ಕಾರ್ಕಳ : ಕಾರ್ಕಳದ ಸಾಹಿತ್ಯ ಸಂಘ ಏರ್ಪಡಿಸಿದ ಎಸ್. ಎಲ್. ಭೈರಪ್ಪ ಮಾಸದ ನೆನಪು ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2025 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವ್ಯಕ್ತಿತ್ವ ವಿಕಸನದ ರಾಷ್ಟ್ರಮಟ್ಟದ ತರಬೇತುದಾರರು ಮತ್ತು ಲೇಖಕರೂ ಆದ ರಾಜೇಂದ್ರ ಭಟ್ ಕೆ. “ಕನ್ನಡದಲ್ಲಿ ಹಲವು ಶ್ರೇಷ್ಠ ಕಾದಂಬರಿಕಾರರು ಇದ್ದರೂ ಭೈರಪ್ಪ ಜನಪ್ರಿಯತೆಯಲ್ಲಿ ಅವರೆಲ್ಲರಿಗಿಂತ ಮುಂದೆ ಇದ್ದರು. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ, ಶುದ್ಧ ಸಾಹಿತ್ಯ, ಯಾವುದೇ ಅಲಂಕಾರ, ಶಬ್ದಗಳ ಆಡಂಬರ, ಉತ್ಪ್ರೇಕ್ಷೆಗಳು ಇಲ್ಲದೆ ಅವರು 24 ಕಾದಂಬರಿಗಳನ್ನು ಬರೆದರು. ಸತ್ಯ ಪ್ರತಿಪಾದನೆಯೇ ಅವರ ಸಾಹಿತ್ಯದ ಉದ್ದೇಶವಾಗಿತ್ತು. ಅವರ ಎಲ್ಲಾ ಕಾದಂಬರಿಗಳು ಜನಪ್ರಿಯವಾಗಿ ಓದುಗರ ಪ್ರೀತಿಗೆ ಪಾತ್ರವಾದವು. ಭಾರತದ ಎಲ್ಲಾ ಭಾಷೆಗಳಿಗೆ ಅನುವಾದವಾದವು. ಅವರ ಆವರಣ, ಮಂದ್ರ, ಪರ್ವ, ಧರ್ಮಶ್ರೀ, ಸಾರ್ಥ, ಯಾನ ಮೊದಲಾದವುಗಳು ಭಾರತದ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಸ್ಥಾನ ಪಡೆದ ಕಾರಣ ಅವರು ಕನ್ನಡದ ಮೊದಲ ಪಾನ್ ಇಂಡಿಯಾ ಲೇಖಕ ಎಂದು ಕರೆಸಿಕೊಂಡರು. ಇವರನ್ನು ಕನ್ನಡದ ಲೆಜೆಂಡ್ ಕಾದಂಬರಿಕಾರ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷರಾದ ಕೆ. ಪಿ. ಶೆಣೈ ಮಾತನಾಡಿ “ಭೈರಪ್ಪ ತಮ್ಮ ಕಾದಂಬರಿಗಳ ಮೂಲಕ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಪ್ರತಿಪಾದಿಸಿದರು. ಒಂದೊಂದು ಕಾದಂಬರಿ ಬರೆಯಬೇಕಾದರೆ ಹಲವು ವರ್ಷಗಳ ಅಧ್ಯಯನ, ಓದು, ಪ್ರವಾಸಗಳನ್ನು ಮಾಡದೆ ಅವರು ಬರೆಯಲು ತೊಡಗುತ್ತಲೇ ಇರಲಿಲ್ಲ. ಅವರ ಪುಸ್ತಕಗಳನ್ನು ಓದಲು ಅದೇ ರೀತಿಯ ಮನೋಭೂಮಿಕೆ ಬೇಕು” ಎಂದರು.
ಸಾಹಿತ್ಯ ಸಂಘದ ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಾಡಿ ಭೈರಪ್ಪ ಅವರು ಮೂರು ಬಾರಿ ಕಾರ್ಕಳದ ಸಾಹಿತ್ಯ ಸಂಘದ ಕಾರ್ಯಕ್ರಮಗಳಿಗೆ ಬಂದದ್ದು, ಸಜ್ಜನಿಕೆಯನ್ನು ಮೆರೆದದ್ದು ಎಲ್ಲವನ್ನೂ ನೆನಪಿಸಿಕೊಂಡರು. ಪ್ರಧಾನ ಕಾರ್ಯದರ್ಶಿ ಪ್ರೊ. ಬಿ. ಪದ್ಮನಾಭ ಗೌಡ ಅವರು ಧನ್ಯವಾದ ನೀಡಿದರು. ಸಾಹಿತ್ಯ ಸಂಘದ ಗೌರವ ಅಧ್ಯಕ್ಷರಾದ ತುಕಾರಾಂ ನಾಯಕ್ ಅವರು ಅತಿಥಿಗಳನ್ನು ಗೌರವಿಸಿದರು.
ಸಭೆಯಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಮತ್ತು ಪ್ರಭಾಚಂದ್ರ ಜೈನ್ ಅವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಣೆ ಮಾಡಲಾಯಿತು. ಕು. ಶ್ರಾವ್ಯ ಪ್ರಾರ್ಥನೆ ಮಾಡಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.