ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಾಟಾಗಿದ್ದ ವಿವಿಧ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಶಾಲೆಗಳನ್ನು ಉಳಿಸಬೇಕು ಮತ್ತು ಕನ್ನಡ ಅಕ್ಷರ ಭಾಷೆಯಾಗಬೇಕು ಎನ್ನುವ ಎರಡು ಕನಸುಗಳನ್ನು ಹೊತ್ತು ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬಂದೆ. ಆದರೆ ಎರಡೂ ಕನಸೇ ಆಗಿ ಬಿಡುವ ಆತಂಕ ಕಾಡುತ್ತಿದೆ. ಆದರೆ ಕನ್ನಡ ಮತ್ತು ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ದೊರಕಿಸಲು ಕನ್ನಡ ಸಾಹಿತ್ಯ ಪರಿಷತ್ತು ಬದ್ದವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಡಾ. ಕೆ. ಶಿವರಾಮ ಕಾರಂತ ಮತ್ತು ಸಾಲಿ ರಾಮಚಂದ್ರ ರಾಯರ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು. ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಸದಾನಂದ ಸುವರ್ಣ ಇವರು ಶಿವರಾಮ ಕಾರಂತರ ಕುರಿತು ರೂಪಿಸಿದ್ದ ಸಾಕ್ಷ್ಯ ಚಿತ್ರಕ್ಕೆ ಪ್ರಾಯೋಜಕರು ದೊರಕದೆ ತಾವು ವೈಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ ಪ್ರಸಂಗವನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡಿಗರಲ್ಲಿನ ಅಭಿಮಾನದ ಕೊರತೆ ದೊಡ್ಡ ತೊಡಕಾಗಿದೆ ಎಂದರು. ವರಕವಿ ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಧಾರವಾಡದಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಜನ ಸೇರಿದ್ದರ ಕುರಿತು ಬಂದ ಪ್ರಶ್ನೆಗೆ ‘ಇಲ್ಲಿ ಲಕ್ಷ ಜನರಿಲ್ಲ ಲಕ್ಷ್ಯ ಕೊಡೋ ಜನರಿದ್ದಾರೆ’ ಎಂದು ಪ್ರಸಂಗ ನೆನಪು ಮಾಡಿಕೊಂಡು ಇಂದು ಕನ್ನಡಕ್ಕೆ ಲಕ್ಷ್ಯ ಕೊಡುವವರು ಬೇಕಾಗಿದೆ. ಅವರನ್ನು ಗುರುತಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಂದೆಯೂ ಮಾಡಲಿದೆ. ದತ್ತಿ ಪುರಸ್ಕಾರಗಳು ಅದರ ಒಂದು ವಿಧಾನ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಿಸಿದ ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಆರ್. ಗುರುಪ್ರಸಾದ್ ಇವರು ಕನ್ನಡವನ್ನು ಉಳಿಸುವಲ್ಲಿ ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸವನ್ನು ಮುಕ್ತಕಂಠದಿಂದ ಪ್ರಶಂಸಿಸಿ ಸಾಹಿತ್ಯಕ್ಕೆ ಬಹುಮುಖಿ ನೆಲೆ ಇದೆ. ಅದು ಕಲಿಕೆಯಾಗಿ, ಚಿಂತನೆಯಾಗಿ, ಅನುಭವ ಕಥನವಾಗಿ ನಮ್ಮ ಅರಿವನ್ನು ವಿಸ್ತರಿಸಲಿದೆ. ಈ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಬಹಳ ಮುಖ್ಯವಾದ ಕಾರ್ಯ ಎಂದು ಹೇಳಿದರು. ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಇವರು ಕನ್ನಡದ ದುಸ್ಥಿತಿಗೆ ನಾವೇ ಕಾರಣಕರ್ತರು. ಭಾಷಾಭಿಮಾನವನ್ನು ಬೆಳೆಸುವ ಮುಖ್ಯ ಕಾರ್ಯಕ್ಕೆ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಕೈಗೂಡಿಸಬೇಕು ಎಂದು ಅಭಿಪ್ರಾಯಪಟ್ಟರು. ದತ್ತಿ ದಾನಿಗಳ ಪರವಾಗಿ ಎ.ಆರ್. ನಾರಾಯಣಘಟ್ಟ ಮತ್ತು ಟಿ.ಎಸ್. ಶೈಲಜ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರವನ್ನು ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರಾದ ಡಾ. ಎಚ್.ಎನ್. ಸುರೇಶ್ ಇವರಿಗೂ, ಪಂಕಜಶ್ರೀ ಪುರಸ್ಕಾರವನ್ನು ಮುಂಬಯಿಯಲ್ಲಿ ನೆಲೆಸಿರುವ ಹಿರಿಯ ಕಥೆಗಾರ್ತಿ ಮಿತ್ರಾ ವೆಂಕಟ್ರಾಜು ಇವರಿಗೂ ಹಾಗೂ ಟಿ. ಗಿರಿಜಾ ಸಾಹಿತ್ಯ ದತ್ತಿಯನ್ನು ಹಿರಿಯ ವಿಜ್ಞಾನ ಬರಹಗಾರರಾದ ಡಾ. ಬಿ.ಎಸ್. ಶೈಲಜಾ ಇವರಿಗೂ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ಇನ್ನೊಬ್ಬ ಗೌರವ ಕಾರ್ಯದರ್ಶಿಗಳಾದ ಎಚ್.ಬಿ. ಮದನಗೌಡ ಸ್ವಾಗತವನ್ನು ಮತ್ತು ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ್ ಕುಮಾರ್ ವಂದನಾರ್ಪಣೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.