ವಿಜಯಪುರ : ನಗರದ ಜೋರಾಪೂರ ಪೇಠದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಿನಾಂಕ 06 ಅಕ್ಟೋಬರ್ 2025ರಂದು ಸಂಗೀತಜಗತ್ತು ಪ್ರಕಾಶನ (ರಿ) ವಿಜಯಪುರ ವತಿಯಿಂದ ಶ್ರೀಮತಿ ಸಂಗೀತಾ ಶ್ರೀ ವಿಶ್ವನಾಥ ಅರಬಿಯವರ ಚೊಚ್ಚಲ ಸುಪುತ್ರ ಓಂ ನ ಪ್ರಥಮ ವರ್ಷದ ಹುಟ್ಟುಹಬ್ಬ ಜೊತೆಗೆ ಶ್ರೀ ವಿಶ್ವನಾಥ ಅರಬಿಯವರ ಕೃತಿಗಳ ಲೋಕಾರ್ಪಣೆ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಮಕ್ಕಳ ಸಾಹಿತಿಗಳಾದ ಸಿಂದಗಿಯ ಶ್ರೀ ಹ. ಮ. ಪೂಜಾರ ಮಾತನಾಡಿ “ಮಕ್ಕಳ ಸಾಹಿತ್ಯವನ್ನು ಎಲ್ಲರೂ ಪ್ರೀತಿಸಬೇಕು, ಮಕ್ಕಳಿಗೆ ಓದಲು ಸಾಹಿತ್ಯವನ್ನು ನೀಡಬೇಕು, ಅರಬಿ ದಂಪತಿಗಳ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಸುಪುತ್ರ ಓಂ ಒಬ್ಬ ಒಳ್ಳೆಯ ಸಾಹಿತಿಯಾಗಿ ಹೊರಹೊಮ್ಮಲಿ” ಎಂದು ಶುಭ ಹಾರೈಸಿದರು.
ವಿಶ್ವನಾಥ ಅರಬಿಯವರ ಸ್ವರಚಿತ ಮಕ್ಕಳ ಕವನ ಸಂಕಲನ ‘ಭಾರತ ಮಾತೆಯ ಮಕ್ಕಳು ನಾವು’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮಕ್ಕಳ ಸಾಹಿತಿಗಳಾದ ಪ. ಗು. ಸಿದ್ದಾಪುರ ಮಾತನಾಡಿ “ಪುಸ್ತಕಗಳು ಸವೆಯದ ಪೆಪ್ಪರಮೆಂಟು, ಸಾಹಿತ್ಯ ಸದಾ ಸತ್ಯವನ್ನೇ ಸಾರುತ್ತದೆ, ಮಕ್ಕಳ ಸಾಹಿತ್ಯವು ಎಲ್ಲರೂ ಮೆಚ್ಚುವಂಥದ್ದು ಮತ್ತು ಅದು ಪರಿಪೂರ್ಣ ಸಾಹಿತ್ಯ. ‘ಭಾರತ ಮಾತೆಯ ಮಕ್ಕಳು ನಾವು’ ಎಂಬ ಮಕ್ಕಳ ಕವನ ಸಂಕಲನವು ಮಕ್ಕಳ ಮನಸ್ಸನ್ನು ಅರಳಿಸುವಂಥ ಕೃತಿಯಾಗಿದ್ದು, ಇದು ಇವರ ಮೊದಲ ಮಕ್ಕಳ ಕವನ ಸಂಕಲನವಾಗಿದ್ದರೂ ಬಲು ಅರ್ಥಪೂರ್ಣ ಕವಿತೆಗಳ ಗುಚ್ಛವಾಗಿದೆ” ಎಂದರು.
ಸಮಾರಂಭದಲ್ಲಿ ವಿಶ್ವನಾಥ ಅರಬಿಯವರ ಹನಿಗವನ ಸಂಕಲನ ‘ಅಂಕೋಲೆಯಲ್ಲಿ ಅರಳಿದ ಹೂವು’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಮಹಾದೇವ ಬಸರಕೋಡ ಮಾತನಾಡಿ “ಆಧುನೀಕರಣದೊಂದಿಗೆ ನಮ್ಮ ಬದುಕು ಯಾಂತ್ರಿಕವಾಗಿದೆ. ನಮ್ಮ ಪುರಾತನ ಸಂಸ್ಕೃತಿಯನ್ನು ಮತ್ತೆ ಮತ್ತೆ ಆರಾಧಿಸಬೇಕಿದೆ. ಅದು ಸಾಹಿತ್ಯದಿಂದ ಮಾತ್ರವೇ ಸಾಧ್ಯ. ಸಾಹಿತ್ಯದ ಬಗ್ಗೆ ಎಲ್ಲರೂ ಒಲವು ತೋರಬೇಕಿದೆ. ‘ಅಂಕೋಲೆಯಲ್ಲಿ ಅರಳಿದ ಹೂವು’ ಕೃತಿಯು ಪ್ರಕೃತಿ ಆರಾಧನೆ ಮತ್ತು ಅಂಕೋಲಾದಲ್ಲಿನ ಜನಜೀವನದ ಕುರಿತಾದ ಕವಿತೆಗಳ ಗುಚ್ಛವಾಗಿದೆ” ಎಂದು ಹೇಳಿದರು.
ಕೃತಿಗಳ ಲೋಕಾರ್ಪಣೆಯ ನಂತರ ಓಂ ನಿಗೆ ಆರತಿ ಬೆಳಗುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು. ಎಲ್ಲರೂ ಶುಭ ಕೋರಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಆನೀದ ಕೋಲಾರ, ಶ್ರೀ ಕೆ. ಜಿ. ಕೋಟ್ಯಾಳ ಭಾಗವಹಿಸಿದ್ದರು. ವೇದಿಕೆಯಲ್ಲಿ ಲೇಖಕ ವಿಶ್ವನಾಥ ಅರಬಿ ಉಪಸ್ಥಿತರಿದ್ದರು. ಸಂಗೀತಾ ಮಠಪತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭಕ್ಕೆ ಕುಟುಂಬಸ್ಥರು, ಗುರು ಹಿರಿಯರು, ಸಾಹಿತಿಗಳು, ಸ್ನೇಹಿತರು, ಬಂಧು-ಬಾಂಧವರು ಸಾಕ್ಷಿಯಾಗಿದ್ದರು.
Subscribe to Updates
Get the latest creative news from FooBar about art, design and business.
Previous Articleಶ್ರೀ ಎಸ್.ವಿ.ಭಟ್ ಇವರಿಗೆ ಗಣಪಯ್ಯ ಶೆಟ್ಟಿ ಸ್ಮರಣೆಯ ಪ್ರಶಸ್ತಿ ಪ್ರದಾನ