ಸರಿಗಮ ಭಾರತಿ ಪರ್ಕಳದ ಸಭಾಂಗಣದಲ್ಲಿ ದಿನಾಂಕ 02 ಅಕ್ಟೋಬರ್ 2025 ವಿದ್ಯಾದಶಮಿ ದಿನದಂದು ದಿನಪೂರ್ತಿ ಸಂಗೀತ ಕಚೇರಿಗಳು, ಭರತನಾಟ್ಯ, ಗೌರವ ಸನ್ಮಾನ ಅಚ್ಚುಕಟ್ಟಾಗಿ ನಡೆದದ್ದು ಮಾತ್ರವಲ್ಲದೆ, ಆಯಾಯ ಕಾರ್ಯಕ್ರಮಕ್ಕೆ ಕಲಾಸಕ್ತ ಬಂಧುಗಳು ಭಾಗಿಯಾಗಿ ಸಂಯೋಜಕರ ಆಥಿತ್ಯವನ್ನು ಸ್ವೀಕರಿಸಿದ್ದು ನಿಜಕ್ಕೂ ಒಂದು ವಿಶೇಷವಾದ ಅನುಭೂತಿಯನ್ನು ನೀಡಿತು. ಸರಿಗಮ ಭಾರತಿಯ ನಿರ್ದೇಶಕರಾದ ಡಾ. ಉದಯ ಶಂಕರ್ ಹಾಗೂ ವಿದುಷಿ ಉಮಾಶಂಕರಿಯವರ ಈ ಕಲಾಕೈಂಕರ್ಯದಲ್ಲಿ ಕೈಜೋಡಿಸಿದ ಕಲಾಮನಸ್ಸುಗಳಿಗೆ ತಲೆಬಾಗಲೇಬೇಕು.
ಬೆಳಿಗ್ಗೆ 7-40ರಿಂದ ಪಂಡಿತ್ ರವಿಕಿರಣ್ ಮಣಿಪಾಲ ಇವರು ಬಸಂತ್ ಮುಖಾರಿ ರಾಗವನ್ನು ವಿಳಂಬಿತ್ ಖ್ಯಾಲ್ ನಲ್ಲಿ ವಿದ್ವತ್ಪೂರ್ಣವಾಗಿ ಹಾಡಿ ನೆರೆದಿದ್ದ ಶ್ರೋತೃಗಳನ್ನು ಸೆರೆಹಿಡಿದರು. ಇವರು ಅದ್ಭುತ ಶಾರೀರವನ್ನು ದುಡಿಸಿಕೊಂಡ ಪರಿ ಅನನ್ಯ. ಇವರೇ ರಚಿಸಿದ ‘ಸಬ್ ಜಗ್ ಲಾಗೇ ಅಪಾರೇ ತುಮ್ ಬಿನ್ ಗುರುದೇವ’, ಮುಂದೆ ‘ಮಾ ಸರಸ್ವತೀ ಪ್ರಭುರೇ’ ಎಂಬ ಪ್ರಸ್ತುತಿಗಳನ್ನು ಹಾಡಿ ನೆರೆದ ರಸಿಕರ ಪ್ರಶಂಸಗೆ ಪಾತ್ರರಾದರು. ತಬಲಾದಲ್ಲಿ ಭಾರವಿ ದೇರಾಜೆಯವರು ಅತ್ಯುತ್ತಮವಾಗಿ ಸಾತ್ ನೀಡಿ ಕಲಾವಿದರನ್ನು ಪ್ರೋತ್ಸಾಹಿಸಿದರು. ಹಾರ್ಮೋನಿಯಂನಲ್ಲಿ ಶಶಿಕಿರಣ್ ರವರು ಉತ್ತಮ ಸಹಕಾರ ನೀಡಿದರು. ಸುರಮಂಡಲ್ ನಲ್ಲಿ ಸಹ ಗಾಯನದಲ್ಲಿ ದಾಮೋದರ್ ಹಾಗೂ ತಂಬೂರದಲ್ಲಿ ಕಾರ್ತಿಕ್ ಭಟ್ ಮತ್ತು ಆದಿತ್ಯ ಭಟ್ ಸಹಕರಿಸಿದರು.
ಮುಂದೆ ಸುರೇಖಾ ಭಟ್ ಇವರ ಕರ್ನಾಟಕ ಸಂಗೀತ ಕಚೇರಿ ಗಾಯನ ನಡೆಯಿತು. ವಸಂತರಾಗದ ವರ್ಣದೊಂದಿಗೆ ಕಚೇರಿಯನ್ನು ಆರಂಭಿಸಿದ ಸುರೇಖಾರವರು ಸರಸ್ವತಿ ರಾಗದ ವಾಗೀಶ್ವರಿ ಕೃತಿಯನ್ನು ಪ್ರಸ್ತುತಪಡಿಸಿದರು. ಮುಂದೆ ಕಾಂಬೋಜಿ ರಾಗದ ‘ಮರಕತವಲ್ಲಿ’ ಕೃತಿಗೆ ರಾಗಾಲಾಪನೆ, ನೆರವಲ್, ಸ್ವರ ಪ್ರಸ್ತಾರ ನೀಡಿ ರಸಿಕರ ಮನೆಗೆದ್ದರು. ಬಹುಮುಖ ಪ್ರತಿಭೆಯ ಸುರೇಖಾರವರಿಗೆ ನಿರಂತರ ಕಾರ್ಯಕ್ರಮಗಳು ದೊರಕಿದಲ್ಲಿ ಓರ್ವ ಉತ್ತಮ ಗಾಯಕಿಯಾಗಬಲ್ಲರು. ಈ ನಿಟ್ಟಿನಲ್ಲಿ ಸರಿಗಮ ಭಾರತಿಯು ಎಲ್ಲಾ ಕಲಾವಿದರನ್ನು ಗುರುತಿಸಿ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ವಯೊಲಿನ್ ನಲ್ಲಿ ಪ್ರಮಥ್ ಭಾಗವತ್ ರವರು ಕಲಾವಿದರನ್ನು ಅನುಸರಿಸಿಕೊಂಡು ನುಡಿಸಿದ್ದು ಸ್ತುತ್ಯರ್ಹ. ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಕಲಾವಿದರನ್ನು ಅನುಸರಿಸಿ ನುಡಿಸಿದರು.
ಮುಂದೆ ಪಿಳ್ಳಾರಿ ಗೀತೆಗಳನ್ನು ಶ್ರುತಿಶುದ್ಧವಾಗಿ ಹಾಡಿದ ಪುಟಾಣಿಗಳೆಲ್ಲರಿಗೂ ಉಜ್ವಲ ಭವಿಷ್ಯವಿದೆ. ವಯೊಲಿನ್ ನಲ್ಲಿ ಪ್ರಮಥ್ ಭಾಗವತ್ ಹಾಗೂ ಮೃದಂಗದಲ್ಲಿ ತಮನ್ ಎಕ್ಕಡ್ಕ ಸಹಕರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಶಿ ಹಾಗೂ ಚಲನಚಿತ್ರ ನಟಿ, ಭರತನಾಟ್ಯ ಕಲಾವಿದೆಯಾದ ಮಾನಸಿ ಸುಧೀರ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ತದನಂತರ ಕುಮಾರಿ ತನ್ಮಯಿ ಉಪ್ಪಂಗಳ ಇವರ ಹಾಡುಗಾರಿಕೆಯು ನಡೆಯಿತು. ‘ಕಮಲಾ ಮನೋಹರಿ’ ರಾಗದ ವರ್ಣದಿಂದ ಆರಂಭಗೊಂಡು, ಶ್ರೀರಂಜನಿ ರಾಗದಲ್ಲಿ ‘ಗಜವದನ ಕರುಣಾ ಸದನ’, ಕಂಟಿನಿ ಕಂಟಿನಿ ವಸಂತ ಭೈರವಿ ರಾಗದಲ್ಲಿ, ಮುಂದೆ ಕೋಕಿಲ ವರಾಳಿಯಲ್ಲಿ ‘ಸಮುಖಾನನಿಲ್ವ ಗಲ್ಗುನ’ ಹಾಡಿ, ಮುಂದೆ ಪುರಂದರದಾಸ ರಚನೆ ‘ಏನು ಧನ್ಯಳೋ ಲಕುಮಿ’ ತೋಡಿ ರಾಗಾಲಾಪನೆ ಮತ್ತು ನೆರವಲ್, ಕೊರೈಪ್ಪು ಸ್ವರ ಪ್ರಸ್ತಾರಗಳನ್ನು ವಿದ್ವತ್ಪೂರ್ಣವಾಗಿ ಹಾಡಿ ರಸಿಕರ ಮನೆಗೆದ್ದರು. ಅಪರೂಪದ ರಾಗ ಸಾರಂಗ ತರಂಗಣಿಯಲ್ಲಿ ‘ಸಮಾನರಹಿತೇ’ ಕೃತಿಯನ್ನು ಪ್ರಸ್ತುತಪಡಿಸಿದರು.
ಕಚೇರಿ ಮುಂದುವರಿಸುತ್ತಾ ತನ್ಮಯಿಯವರು ರಾಗಂ ತಾನಂ ಪಲ್ಲವಿಯನ್ನು ವಾಗಧೀಶ್ವರಿ ರಾಗದಲ್ಲಿ ಚತುರಶ್ರ ತ್ರಿಪುಟ ತಾಳ ಖಂಡ ನಡೆಯಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದರು. ವಿದ್ವಾನ್ ಆನೂರ ಅನಂತಕೃಷ್ಣ ಶರ್ಮ ಇವರು ರಚಿಸಿದ ‘ಸರಿಗಮ ಭಾರತಿ ವಾಗ್ಧೀಶ್ವರಿ ವಿದ್ಯಾ ಪ್ರದಾಯಿನಿ ನಮಸ್ತೇ’ ಈ ಪಲ್ಲವಿಯು ಸಮದಿಂದ 4 ಮಾತ್ರೆ ಬಿಟ್ಟು ಪ್ರಾರಂಭವಾಯಿತು ಹಾಗೂ ಇದರ ಅರುಧಿಯು 12 ಮಾತ್ರೆಯನ್ನು ಒಳಗೊಂಡಿತ್ತು. ಇದರಲ್ಲಿ ರಾಗ ಮಾಲಿಕೆಯಲ್ಲಿ ಕಲ್ಯಾಣಿ, ಶ್ರೀರಂಜಿನಿ, ಕಾಂತಾಮಣಿ, ಕಾನಡ ರಾಗಗಳಲ್ಲಿ ಪ್ರಸ್ತುತಪಡಿಸಿದ್ದಂತೂ ಶ್ಲಾಘನೀಯ. ಕೊನೆಗೆ ಷಣ್ಮುಖಪ್ರಿಯ ರಾಗದಲ್ಲಿ ಶ್ಲೋಕ ಹಾಡಿ, ‘ದಯಾಮಯೀ ಶಾರದೆ’ ಭಜನ್ ನನ್ನು ಪ್ರಸ್ತುತಪಡಿಸಿದರು. ವಯೊಲಿನ್ ನಲ್ಲಿ ಮೈಸೂರಿನ ಸಿ.ವಿ. ಶ್ರುತಿ ಇವರು ಕಲಾವಿದೆಯ ಮನೋಧರ್ಮವನ್ನು ಅರಿತು ನುಡಿಸಿದರು. ಮೃದಂಗದಲ್ಲಿ ವಿದ್ವಾನ್ ಸುನಾದಕೃಷ್ಣ ಇವರು ಪಲ್ಲವಿಯ ಸಾಹಿತ್ಯಕ್ಕನುಗುಣವಾಗಿ ಪೋಷಣೆ ನೀಡಿದರು. ತನಿ ಆವರ್ತನವನ್ನೂ ವಿವಿಧ ನಡೆ ಬೇಧಗಳಿಂದ ಕೂಡಿ ಪ್ರಸ್ತುತಪಡಿಸಿದರು.
ಅಪರಾಹ್ನ ಸರಿಗಮ ಭಾರತಿಯ ವಿದ್ಯಾರ್ಥಿಗಳಾದ ಮನ್ವಿ ಭಟ್, ಅಭಿನವ್ ಭಟ್, ತನ್ವಿ ಶಾಸ್ತ್ರಿ ಮತ್ತು ಕ್ಷಿತಿಜ್ ಹಾಡಿದರು. ವಯೊಲಿನ್ ನಲ್ಲಿ ಅನುಶ್ರೀ ಮಳಿ ಹಾಗೂ ಶ್ರೀರಾಗ್ ಪಿ. ರಾವ್ ಉಡುಪಿ, ಮೃದಂಗದಲ್ಲಿ ತಮನ್ ಎಕ್ಕಡ್ಕ ಸಹಕರಿಸಿದರು. ಮುಂದೆ ಎಲ್ಲಾ ಅತಿಥಿ ಕಲಾವಿದರಿಂದ ಪಂಚರತ್ನಗೋಷ್ಠಿ ಗಾಯನ ಅಚ್ಚುಕಟ್ಟಾಗಿ ಮೂಡಿಬಂತು.
ಸಂಜೆಯ ಪ್ರಧಾನ ಕಚೇರಿಯನ್ನು ಮೈಸೂರು ಎ. ಚಂದನ್ ಕುಮಾರ್ ವಿದ್ವತ್ಪೂರ್ಣವಾಗಿ ನಡೆಸಿಕೊಟ್ಟರು. ಕರುಣಿಂಪ ಶಹನ ರಾಗದ ವರ್ಣದೊಂದಿಗೆ ಆರಂಭಗೊಂಡ ಕಛೇರಿ ಮುಂದೆ ಮಹಾಗಣಪತಿಂ ನಾಟ ರಾಗದಲ್ಲಿ ತದನಂತರ ಚಿಂತಾಮಣಿ ರಾಗದ ‘ದೇವೀಬ್ರೋವ ಸಮಯಮಿದೇ’ ಕೃತಿಯು ಲಾಲಿತ್ಯಪೂರ್ಣವಾಗಿ ಮೂಡಿ ಬಂತು. ಪ್ರಧಾನ ಆಯ್ಕೆಯಾಗಿ ಸುರುಟಿ ರಾಗದ ‘ಶ್ರೀ ವೆಂಕಟಗಿರೀಶಂ ಆಲೋಕಯೇ’ ಆದಿತಾಳದಲ್ಲಿ ರಾಗಭಾವಕ್ಕನುಗುಣವಾಗಿ ನುಡಿಸಿದ ಪರಿ ಅನನ್ಯ. ವಯೊಲಿನ್ ನಲ್ಲಿ ವಿದುಷಿ ಚಾರುಲತಾ ರಾಮಾನುಜಂ ಇವರು ಚಂದನ್ ಕುಮಾರ್ ಇವರ ಮನೋಧರ್ಮವನ್ನರಿತು ನುಡಿಸಿದ ಪರಿ ಅನನ್ಯ. ತನಿ ಆವರ್ತನದಲ್ಲಿ ಮೃದಂಗ ವಿದ್ವಾನ್ ಅರ್ಜುನ್ ಕುಮಾರ್ ನಾನಾ ವಿಧ ಕಣಕ್ಕಗಳನ್ನೊಳಗಂಡ ಅಭಿಪ್ರಾಯಗಳನ್ನು ನುಡಿಸಿ ರಸಿಕರ ಪ್ರಶಂಸೆಗೆ ಪಾತ್ರರಾದರು. ಇದನ್ನನುಸರಿಸಿದ ಸುನಾದ ಕೃಷ್ಣ ಅಷ್ಟೇ ಸಮರ್ಥವಾಗಿ ನುಡಿಸಿದರು. ಕಚೇರಿ ಮುಂದುವರಿದು ಭೈರವಿ ರಾಗ ಹಾಗೂ ತಾನವನ್ನು ಪ್ರಸ್ತುತಪಡಿಸಿದ ಕಲಾವಿದರು ಪಲ್ಲವಿಯನ್ನು ಖಂಡ ಜಾತಿ ತ್ರಿಪುಟ ತಾಳದಲ್ಲಿ ನಿಬಧ್ಧಗೊಳಿಸಿದ್ದರು. ಪಲ್ಲವಿಯ ಸಾಹಿತ್ಯವನ್ನು ವಿದುಷಿ ಚಾರುಲತಾ ರಾಮಾನುಜಂ ರಚಿಸಿದ್ದರು. ‘ರಾಜ ಮಾತಂಗಿ ಭೈರವಿ ಉಮಾಶಂಕರೀ… ಉದಯಶಂಕರ ಮನೋಹರಿ’ ಈ ಪಲ್ಲವಿಯು ಕಲಾರಸಿಕರ ಮನತಟ್ಟಿತು. ಮುಂದೆ ದರ್ಬಾರಿ ಕಾನಡ ರಾಗದಲ್ಲಿ ಗೋವರ್ಧನ ಗಿರಿಧಾರಿ ಪ್ರಸ್ತುತಿಯಲ್ಲಿ ಚಂದನ್ ಕುಮಾರ್ ಇವರು ಆಪ್ಯಾಯಮಾನವಾಗಿ ರಸಿಕರನ್ನು ದೈವಿಕತೆಗೆ ಕೊಂಡೊಯ್ದರು. ಸುಂದರವಾದ ಪೂರ್ವಿ ರಾಗದ ತಿಲ್ಲಾನದೊಂದಿಗೆ ಕಛೇರಿಯು ಸಂಪನ್ನಗೊಂಡಿತು.
ಮುಂದೆ ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಅದಿತಿ ಲಕ್ಷ್ಮಿ ಭಟ್ ಭರತನಾಟ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಸಿಕೊಟ್ಟರು. ಭಾವಾಭಿನಯ, ಉತ್ತಮವಾದ ಅಂಗಶುಧ್ಧಿ ಅರೆಮಂಡಿ ಎಲ್ಲವನ್ನೂ ಮೈಗೂಡಿಸಿಕೊಂಡಿರುವವಳು ಅದಿತಿ ಲಕ್ಷ್ಮಿ ಭಟ್. ದೇವೀ ಕೃತಿಗಳನ್ನು ಆಯ್ದುಕೊಂಡು ಪ್ರಸ್ತುತ ಪಡಿಸಿದ ಪರಿ ಅನನ್ಯ. ಈಕೆಗೆ ಉಜ್ವಲ ಭವಿಷ್ಯವಿದೆ. ಮುಂದೆ ಶ್ರೀ ಮುಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ಪ್ರೀತಿಕಲಾ ದೀಪಕ್ ಇವರ ನಿರ್ದೇಶನದಲ್ಲಿ ‘ತ್ರಿಶಕ್ತಿ’ ನೃತ್ಯ ಪ್ರಸ್ತುತಿಯನ್ನು ಇವರ ಶಿಷ್ಯಂದಿರು ನೀಡಿ ಸರಿಗಮ ಭಾರತಿಯ ವೇದಿಕೆಯನ್ನು ಪಾವನಗೊಳಿಸಿದರು. ಹಿಮ್ಮೇಳದಲ್ಲಿ ದೀಪಕ್ ಕುಮಾರ್, ನಟ್ಟುವಾಂಗ ಹಾಗೂ ಹಾಡುಗಾರಿಕೆಯಲ್ಲಿ ಪ್ರೀತಿಕಲಾ, ಮೃದಂಗದಲ್ಲಿ ಬಾಲಚಂದ್ರ ಭಾಗವತ್, ಕೊಳಲಿನಲ್ಲಿ ಕುಮಾರಿ ಮೇಧಾ ಉಡುಪ ಉತ್ತಮವಾಗಿ ಸಹಕರಿಸಿದರು. ಇಡೀ ದಿವಸದ ಈ ಸಂಗೀತೋತ್ಸವವು ಅಚ್ಚುಕಟ್ಟಾಗಿ ಹಾಗೂ ಅತ್ಯುತ್ತಮವಾಗಿ ಮೂಡಿಬಂದದ್ದು ಶ್ಲಾಘನೀಯ.
– ಜನರಂಜನಿ