ಮಂಗಳೂರು : ವಿದ್ಯಾ ಪ್ರಕಾಶನ ಮಂಗಳೂರು ಹಾಗೂ ‘ಥಂಡರ್ ಕಿಡ್ಸ್’ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಗುಬ್ಬಿದ ಗೂಡು’ ಎಂಬ ಹೆಸರಿನ ಪುಟಾಣಿ ಮಕ್ಕಳ ವಾದ್ಯ ಗೋಷ್ಠಿ ಹಾಗೂ ಗಾಯನ ತಂಡದ ಉದ್ಘಾಟನೆಯು ತಾ.01-05-2023ರಂದು ಮಂಗಳೂರು ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನೆರವೇರಿತು. ಮಂಗಳೂರಿನ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಇವರು ‘ಗುಬ್ಬಿದ ಗೂಡು’ ಮತ್ತು ಶ್ರೀ ರಘು ಇಡ್ಕಿದು ಇವರ ಕನ್ನಡ-ತುಳು ಭಾವಗೀತೆಗಳನ್ನು ಬಿಡುಗಡೆ ಮಾಡಿದರು. ಈ ಭಾವಗೀತೆಗಳನ್ನು ಶ್ರೀಮತಿ ಮಾಲಿನಿ ಕೇಶವ ಪ್ರಸಾದ್ ಇವರು ಮಧುರವಾಗಿ ಹಾಡಿದರು. ವಿನಮ್ರ ಇಡ್ಕಿದು ಹಾಡಿರುವ ಭಾವಗೀತೆಗಳ ಬಿಡುಗಡೆಯನ್ನು ಮಂಗಳೂರಿನ ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಯ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಆರ್ ಭಟ್ ನೆರವೇರಿಸಿದರು. ‘ಗುಬ್ಬಿದ ಗೂಡು’ ಮತ್ತು ಭಾವಗೀತೆಗಳ ಬಿಡುಗಡೆ ಮಾಡಿದ ಶ್ರೀ ರಂಗನಾಥ್ ಭಟ್ ಮಾತನಾಡುತ್ತಾ “ಸಂಗೀತ ಸಂಯೋಜನೆ ಮಾಡಿ ಮಕ್ಕಳಿಗೆ ಪ್ರಾಸ ಪದ್ಯಗಳು ಹೊಸ ರೀತಿಯಲ್ಲಿ ಮನಮುಟ್ಟುವಂತೆ ಮಾಡುವ ‘ಗುಬ್ಬಿದ ಗೂಡು’ ಕಾರ್ಯಕ್ರಮ ಶ್ಲಾಘನೀಯ. ಮನುಷ್ಯನ ಭಾವನೆಗಳನ್ನು ಅರ್ಥೈಸುವ ಭಾವಗೀತೆಗಳು ಮನುಷ್ಯನ ಆಳ ಮತ್ತು ಅಂತರಾಳವನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ಈ ಕಾರಣಕ್ಕಾಗಿ ಭಾವಗೀತೆಗಳು ಎಲ್ಲರಿಗೂ ಇಷ್ಟವಾಗುತ್ತವೆ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಕೃಷ್ಣಮೂರ್ತಿಯವರು ಮಾತನಾಡಿ “ಭಾವ ಗೀತೆಗಳಂತಹ ಸಾಹಿತ್ಯ ರಾಗ ಸಂಯೋಜನೆಯೊಂದಿಗೆ ಹೊರಬಂದಾಗ ಮನಸ್ಸಿಗೆ ಆಹ್ಲಾದ ನೀಡುತ್ತದೆ. ಭಾವಗೀತೆಗಳಂತಹ ಸಾಹಿತ್ಯಕ್ಕೆ ಸಂಗೀತ ಪೂರಕವಾಗಿದೆ.”ಎಂದರು. ಬೆಂಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ ಶ್ರೀಮತಿ ಯು.ವಿಜಯಲಕ್ಷ್ಮಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಥಂಡರ್ ಕಿಡ್ಸ್ ಮಕ್ಕಳಿಂದ ನಡೆದ ವಾದ್ಯ ಸಂಗೀತ ಮತ್ತು ಭಾವಗೀತೆಗಳ ಗಾಯನ ಎಲ್ಲರ ಮನಸ್ಸಿಗೆ ಮುದ ನೀಡಿತು. ಮಕ್ಕಳ ಪ್ರತಿಭೆಯನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ‘ತುಳುವೆರೆ ಚಾವಡಿ’ಯ ಸಕ್ರಿಯ ಸದಸ್ಯ ಹಾಗೂ ‘ಜೋಕುಲೆ ಉಜ್ಜಾಲ್’ ಮಕ್ಕಳ ಕವನ ಸಂಕಲನದ ಸಂಪಾದಕರಾದ ಸತೀಶ್ ಅಗಲ್ಪರಿಗೆ ಮತ್ತು ಥಂಡರ್ ಕಿಡ್ಸ್ ನ ಸಂಗೀತ ನಿರ್ದೇಶಕರಾದ ಶ್ರೀನಿವಾಸ ರಾವ್ ಇವರಿಗೆ ವೇದಿಕೆಯಲ್ಲಿ ಗೌರವಾರ್ಪಣೆ ನಡೆಯಿತು. ಭಾವಗೀತೆಗಳಿಗೆ ಸುಂದರವಾದ ದೃಶ್ಯ ಸಂಯೋಜನೆ ಮತ್ತು ಚಿತ್ರೀಕರಣದ ನಿರ್ದೇಶನವು ‘ವಿದ್ಯಾ ಪ್ರಕಾಶನ’ದ ಶ್ರೀಮತಿ ವಿದ್ಯಾ ಯು. ಇಡ್ಕಿದು ಇವರ ನೇತೃತ್ವದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ರಘು ಇಡ್ಕಿದು ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು. ‘ಗುಬ್ಬಿದ ಗೂಡು’ ಮತ್ತು ‘ಭಾವಯಾನ’ ಕಾರ್ಯಕ್ರಮವನ್ನು ಸಾನ್ವಿ ಗುರುಪುರ ನಿರೂಪಿಸಿದರು. ಮಕ್ಕಳ ಗೀತಾ ಗಾಯವು ಜನ ಮೆಚ್ಚುಗೆ ಪಡೆಯಿತು.