ಸುರತ್ಕಲ್ : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭವನ್ನು ದಿನಾಂಕ 26 ಅಕ್ಟೋಬರ್ 2025ರಂದು ಪೂರ್ವಾಹ್ನ 9-00 ಗಂಟೆಗೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರು ದೀಪ ಪ್ರಜ್ವಲನೆಯೊಂದಿಗೆ ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಗಂಟೆ 9-15ಕ್ಕೆ ಶ್ರೀ ಶಾರದಾ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಮತ್ತು ಕಲಾವಿದೆ ಶ್ರೀಮತಿ ಅಪೂರ್ವ ಆರ್. ತಂತ್ರಿ ಇವರಿಂದ ‘ನೃತ್ಯ ಕುಂಚ’ ಪ್ರಸ್ತುತಗೊಳ್ಳಲಿದೆ. 10-00 ಗಂಟೆಗೆ ಅತ್ತಾವರದ ಚಕ್ರಪಾಣಿ ನೃತ್ಯ ಕಲಾ ಕೇಂದ್ರದ ನೃತ್ಯ ನಿರ್ದೇಶಕರಾದ ಕಲಾರತ್ನ ವಿದ್ವಾನ್ ಸುರೇಶ್ ಅತ್ತಾವರ ಇವರ ಶಿಷ್ಯ ವೃಂದದವರಿಂದ ‘ಮಣಿಕಂಠ ಜನನ’ ನೃತ್ಯ ರೂಪಕ, 11-00 ಗಂಟೆಗೆ ಕರ್ನಾಟಕ ಕರಾವಳಿಯ ಖ್ಯಾತ ಭರತನಾಟ್ಯ ನೃತ್ಯ ಸಂಸ್ಥೆಯವರಿಂದ ಸಮೂಹ ನೃತ್ಯ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 2-00 ಗಂಟೆಗೆ ನಾಟ್ಯನಿಲಯಂ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ಭರತನಾಟ್ಯ, ಕೂಚಿಪುಡಿ, ಮೋಹಿನಿಆಟ್ಟಂ ಜುಗಲ್ ಬಂದಿ, 3-00 ಗಂಟೆಗೆ ‘ಯಕ್ಷ ವೈಭವ’ದಲ್ಲಿ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ನರಕಾಸುರ ಮೋಕ್ಷ’ ಪ್ರಸಂಗದ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 5-30 ಗಂಟೆಗೆ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ನಡೆಯಲಿದೆ.