ಮಂಚಿ : ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇವರ ಸಹಕಾರದೊಂದಿಗೆ ಆಯೋಜಿಸಿದ,’ಕಲಾ ನಿಧಿ-25′ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18 ಅಕ್ಟೋಬರ್ 2025 ರಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ನಡೆಯಿತು.
ಖ್ಯಾತ ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಮಾತನಾಡಿ “ವಿದ್ಯಾರ್ಥಿಗಳು ಕಲೆ ಸಾಹಿತ್ಯ ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸೃಜನಶೀಲವಾಗಿ ಆಲೋಚಿಸಬೇಕು. ಆಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಜಿ. ಎಸ್. ಶಶಿಧರ್ ಮಾತನಾಡಿ “ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಕಲಾಕೃತಿ ಮೂಲಕ ತಿಳಿಸಬಹುದು. ಭಾವನೆಗಳನ್ನು ಪ್ರಸ್ತುತಪಡಿಸಲು ಒಂದು ಚಿತ್ರ ಬಹುದೊಡ್ಡ ಮಾಧ್ಯಮ. ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಪ್ರತಿಯೊಬ್ಬರು ಮಗ್ನರಾಗಬೇಕು” ಎಂದು ನೆರೆದಿದ್ದ ಶಿಕ್ಷಕ ವೃಂದಕ್ಕೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ 2023ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಕಲಾವಿದ ಶ್ರೀ ವೆಂಕಿ ಪಲಿಮಾರು, 2024ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಶ್ರೀ ವಿ. ಕೆ. ವಿಟ್ಲ ಹಾಗೂ 2025 ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಶ್ರೀಮತಿ ರಾಜೇಶ್ವರಿ ಕೆ. ಇವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕಲಾವಿದ ವೆಂಕಿ ಪಲಿಮಾರು ಮಾತನಾಡಿ “ಹಿರಿಯ ಕಲಾವಿದರು ನೀಡಿರುವ ಈ ಪ್ರಶಸ್ತಿ ನನಗೆ ತುಂಬಾ ಸಂತೋಷ ವನ್ನುಂಟುಮಾಡಿದೆ” ಎಂದರು.
ವಿ. ಕೆ. ವಿಟ್ಲ ಮಾತನಾಡಿ ಜಿಲ್ಲೆಯ ಮಹಾನ್ ಕಲಾವಿದರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಜೀವನದ ಸುಂದರ ಘಳಿಗೆ” ಎಂದರು.
ಶ್ರೀಮತಿ ರಾಜೇಶ್ವರಿ ಕೆ. ಮಾತನಾಡಿ “ತನ್ನ ಈ ಕಲೆಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ ಮಹಾಲಸಾ ಶಾಲೆಯ ಗುರುಗಳಾದ ಶ್ರೀ ಪುರುಷೋತ್ತಮ ಕಾರಂತ ಇವರಿಗೆ ಈ ಸಂದರ್ಭದಲ್ಲಿ ಗೌರವ ವಂದನೆ ಸಲ್ಲಿಸುತ್ತೇನೆ” ಎಂದರು.
ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸುಶೀಲಾ ವಿಟ್ಲ ಮಾತನಾಡಿ “ಈ ಅದ್ಭುತಪೂರ್ವ ಸಮಾರಂಭ ನಮ್ಮ ಶಾಲೆಯಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮದಿಂದ ಸ್ಪೂರ್ತಿಗೊಂಡು ವಿದ್ಯಾರ್ಥಿಗಳು ಮುಂದೆ ದೊಡ್ಡ ಕಲಾವಿದರಾಗಬೇಕು” ಎಂದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಶಂಕರ ರಾವ್ ಮಂಚಿ ಮಾತನಾಡಿ “ನಮ್ಮ ಶಾಲೆಯಲ್ಲಿ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಕಲಾವಿದರ ಹಬ್ಬ ರೂಪಗೊಂಡಿದೆ. ಇಂದು ಪ್ರಶಸ್ತಿ ಪಡೆದ ಕಲಾವಿದರಿಗೆ ರಾಜ್ಯ ರಾಷ್ಟ್ರಮಟ್ಟದ ಪುರಸ್ಕಾರಗಳು ಲಭಿಸಲಿ.” ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿತ್ರಕಲಾವಿದ ಗಣೇಶ ಸೋಮಯಾಜಿ ಮಾತನಾಡಿ “ಕಾಯಕವೇ ಕೈಲಾಸವೆಂದು ಕಲಾ ಸೇವೆಗೈದ ಮಹನೀಯರಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿದ ಕಲಾವಿದರಿಗೆ ಅಭಿನಂದನೆಗಳು” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕಲಾವಿದ ಶಿಕ್ಷಕ ಅರವಿಂದ ಕುಡ್ಲ ಮಕ್ಕಳಿಗೆ ಓರಿಗಾಮಿ ಕಲೆಯ ಬಗ್ಗೆ ತರಬೇತಿ ನೀಡಿದರು. ಗೋಪಾಡ್ಕರ್ ಕ್ರಿಯೇಟಿವ್ ಆರ್ಟ್ ಬಗ್ಗೆ ಮಾಹಿತಿ ನೀಡಿ ಚಿತ್ರರಚನೆಯ ಪಂಥ ನೀಡಿದರು. ವಿಜೇತ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಪ್ರಶಸ್ತಿಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಚಿತ್ರಕಲಾ ಪ್ರದರ್ಶನ ನಡೆಯಿತು. ನೆರೆದ ಕಲಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಮೋಹನ್ ಕುಮಾರ್ ಪೆರ್ಮುದೆ ಸ್ವಾಗತಿಸಿ, ಕಲಾ ನಿಧಿ ಗೋಪಾಡ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಶೆಟ್ಟಿ, ಧನ್ಯವಾದ ಸಮರ್ಪಿಸಿದರು. ಕಲಾವಿದ ತಾರಾನಾಥ್ ಕೈರಂಗಳ ನಿರೂಪಿಸಿದರು.