ಉಡುಪಿ : ಖ್ಯಾತ ಹಾಸ್ಯ ನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟೆ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ 13 ಅಕ್ಟೋಬರ್ 2025ರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಶೈನ್ ಶೆಟ್ಟಿ ಅಭಿನಯದ ಹೊಸ ಚಿತ್ರದಲ್ಲಿ ಕಳೆದ ಎರಡು ದಿನಗಳಿಂದ ಉಡುಪಿಯಲ್ಲಿ ರಾಜು ತಾಳಿಕೋಟೆ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ನಿನ್ನೆ ರಾತ್ರಿ 12 ಗಂಟೆ ಹೊತ್ತಿಗೆ ರಾಜು ತಾಳಿಕೋಟೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಶೈನ್ ಶೆಟ್ಟಿ ಅವರ ತಂಡ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಂದು ಸಂಜೆ 5.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ರಾಜು ತಾಳಿಕೋಟೆ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಿಗಿ ಗ್ರಾಮದವರು. ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟೆ. ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದರು. ಸದ್ಯ ಅವರು ಧಾರವಾಡ ರಂಗಾಯಣ ನಿರ್ದೇಶಕರೂ ಆಗಿದ್ದರು.
ಖಾಸ್ಗತೇಶ್ವರ ನಾಟ್ಯ ಸಂಘದ ಸಂಚಾಲಕರಾಗಿ ರಾಜ್ಯಾದ್ಯಂತ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟಾಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ ‘ಕಲಿಯುಗದ ಕುಡುಕ’ ನಾಟಕದ ಮುಖಾಂತರ ರಾಜ್ಯಾದ್ಯಂತ ಅವರು ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು.
ಇವರ ತಂದೆ ತಾಯಿಗಳು ಖಾಸ್ಗತೇಶ್ವರ ನಾಟ್ಯ ಸಂಘ ಸ್ಥಾಪಿಸಿ ರಾಜ್ಯಾದ್ಯಂತ ಪ್ರದರ್ಶನಕ್ಕೆ ಹೋಗುತ್ತಿದ್ದರಿಂದ ನಾಲ್ಕನೇ ತರಗತಿಯಲ್ಲೇ ಇವರು ಶಾಲೆಗೆ ವಿದಾಯ ಹೇಳುತ್ತಾರೆ. ತಂದೆಯ ನಂತರ ಇವರು ಮತ್ತು ಇವರ ಅಣ್ಣ ಸೇರಿ ನಾಟಕ ಕಂಪನಿ ನಡೆಸುತ್ತಿದ್ದರು. ಇಬ್ಬರು ಹೆಂಡತಿಯರು ಹಾಗೂ ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಇವರಿಗೆ ‘ಹಾಸ್ಯ ರತ್ನಾಕರ’, ‘ಹಾಸ್ಯ ಸಾಮ್ರಾಟ’, ‘ಕಾಮಿಡಿ ಕಿಂಗ್’, ‘ಕೆಸೇಟ್ ಕಿಂಗ್’, ‘ಕನ್ನಡದ ಸೆಂದಿಲ್’ ಸೇರಿ ಹಲವು ಬಿರುದುಗಳಿದ್ದವು. 2011ರಲ್ಲಿ ಫೀಲ್ಮ್ಫೇರ್ ಅವಾರ್ಡ್, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯ ಪಾಪ್ಯುಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು.