ಯಡಾಡಿ ಮತ್ಯಾಡಿ : ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಆಯೋಜಿಸಿದ ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ ಕಾರ್ಯಕ್ರಮ ದಿನಾಂಕ 25 ಅಕ್ಟೋಬರ್ 2025ರಂದು ಯಡಾಡಿ ಮತ್ಯಾಡಿಯ ಸುಜ್ಙಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀವಟಿಗೆಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಹಿರಿಯ ಯಕ್ಷ ಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಮಾತನಾಡಿ “ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕಳೆದ ಹಲವಾರು ವರ್ಷಗಳಿಂದ ತಾವು ಕಂಡ ಪರಿಶುದ್ಧ ಕಲೆಯನ್ನು ಮಕ್ಕಳಿಗೆ ಕಲಿಸಿ ಭವಿಷ್ಯಕ್ಕೆ ದಾಟಿಸುವುದಕ್ಕಾಗಿ ಶಾಲೆ ಶಾಲೆಗಳಲ್ಲಿ ಯಶಸ್ವೀ ಕಲಾವೃಂದ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ. ಕಲೆ ಉಳಿಯಬೇಕಾದರೆ ಮೂಲ ಸತ್ವದ ಅರಿವು ಅತೀ ಅಗತ್ಯ. ಯಕ್ಷಗಾನದಲ್ಲಿನ ಪ್ರಸಂಗ-ಪ್ರಯೋಗದ ಮಿತಿಯನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ನೀಡುತ್ತಿರುವುದು ಪ್ರಶಂಸನೀಯ” ಎಂದರು.
ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ “ಪುರಾತನ ಕಾಲದಲ್ಲಿ ಮನೋರಂಜನೆಗಾಗಿ ಅನೇಕ ಕಲೆಗಳು ಹುಟ್ಟಿಕೊಂಡವು. ಆ ಕಾಲಘಟ್ಟದಲ್ಲಿ ಪೂರ್ಣಾವಧಿಯಲ್ಲಿ ಪೂರ್ಣಕಾಲಿಕವಾಗಿ ಕಲೆಯನ್ನು ಆಸ್ವಾದಿಸುತ್ತಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಅವಕಾಶಗಳಿಂದ ಮನುಜರು ವಂಚಿತರಾಗಿದ್ದಾರೆ. ಸರ್ವರಿಗೂ ಕಲೆ ಒಲಿಯದು. ಆದರೆ ತಕ್ಕ ಮಟ್ಟಿನ ಕಲಿಕೆ ಮಾಡಿಕೊಂಡರೆ, ಅಥವಾ ಪ್ರೇಕ್ಷಕರಾಗಿ ಆಸ್ವಾಧಿಸುತ್ತಾ ಹೋದರೆ ಒಳ್ಳೆಯ ಪ್ರೇಕ್ಷಕನಾಗಬಹುದು” ಎಂದರು.
ಸುಜ್ಞಾನದ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಖಜಾಂಜಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ., ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಉಪಸ್ಥಿತರಿದ್ದರು. ರಜತ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವೀ ಕಲಾವೃಂದದ ಬಾಲರಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ರಂಗ ಪ್ರದರ್ಶನಗೊಂಡಿತು.

