ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಟೀಮ್ ಐಲೇಸಾ ಸಹಕಾರದೊಂದಿಗೆ ದಿನಾಂಕ 04 ಅಕ್ಟೋಬರ್ 2025ರಂದು ಕವಿ ಕುಸುಮಾಗ್ರಜ ಸಭಾಂಗಣದಲ್ಲಿ ಆಯೋಜಿಸಿದ್ದ ಕುಸುಮೋತ್ಸವ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ “ಮುಂಬಯಿ ವಿಶ್ವವಿದ್ಯಾಲಯದಲ್ಲಿ ನೂರಾರು ವಿಭಾಗಗಳಿವೆ. ನಮ್ಮ ಕನ್ನಡ ವಿಭಾಗ ಪುಟ್ಟಗೂಡಾದರೂ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ವಿಭಾಗಕ್ಕೆ ಇದೆ. ಜ್ಞಾನಂ ವಿಜ್ಞಾನ ಸಹಿತಂ ಎಂಬ ಮಾತಿನಂತೆ ಕಲಾ ಭಾಗ್ವತ್ ಇವರು ವಿಜ್ಞಾನಕ್ಷೇತ್ರದಿಂದ ಬಂದು ಸಾಹಿತ್ಯದ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಸರ್ವಕುತೂಹಲಿ. ಜಾನಪದ ನಮ್ಮ ಜೀವನಾಡಿ. ಇಂದು ಬಿಡುಗಡೆಗೊಂಡ ಕಲಾ ಭಾಗ್ವತ್ ಅವರ ‘ಮುಂಬಾಪುರಿ’ ಕೃತಿಯಲ್ಲಿ ನಗರ ಜಾನಪದವನ್ನು ಸೃಷ್ಟಿ ಮಾಡಿದ್ದಾರೆ. ಆಕರ್ಷಕ ಶೀರ್ಷಿಕೆಯೊಂದಿಗೆ ಕಲಾ ಭಾಗ್ವತ್ ಇವರು ಈ ಕೃತಿಯ ಮೂಲಕ ಮುಂಬಯಿಯ ದರ್ಶನವನ್ನು ಮಾಡಿಸುತ್ತಾರೆ. ಕನ್ನಡಕ್ಕೆ ಒಂದು ಮೌಲಿಕವಾದ ಕೃತಿಯ ಸೇರ್ಪಡೆಯಾಗಿದೆ. ಒಳ್ಳೆಯ ಕವಿ ಮಾತ್ರ ಇಂಥಹ ಗದ್ಯ ರಚನೆ ಮಾಡಬಲ್ಲ. ಈ ಕೃತಿಯ ಲೇಖಕಿ ಕಲಾ ಭಾಗ್ವತ್ ಇವರು ಸ್ವತ: ಒಬ್ಬ ಒಳ್ಳೆಯ ಕವಿಯಾಗಿರುವುದರಿಂದ ಸುಂದರವಾದ ಕೃತಿರೂಪುಗೊಂಡಿದೆ” ಎಂದು ನುಡಿದರು.
“ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಇವತ್ತು ನನಗೆ ಸಾಹಿತ್ಯದ ಒಡನಾಟದಲ್ಲಿ ಮಿಂದೇಳುವ ಭಾಗ್ಯ ದೊರಕಿತು. ಇಂದು ಒಂದು ಒಳ್ಳೆಯ ಪುಸ್ತಕವನ್ನು ಲೋಕಾರ್ಪಣೆಗೊಳಿಸುವ ಅವಕಾಶ ನನ್ನ ಪಾಲಿಗೆ ಒದಗಿದೆ ಬಂದಿದೆ. ನಾನು ವಾಣಿಜ್ಯದ ವಿದ್ಯಾರ್ಥಿ. ಇಲ್ಲಿ ಸಾಹಿತ್ಯದ ಸಾಂಗತ್ಯ ದೊರಕಿದ್ದು ಸಂತೋಷವಾಗಿದೆ. ಕನ್ನಡ ವಿಭಾಗದ ನಡೆಸುವ ಸಾಹಿತ್ಯದ ಕೆಲಸ ಬೆರಗು ಮೂಡಿಸುವಂತದ್ದು. ಈ ಸಂಸ್ಥೆಯ ಜೊತೆ ಸೇರಿ ಕಾರ್ಯಕ್ರಮ ನಡೆಸುವ ಹಂಬಲವೂ ನನಗಿದೆ” ಎಂದು ಕೃತಿ ಬಿಡುಗಡೆಗೊಳಿಸಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಇವರು ನುಡಿದರು.
ಕೃತಿಕಾರರಾದ ಕಲಾ ಭಾಗ್ವತ್ ರವರು ಮಾತನಾಡುತ್ತಾ “ನಾನು ಕಂಡದ್ದನ್ನು ಕಡೆದು ಮಥಿಸಿ ಬರೆದು ಪತ್ರಿಕೆಗೆ ಕಳುಹಿಸುವಾಗ ನಿರಾಳವೆನಿಸುತ್ತಿತ್ತು. ಈ ಬರಹದಲ್ಲಿ ತೊಡಗಿಸಿಕೊಂಡಾಗ ಮುಂಬಯಿಯ ಮೌನ, ಸಂತೋಷ, ಸಂಕಟ, ಕೇಕೆ ಕುಣಿತಗಳು ನನ್ನೆದುರು ಬಂದು ನಿಂತಿವೆ. ಕ್ಷೇತ್ರ ಕಾರ್ಯ ಮಾಡುವಾಗ ಆದ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ವಿಶ್ವವಾಣಿಗೆ, ವಿರಾಮ ಪುರವಣಿಯ ಸಂಪಾದಕರಾದ ಶಶಿಧರ ಹಾಲಾಡಿಯವರು, ಬುದ್ದಿ-ಭಾವವನ್ನು ಹದವಾಗಿ ಬಳಸುವ ರೀತಿಯನ್ನು ಕೌಶಲವನ್ನು ಹೇಳಿಕೊಟ್ಟ ಡಾ. ಜಿ.ಎನ್. ಉಪಾಧ್ಯ ಇವರಂತಹ ಗುರುಗಳನ್ನು ಪಡೆದ ನಾವು ಭಾಗ್ಯವಂತರು” ಎಂದು ಈ ಕೃತಿ ರಚನೆಯ ಹಿಂದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಕೃತಿಯ ಕುರಿತು ಮಾತನಾಡಿದ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಇವರು “ಕಲಾ ಅವರು ಮುಂಬಯಿಯ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ವರೂಪಗಳನ್ನು ಸಾವಯವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ” ಎಂದರು. ಇದೇ ಸಂದರ್ಭದಲ್ಲಿ ಮುಂಬಯಿಯ ಪ್ರತಿಭಾವಂತ, ಅಪೂರ್ವ ಸಹೋದರರಾದ ಮೋಹನ ಮಾರ್ನಾಡ್, ವಾಸು ಮಾರ್ನಾಡ್ ಹಾಗೂ ಸುರೇಂದ್ರ ಕುಮಾರ್ ಮಾರ್ನಾಡ್ ಇವರ ಕಲಾಸೇವೆಯನ್ನು ಗುರುತಿಸಿ ವಿಶೇಷವಾಗಿ ಸತ್ಕರಿಸಲಾಯಿತು. ಕುಸುಮೋತ್ಸವದ ಉತ್ಸವ ಮೂರ್ತಿ ಕುಸುಮೋದರ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.