ಉಡುಪಿ : ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರಿಂದ ಕಾರಂತ ಜನ್ಮದಿನೋತ್ಸವ-ಸಾಹಿತ್ಯೋತ್ಸವ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 11 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವನ್ನು ಮಾನ್ಯ ಶಾಸಕರಾದ ಯಶ್ ಪಾಲ್ ಎ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ ಇವರಿಗೆ ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ. ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಖ್ಯಾತ ವಿಮರ್ಶಕ ಡಾ. ಎಸ್.ಆರ್. ವಿಜಯ ಶಂಕರ್ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಂಶೋಧಕರಾದ ಡಾ. ರೇಖಾ ಬನ್ನಾಡಿ, ಜಾನಪದ ವಿದ್ವಾಂಸ ಎಸ್.ಎ. ಕೃಷ್ಣಯ್ಯ ಮತ್ತು ಯಕ್ಷಗಾನ ಕಲಾವಿದ ಶೇಖ್ ಮಹಮ್ಮದ್ ಗೌಸ್ ಕಾವ್ರಾಡಿ ಇವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನಿರ್ದಿಗಂತ ತಂಡದವರಿಂದ ಡಾ. ಶಿವರಾಮ ಕಾರಂತ ಕಾದಂಬರಿ ಆಧಾರಿತ ಅಮಿತ್ ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈಮನಗಳ ಸುಳಿಯಲ್ಲಿ’ ನಾಟಕ ಪ್ರಯೋಗ ಪ್ರಸ್ತುತಗೊಳ್ಳಲಿದೆ.