥ್ಯದಲ್ಲಿ ಶ್ರೀ ಪಾವಂಜೆ ಮೇಳದ “ನಾಗ ಸಂಜೀವನ” ಯಕ್ಷಗಾನ ಪ್ರದರ್ಶನ ಇರುವುದು.
ದಯಮಾಡಿ ಕಲಾಭಿಮಾನಿ ದೇವರು ಆಗಮಿಸಿ ಪ್ರತಿಭಾವಂತ ಯುವ ಕಲಾವಿದನಿಗೆ ಶುಭ ಹಾರೈಸಬೇಕೆಂದು ರಜತ ಸಂಭ್ರಮ ಅಭಿನಂದನಾ ಸಮಿತಿ, ಮಂದಾರ್ತಿ ಸರ್ವರಿಗೂ ಸ್ವಾಗತವನ್ನು ಕೋರುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ ಮಂಗಳೂರು