ಬಂಟ್ವಾಳ : ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಮಂಗಳೂರು ಮತ್ತು ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು ಇದರ ಸಹಯೋಗದೊಂದಿಗೆ ‘ಕಲಾ ನಿಧಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 18 ಅಕ್ಟೋಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಚಿತ್ರಕಲಾ ಶಿಕ್ಷಣವನ್ನು ವೃತ್ತಿಯಾಗಿಸಿ ಸಾವಿರಾರು ಕಲಾವಿದರನ್ನು ಬೆಳಗಿಸಿ ಸಮಾಜಕ್ಕೆ ತಾನೊಂದು ಸ್ಪೂರ್ತಿದಾಯಕ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಸಾಧಕ ಚಿತ್ರಕಲಾ ಶಿಕ್ಷಕರಿಗೆ ನೀಡಲಾಗುವ ‘ಕಲಾನಿಧಿ ಪ್ರಶಸ್ತಿ’ಯನ್ನು ಈ ಬಾರಿ ಶ್ರೀ ವೆಂಕಿ ಪಲಿಮಾರು, ಶ್ರೀ ವಿ.ಕೆ. ವಿಟ್ಲ ಮತ್ತು ಶ್ರೀಮತಿ ರಾಜೇಶ್ವರಿ ಕೆ. ಇವರಿಗೆ ನೀಡಲಾಗುವುದು. ಶಶಿಧರ ಜಿ.ಎಸ್., ಡಾ. ತುಕಾರಾಂ ಪೂಜಾರಿ, ಶ್ರೀಮತಿ ಸುಶೀಲ ವಿಟ್ಲ, ಶಿವಶಂಕರ್ ರಾವ್ ಮಂಜಿ, ರಾಮ್ ಪ್ರಸಾದ್ ರೈ ತಿರುವಾಜೆ ಇವರುಗಳು ಗಣ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ದಿನ ಚಿತ್ರಕಲೆಯ ವಿವಿಧ ಆಯಾಮಗಳ ಪರಿಚಯ, ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಚಟುವಟಿಕೆ ಮಂಚಿ ಕೊಳ್ಳಾಡು ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕಲಾನಿಧಿ ಪ್ರಶಸ್ತಿ ಪುರಸ್ಕೃತರ ಚಿತ್ರಕಲಾ ಪ್ರದರ್ಶನ, ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಂದ ಮಾರ್ಗದರ್ಶನ ತರಬೇತಿ, ಬದುಕು ಕಟ್ಟಿಕೊಡುವ ಚಿತ್ರಕಲಾ ಶಿಕ್ಷಣದ ವಿವಿಧ ಮಜಲುಗಳ ಅನಾವರಣ ನಡೆಯಲಿದೆ.