ಬೆಂಗಳೂರು : ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಮ್ಮಟ, ತಾಳಮದ್ದಳೆ, ಯಕ್ಷಗಾನ ಉತ್ಸವ, ಗಾನ ವೈಭವ, ಪುಸ್ತಕ ಬಿಡುಗಡೆ, ನಿರಂತರ ಯಕ್ಷಗಾನ ತರಬೇತಿ ಹೀಗೆ ಸದಾ ಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಮೊದಲ ಬಾರಿಗೆ ಇಸ್ರೇಲಿನಲ್ಲಿ ದಿನಾಂಕ 02ರಿಂದ 04 ನವೆಂಬರ್ 2025ರ ತನಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಆಶ್ರಯದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆಯಲಿದೆ.

ಈ ಪ್ರದರ್ಶನವು ಇಸ್ರೇಲ್‌ನ ಆಶ್ಕೆಲೋನ್, ಪೆಟಾಕ್‌ಟಿಕ್ವಾ ನಗರದಲ್ಲಿ ‘ಕಂಸವಧೆ’, ‘ಅಭಿಮನ್ಯು ಕಾಳಗ’ ಮತ್ತು ಯಕ್ಷದೇಗುಲ ಪರಿಕಲ್ಪನೆಯ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದರಾಗಿ ಕೆ. ಮೋಹನ್, ಸುದರ್ಶನ ಉರಾಳ, ಸುಜಯೀಂದ್ರ ಹಂದೆ, ಉದಯ ಹೆಗಡೆ ಕಡಬಾಳ, ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್, ದಿನೇಶ್ ಕನ್ನಾರ್, ಸುದೀಪ ಉರಾಳ, ದೇವರಾಜ್ ಕರಬ, ವಿಶ್ವನಾಥ ಉರಾಳ, ಶ್ರೀರಾಮ ಹೆಬ್ಬಾರ್ ಮತ್ತು ಶ್ರೀವಿದ್ಯಾರವರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.

