ಸೊರಬ : ಶ್ರೀ ಎಸ್. ಬಂಗಾರಪ್ಪ ಫೌಂಡೇಷನ್ (ರಿ.) ಹಾಗೂ ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆ ಇದರ ವತಿಯಿಂದ ಎಸ್. ಬಂಗಾರಪ್ಪ ಇವರ ಜನ್ಮ ದಿನೋತ್ಸವವನ್ನು ದಿನಾಂಕ 26 ಅಕ್ಟೋಬರ್ 2025ರಂದು ಶಿವಮೊಗ್ಗ ಜಿಲ್ಲೆಯ ಸೊರಬದ ಬಂಗಾರಧಾಮದಲ್ಲಿ ಆಯೋಜಿಸಲಾಗಿದೆ.
ಎಸ್. ಬಂಗಾರಪ್ಪ ಫೌಂಡೇಷನ್ ಇದರ ಅಧ್ಯಕ್ಷರಾದ ಎಸ್. ಮಧು ಬಂಗಾರಪ್ಪ ಇವರ ಅಧ್ಯಕ್ಷತೆಯಲ್ಲಿ ಈ ಸಮಾರಂಭವನ್ನು ಸಚಿವರಾದ ಕೆ.ಹೆಚ್. ಮುನಿಯಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಪ್ರಸಿದ್ಧ ಸಾಹಿತಿಗಳಾದ ಡಾ. ಕಾಳೇಗೌಡ ನಾಗವಾರ ಇವರಿಗೆ ‘ಸಾಹಿತ್ಯ ಬಂಗಾರ’, ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಗೆ ‘ಧರ್ಮ ಬಂಗಾರ’, ಚೌಡಿಕೆ ಕಲಾವಿದರಾದ ಶ್ರೀಮತಿ ರಾಧಾಬಾಯಿ ಮಾದರ್ ಇವರಿಗೆ ‘ಜಾನಪದ ಬಂಗಾರ’, ರಂಗಭೂಮಿ ಕಲಾವಿದರಾದ ಜೇವರ್ಗಿ ರಾಜಣ್ಣ ‘ಕಲಾ ಬಂಗಾರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಳಿಗ್ಗೆ 10-30 ಗಂಟೆಗೆ ಸೊರಬದಲ್ಲಿರುವ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ‘ಬಂಗಾರಪ್ಪನವರ ಚಿಂತನೆಗಳು’ ವಿಚಾರ ಸಂಕಿರಣ ನಡೆಯಲಿದೆ. ಪ್ರಸಿದ್ಧ ಕವಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಡಾ. ಕಾಳೇಗೌಡ ನಾಗವಾರ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಹೆಚ್.ಎಲ್. ಪುಷ್ಪ ಮತ್ತು ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಮಂಜುನಾಥ್ ಇವರು ‘ಸುಸ್ಥಿರ ಬದುಕು ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಪ್ರಸ್ತುತಗೊಳ್ಳಲಿದೆ.

