ಪುತ್ತೂರು : ಪುತ್ತೂರಿನ ಪರ್ಲಡ್ಕದ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತ ಬಾಲವನ ಸಮಿತಿ ಪುತ್ತೂರು ಮತ್ತು ಉಪವಿಭಾಗಾಧಿಕಾರಿ ಕಚೇರಿ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2025ರಂದು ಡಾ. ಶಿವರಾಮ ಕಾರಂತರ 124ನೇ ಜನ್ಮದಿನೋತ್ಸವ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಾಲವನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಬಿ.ಎ. ವಿವೇಕ ರೈ “ಡಾ. ಶಿವರಾಮ ಕಾರಂತರ ಬಾಲವನ ನಿರಂತರ ಚಟುವಟಿಕೆಯ ಕೇಂದ್ರವಾಗಬೇಕು. ಬಾಲವನಕ್ಕೆ ಮೇಲ್ವಿಚಾರಕರನ್ನು ನೇಮಿಸಿ ಪ್ರತಿ ವಾರಾಂತ್ಯದಲ್ಲಿ ಮಕ್ಕಳ ನಾಟಕ, ಹಾಡು, ಕುಣಿತ, ಪೇಂಟಿಂಗ್, ವೈಚಾರಿಕ ವಿಚಾರಸಂಕಿರಣ ನಡೆಸಬೇಕು. ವರ್ಷಕ್ಕೆ ಒಂದೂ ಬಾರಿಯಾದರೂ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡು 2 ದಿನಗಳ ಕಾರಂತ ಉತ್ಸವ ನಡೆಸಬೇಕು. ಕಾರಂತರ ಆಶಯಗಳಿಗೆ ಮರುಜೀವ ಕೊಡಬೇಕು. ಹಾಗಾದರೆ ಮಾತ್ರ ಬಾಲವನ ಪುತ್ತೂರಿಗೆ ಆಕರ್ಷಣೆಯಾಗುತ್ತದೆ” ಎಂದು ಹೇಳಿದರು.
ಕಾರಂತ ಸ್ಮರಣೆ ಮಾಡಿದ ಶಿವರಾಮ ಕಾರಂತರ ಸೋದರಳಿಯ, ಸಾಹಿತಿ ಶಾಂತಾರಾಮ ರಾವ್ ಮಾತನಾಡಿ “ಕಾರಂತರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಸಮಯ ಪಾಲನೆ ಮಾಡುತ್ತಿದ್ದ ಅವರಲ್ಲಿ ಬಡವ-ಬಲ್ಲಿದರೆಂಬ ಭೇದ ಮಾಡದ, ಯಾವುದಕ್ಕೂ ಬಗ್ಗದ ವ್ಯಕ್ತಿತ್ವ ಇತ್ತು. ಅವರ ಚಳವಳಿ ಶುಷ್ಕವಾಗಿಸಲು ಬಿಡದೆ ಮುಂದುವರಿಸಿಕೊಂಡು ಹೋಗಬೇಕಾಗಿದೆ” ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಬಾಲವನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಮಿತಿ ರಚಿಸಿ ತೀರ್ಮಾಣ ಕೈಗೊಳ್ಳಲಾಗುವುದು. ಕೊಟ್ಟಿಗೆಹಾರದಲ್ಲಿರುವ ಪೂರ್ಣಚಂದ್ರ ತೇಜಸ್ವಿಯವರ, ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆಯ ಮಾದರಿಯಲ್ಲಿ ಪ್ರಕೃತಿಗೆ ತೊಂದರೆಯಾಗದ ರೀತಿಯಲ್ಲಿ ಬಾಲವನವನ್ನು ಅಭಿವೃದ್ಧಿಪಡಿಸಲಾಗುವುದು” ಎಂದರು.
ಶಿವರಾಮ ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಭಾಗವಹಿಸಿದ್ದರು. ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಯು ಕಾರಂತರ ಪುತ್ಥಳಿಯ ಫಲಕ, ಸ್ಮರಣಿಕೆ, ರೂ.25,000/- ನಗದು ಒಳಗೊಂಡಿದ್ದು, 2024ರ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಬಿ.ಎ. ವಿವೇಕ ರೈ ಮತ್ತು 2025ರ ಸಾಲಿನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶಿಕ್ಷಣ ತಜ್ಞ ಎನ್. ಸುಕುಮಾರ ಗೌಡ ಇವರಿಗೆ ಪ್ರದಾನ ಮಾಡಲಾಯಿತು.
ವಿವೇಕ ರೈ ಕುರಿತು ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ, ಸುಕುಮಾರ ಗೌಡ ಇವರ ಬಗ್ಗೆ ಪುತ್ತೂರಿನ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕ್ಷೇವಿಯರ್ ಡಿಸೋಜ ಇವರು ಅಭಿನಂದನಾ ನುಡಿಗಳನ್ನಾಡಿದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅರಿಯಡ್ಕ ವಂದಿಸಿದರು, ಶಿಕ್ಷಕ ರಮೇಶ್ ಉಳಯ ನಿರೂಪಿಸಿದರು.