ಧಾರವಾಡ : ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಣ್ಣದ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಯುವಕಲಾವಿದರ ಚಿತ್ರಕಲಾ ಶಿಬಿರವನ್ನು ದಿನಾಂಕ 29 ಅಕ್ಟೋಬರ್ 2025ರಿಂದ 31 ಅಕ್ಟೋಬರ್ 2025ರವರೆಗೆ ಧಾರವಾಡದ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಚಿತ್ರಕಲಾ ಶಿಬಿರವನ್ನು ಏರ್ಪಡಿಸಲಾಗಿದೆ.
ದಿನಾಂಕ 29 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರುವುದು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಹಾಗೂ ಧಾರವಾಡ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಶಶಿಧರ ತೋಡಕರ ಭಾಗವಹಿಸುತ್ತಾರೆ. ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಚಿತ್ರಕಲಾ ಶಿಲ್ಪಿ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ.) ಟ್ರಸ್ಟಿನ್ ಸದಸ್ಯರಾದ ಡಾ. ಬಿ.ಎಚ್. ಕುರಿಯವರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುವರು ಹಾಗೂ ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿರುವರು. ರಾಜ್ಯ ಮಟ್ಟದ ಚಿತ್ರಕಲಾವಿದರ ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ ಯುವ ಚಿತ್ರಕಲಾವಿದರು ಭಾಗವಹಿಸುವರು. ಕಲಾವಿದರು ರಚಿಸಿರುವ ಕಲಾಕೃತಿಗಳ ಪ್ರದರ್ಶನ ಹಾಗೂ ಟ್ರಸ್ಟಿನ ಕಲಾಕೃತಿಗಳ ಪ್ರದರ್ಶನವನ್ನು ದಿನಾಂಕ 01 ನವೆಂಬರ್ 2025ರಿಂದ 10 ನವೆಂಬರ್ 2025ರವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಚಿತ್ರಕಲಾ ಪ್ರದರ್ಶನ ಭವನದಲ್ಲಿ ಏರ್ಪಡಿಸಲಾಗಿದೆ.
ಕಲಾಕೃತಿಗಳ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 1 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಚಿತ್ರಕಲಾ ಪ್ರದರ್ಶನ ಭವನದಲ್ಲಿ ನೆರವೇರುವುದು. ಕಾರ್ಯಕ್ರಮದಲ್ಲಿ ಹಿರಿಯ ಚಿತ್ರಕಲಾವಿದ ಡಾ. ಎಸ್.ಸಿ. ಪಾಟೀಲ ಇವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಇವರು ಭಾಗವಹಿಸುವರು. ಟ್ರಸ್ಟಿನ್ ಅಧ್ಯಕ್ಷ ಬಿ. ಮಾರುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿತ್ರಕಲಾವಿದರು, ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬಹುದು.
