ಬೆಂಗಳೂರು : ಕನ್ನಡದ ಬಹು ಮುಖ್ಯ ರಂಗತಂಡಗಳಲ್ಲಿ ಒಂದಾದ ಧಾರವಾಡದ ‘ಆಟ-ಮಾಟ’ವು ರಾಘವೇಂದ್ರ ಪಾಟೀಲ್ ರಚನೆಯ ಮಹಾದೇವ ಹಡಪದ ಪರಿಕಲ್ಪನೆಯ ‘ಮತ್ತೊಬ್ಬ ಮಾಯಿ’ ನಾಟಕ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಜಂಗಮ ಕಲೆಕ್ಟಿವ್ ನಲ್ಲಿ ಮೇ 6ನೇ ತಾರೀಖು ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.
ಮತ್ತೊಬ್ಬ ಮಾಯಿ:
ಸಾಹಿತ್ಯ ತತ್ವ ಮತ್ತು ಜೀವನ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್ ರೂಮಿನಲ್ಲಿ ಕುಳಿತು ಒಬ್ಬರನ್ನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತಾರೆ ಹಾಗೂ ಪ್ರೀತಿಸುತ್ತಾ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಇಂಗ್ಲೀಷ್ ಅಧ್ಯಾಪಕನೂ ಕತೆಗಾರನೂ ಆದ ಮೂರ್ತಿ ಒಬ್ಬನಾದರೆ, ಕನ್ನಡ ಅಧ್ಯಾಪಕನೂ ತಾನು ಹೇಳಿಕೊಳ್ಳುತ್ತಿರುವುದು ಕತೆಯಲ್ಲ; ಜೀವನ ಎಂದು ವಾದಿಸುವವನೂ ಆದ ಪಾಂಡುರಂಗ ಡಿಗಸ್ಕರ್ ಇನ್ನೊಬ್ಬ. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಭಾಷೆ ಜವಾರಿಯದ್ದಾಗಿದೆ. ಹಿಂದುಸ್ಥಾನಿ ಭಾಷೆಯಲ್ಲಿ ದಾಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯೊಂದಿದೆ ಆ ಮಾದರಿಯಲ್ಲಿ ಇಲ್ಲಿನ ಎರಡು ಪಾತ್ರಗಳು ನಿರೂಪಣಾ ಸರಣಿಯನ್ನು ರಂಗದ ಮೇಲೆ ಸೃಷ್ಟಿಸುತ್ತಾರೆ. ಜೀವನದ ಸಂಗತಿಯೊಂದನ್ನು ಮನಮುಟ್ಟುವಂತೆ ಭಾಷೆಯ ಮೂಲಕ ವಿದ್ಯಾಗಿನ ದುಃಖ ಮತ್ತು ಆನಂದದ ಅನುಭವಗಳನ್ನು ಕಟ್ಟಿಕೊಡುವಲ್ಲಿ ಡಿಗಸ್ಕರ್ ಪ್ರಯತ್ನಪಡುತ್ತಾರೆ.
ಲಕ್ಷ್ಮಿ ಎಂಬ ಹುಡುಗಿ ಕುಣಕಾಲ ಹುಡುಗಿಯಾಗಿ ಮಾವಿನಗಿಡ ವಶಪಡಿಸಿಕೊಳ್ಳುವ ಝಾನ್ಸಿರಾಣಿಯಾಗಿ, ಖೋಖೋ ಆಟದ ರೂವಾರಿಯಾಗಿ ಮಿಂಚಿನಂಥ ಸಂಚಾರದ ಶಕ್ತಿಯುಳ್ಳ ಹುಡುಗಿ ಕೊನೆಕೊನೆಗೆ ತೀರ ಒಬ್ಬಂಟಿತನವನ್ನು ಆಶ್ರಯಿಸಿ ಮಾಮಾಚಾರದ ಸಂಗತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ವಿಚಿತ್ರವಾದ ಯಾತನೆಯನ್ನು ಅನುಭವಿಸುತ್ತಾಳೆ. ಡಿಗಸ್ಕರ್ ನಡೆದ ಸಂಗತಿಯನ್ನು ಹೇಳುವಾಗ ಮೂರ್ತಿ ತನ್ನ ಯಾವತ್ತಿನ ಕಥನದ ಫಾರ್ಮುಲಾಕ್ಕೆ ಹೊಂದಿಸಿ ನೋಡುವುದು, ಡಿಗಸ್ಕರ್ ತಮ್ಮ ಜವಾರಿ ಭಾಷೆಯಲ್ಲಿ ವಿವರಗಳನ್ನು ಕಟ್ಟಿಕೊಡುತ್ತಾ ಈ ಎರಡು ಪಾತ್ರಗಳು ಭಿನ್ನ ಎನಿಸಿದರೂ ಕಡೆ ಗಳಿಗೆಯಲ್ಲಿ ಒಂದೇಯಾಗಿ ಅಲ್ಲಿನ ಒಣಗಿದ ಅಂಗಾಲುಗಳನ್ನು ಮೇಲೆ ಮಾಡಿಕೊಂಡು ಟಿಟ್ಟಿಭಾಸನದ ಭಂಗಿಯಲ್ಲಿ ತಲೆಕೆಳಗಾಗುವ ಸ್ಥಿತಿ ಆರ್ದ್ರ ಸನ್ನಿವೇಶವೊಂದನ್ನು ಕಟ್ಟಿಕೊಡುತ್ತದೆ. ಈ ನಾಟಕದ ಎರಡು ಪಾತ್ರಗಳು ದಾಸ್ತಾಂಗೋಯಿ ಎಂಬ ಹಿಂದುಸ್ಥಾನಿ ಭಾಷೆಯಲ್ಲಿ ಕತೆ ಹೇಳುವ ಕಲಾಪ್ರಕಾರದಲ್ಲಿ ಒಟ್ಟು ರಂಗಕೃತಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವ ಮಾದರಿ ಭಿನ್ನವಾಗಿದೆ. ನಮ್ಮ ಜನಪದರು ಅನೇಕ ಮಾದರಿಯಲ್ಲಿ ಕತೆ ಹೇಳುವ ಕ್ರಮಗಳನ್ನು ಹುಟ್ಟುಹಾಕಿದ್ದಾರೆ. ಅದೆಲ್ಲದಕ್ಕಿಂತ ಭಿನ್ನವಾದ ಮಾದರಿ ದಸ್ತಾಂಗೋಯಿಯದ್ದಾಗಿದೆ. ಅಲ್ಲಿ ವಾಚಿಕಾಭಿನಯಕ್ಕೆ ವಿಷೇಶ ಒತ್ತು ಇರುವುದರಿಂದ ‘ಮತ್ತೊಬ್ಬ ಮಾಯಿ’ ನಾಟಕದ ಪಾತ್ರಗಳು ಆ ಮಾದರಿಯ ಕಥನಕೌಶಲವನ್ನು ನೆನಪಿಸುತ್ತವೆ.
ಜಂಗಮ ಕಲೆಕ್ಟಿವ್ – ಜಂಗಮ ಕಲೆಕ್ಟಿವ್ ಒಂದು ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನಲೆಯ ಕಲಾವಿದರ ಸಮೂಹ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ. ಮತ್ತದರ ವಿಸ್ತರಣೆವೆಂಬಂತೆ ಶಿಕ್ಷಣ, ಸಾಹಿತ್ಯ, ಪ್ರಕಾಶನ, ಸಿನೆಮಾ, ಸಾಮಾಜಿಕ ಹೋರಾಟಗಳಂತಹ ಸೃಜನಶೀಲ ಪ್ರಕ್ರಿಯೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕರ್ನಾಟಕವನ್ನು ತನ್ನ ಮುಖ್ಯ ಪ್ರಯೋಗ ಭೂಮಿಯಾಗಿಸಿಕೊಂಡು ಜೊತೆಗೆ, ದೇಶ ವಿದೇಶಗಳಲ್ಲಿ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕೈ ಜೋಡಿಸುತ್ತ ಆ ಮೂಲಕ ಜೀವತತ್ವ ಪ್ರತಿಪಾದಿಸುವ ರಾಜಕೀಯ ಪ್ರಶ್ನೆಯನ್ನು ರೂಪಿಸುತ್ತ ನಾವಿರುವ ನೆಲದ ಮತ್ತು ಸುತ್ತಲಿನ ಜನ ಸಮುದಾಯಗಳ ಬದುಕಿನ ಜೊತೆಗೆ ಬೆರೆತು ಹೋಗುವುದು ಜಂಗಮದ ಮುಖ್ಯ ತುಡಿತ.
ಸೀಮಿತ ಸೀಟುಗಳು ಇರುವುದರಿಂದ ನಿಮ್ಮ ಜಾಗವನ್ನು ಮೊದಲೇ ಕಾಯ್ದಿರಿಸಿಕೊಳ್ಳಿ
Contact: 90082 70313, 97432 89572