ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.) ದೇಲಂಪಾಡಿ ಇದರ ವತಿಯಿಂದ 81ನೆಯ ವಾರ್ಷಿಕೋತ್ಸವವನ್ನು ದಿನಾಂಕ 25 ಅಕ್ಟೋಬರ್ 2025ರಂದು ಬೆಳಗ್ಗೆ 8-00 ಗಂಟೆಗೆ ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ‘ಕನ್ನಡಿಯಲ್ಲಿ ಕನ್ನಡಿಗ’ ಐದನೇ ಸಂಚಿಕೆ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ.
ಬೆಳಗ್ಗೆ 9-30 ಗಂಟೆಗೆ ಸಂಘದ ಸದಸ್ಯರು ಮತ್ತು ಸ್ಥಳೀಯ ಪ್ರತಿಭೆಗಳಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಕುಣಿತ ಭಜನೆ, ಯಕ್ಷಗಾನಾರ್ಚನೆ ಮತ್ತು ನೃತ್ಯಾರ್ಚನೆ ಪ್ರಸ್ತುತಗೊಳ್ಳಲಿದೆ. ಡಾ. ಪ್ರಮೀಳಾ ಮಾಧವ್ ಸಂಪಾದಿಸಿದ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯನ್ನು ಹಿರಿಯ ವಿದ್ವಾಂಸ ಪ್ರೊ. ವಿ.ಬಿ. ಅರ್ತಿಕಜೆ ಇವರು ಬಿಡುಗಡೆ ಮಾಡಲಿದ್ದಾರೆ. ಅಪರಾಹ್ನ 2-15 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಜೆ 4-30 ಗಂಟೆಗೆ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಕೃಷ್ಣಾನುಗ್ರಹ’ ಮತ್ತು ‘ರತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.